ಭೂ ಕಬಳಿಕೆ : ಕುಮಾರ ರಾಜಿನಾಮೆಗೆ ಎಚ್ಕೆ ಪಟ್ಟು
ಹುಬ್ಬಳ್ಳಿ : ರೈತರ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೆ ರಾಜಿನಾಮೆ ನೀಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಸರ್ಕಾರ ಭೂಕಬಳಿಕೆ ಮಾಡಿದ್ದಕ್ಕೆ ಸಾಕ್ಷಿ ತೋರಿಸಿದರೆ ರಾಜಿನಾಮೆ ನೀಡುವುದಾಗಿ ಹೇಳಿದ್ದ ಮಾತನ್ನು ಕುಮಾರಸ್ವಾಮಿ ಉಳಿಸಿಕೊಳ್ಳಬೇಕು ಎಂದು ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬೋರ್ಡ್ ಗಾಂಧಿ ಸಿಟಿ ಡೆವಲಪರ್ಸ್‌ಗೆ ಬಾಕಿ ಉಳಿದ ಹಣ ನೀಡಬೇಕೆಂದು ಬರೆದ ಪತ್ರದಲ್ಲಿ, 5 ಕೋಟಿ ರು. ಈಗಾಗಲೆ ಜಮೆಯಾಗಿದ್ದು, ಉಳಿದ 16.56 ಕೋಟಿ ರು. ಪಾವತಿಸಬೇಕೆಂದು ತಿಳಿಸಿದೆ. ಇದಕ್ಕಿಂತ ಪುರಾವೆ ಬೇಕೆ? ಇನ್ನೂ ಬೇಕಾದಷ್ಟು ಪುರಾವೆಗಳಿವೆ. ಭೂಕಬಳಿಕೆ ಮಾಡಿಲ್ಲ ಎಂದು ಹೇಳಿದ್ದು ಶುದ್ಧಾಂಗ ಶುದ್ಧ ಸುಳ್ಳು ಎಂದು ಅವರು ಕೆಂಡ ಕಾರಿದರು.
2001ರಿಂದ 2006ರವರೆಗೆ 2000 ಎಕರೆಯಷ್ಟೂ ಸ್ವಾಧೀನಪಡಿಸಿಕೊಂಡಿರಲಿಲ್ಲ, ಆದರೆ 2006-2007ರಲ್ಲಿ ಕೈಗಾರಿಕೆಗಾಗಿ ಮತ್ತು ಸಿಂಗಲ್ ಯುನಿಟ್ ಕಾಂಪ್ಲೆಕ್ಸ್‌ಗಾಗಿ 27932 ಎಕರೆಯಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಮಹದಾಯಿ ಯೋಜನೆ ಕುರಿತಂತೆ ಸೋನಿಯಾ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ನಿಯೋಗ ಸೋನಿಯಾ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದೆ, ಅವರೂ ಪ್ರಧಾನಿ ಮತ್ತು ಕೇಂದ್ರ ನೀರಾವರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕಾಗಿ ಕೇಳಿಕೊಳ್ಳುವುದಾಗಿ ಭರವಸೆ ನೀಡಿದರು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications