ಟಾಟಾ ಕಂಪನಿಗೆ ಹೆಚ್ಚುವರಿ ಭೂಮಿ ನೀಡಲು ರೈತರ ನಕಾರ
ಧಾರವಾಡ : ರಾಜ್ಯ ಸರ್ಕಾರ ಟಾಟಾ ಮೋಟಾರ್ಸ್ ಸಂಸ್ಥೆಗೆ ನೀಡಿರುವ 300 ಎಕರೆ ಹೆಚ್ಚುವರಿ ಜಮೀನು ವಿವಾದಕ್ಕೆ ತಿರುಗಿದ್ದು, ರೈತರು ತಮ್ಮ ಜಮೀನು ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸಿದ್ದಾರೆ.
ಯೋಜನೆಗಾಗಿ 1981ರಲ್ಲೇ ಟಾಟಾ ಸಂಸ್ಥೆಗೆ 600 ಎಕರೆ ಭೂಮಿ ಲಭಿಸಿದ್ದು, ಧಾರವಾಡದ ಬಳಿಯ ಬೇಲೂರಿನಲ್ಲಿ ಕೇವಲ 100 ಎಕರೆ ಭೂಮಿಯನ್ನು ಬಳಸಿ, ಟೆಲ್ಕೋ ಸಹಯೋಗದೊಂದಿಗೆ ಘಟಕವನ್ನು ಸ್ಥಾಪಿಸಿಸಲಾಗಿದೆ. ಭೂಸ್ವಾಧೀನ ಮಾಡಿಕೊಳ್ಳವಾಗ ಟಾಟಾ ಕಂಪೆನಿ ಪ್ರತಿ ಎಕರೆಗೆ 12 ಸಾವಿರ ರೂಪಾಯಿ ನೀಡಿದೆ. ಇನ್ನೂ ಕೆಲವರಿಗೆ ಅಷ್ಟೂ ಸಿಕ್ಕಿಲ್ಲ. ಒಟ್ಟಿನಲ್ಲಿ ಸ್ವಾಧೀನಮಾಡಿಕೊಂಡ ಭೂಮಿ ದುಡ್ಡು ಬಂದರೆ ಸಾಕು ಎಂಬಂತಾಗಿತ್ತು. ಹಲವರಿಗೆ ಕಳಪೆ ಜಮೀನು ಎಂದು ಹೇಳಿ ಹಣ ನೀಡಿಲ್ಲ. ಇದರಿಂದ ಇಷ್ಟೆಲ್ಲ ಹಿಂಸೆ ಅನುಭವಿಸಿಯಾಗಿದೆ.
ಈಗ ಮತ್ತೆ 300 ಎಕರೆ ಹೆಚ್ಚುವರಿ ಭೂಮಿ ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಮತ್ತೆ ಟಾಟಾ ಸಂಸ್ಥೆ ಕಿರಿಕಿರಿ ನಮಗೆ ಬೇಡವಾಗಿದೆ. ನಾವು ಜಮೀನು ಬಿಟ್ಟುಕೊಡುವುದಿಲ್ಲ ಎಂದು ನೀರಲಕಟ್ಟೆ, ಮುಮ್ಮಿಗಟ್ಟಿ, ಸಿಂಗನಹಳ್ಳಿ, ಗರಗ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಟಾ ಸಂಸ್ಥೆ ಯೋಜನೆಗಾಗಿ ಜಮೀನು ಕಳೆದುಕೊಂಡವರ ಮನೆಗೊಬ್ಬರಿಗೆ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಆನಂತರ ಗುತ್ತಿಗೆ ಆಧಾರದ ಮೇಲೆ ಕೆಲವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಇದಲ್ಲದೆ ಕೇವಲ ಐಟಿಐ ಆದವರಿಗೆ ಮಾತ್ರ ಕೆಲಸ ಎಂದು ತಂಟೆ ತೆಗೆದಿದೆ. ಕಡೆಗೆ ಐಟಿಐ ಆದವರಿಗೂ ಕೆಲಸ ನೀಡದೆ ಬಿಹಾರ, ಜೆಮ್‌ಷಡ್‌ಪುರದವರನ್ನು ಕೆಲಸಕ್ಕೆ ತೆಗೆದುಕೊಂಡು ನಮಗೆ ಅನ್ಯಾಯ ಮಾಡಲಾಗಿದೆ ಎಂಬುದು ರೈತರ ಅಳಲು.
ಈ ವಿಚಾರದಲ್ಲಿ ಸರ್ಕಾರಗಳು ಬರೀ ಭರವಸೆ ನೀಡುತ್ತವಷ್ಟೆ. ಆದರೆ ಇಂತಹ ಯೋಜನೆಗಳಿಂದಾಗುವ ಅನ್ಯಾಯ ತಡೆಯುವುದಿಲ್ಲ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ಈ ಸಲ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
ಹೀಗಿದೆ ಯೋಜನೆ...
ಟಾಟಾ ಸಂಸ್ಥೆ ವಕ್ತಾರರೊಬ್ಬರು ಮಾತನಾಡಿ, ಈಗ ಆರಂಭಿಸಲು ಉದ್ದೇಶಿಸಿರುವ ಘಟಕದಲ್ಲಿ, ಲಕ್ಸುರಿಬಸ್, ಮಿನಿ ಬಸ್ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಹಗುರ ವಾಹನಗಳನ್ನು ತಯಾರಿಸಲಾಗುವುದು. ಇದಕ್ಕಾಗಿ ಸುಮಾರು 2,734 ಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದ್ದು, ಅಂದಾಜು 36,875 ಜನರಿಗೆ ಉದ್ಯೋಗ ದೊರೆಯಲಿದೆ. ಐಟಿಐ ಆದವರನ್ನು ಅರ್ಜಿ ಹಾಕುವಂತೆ ಗ್ರಾಮದ ಮುಖ್ಯಸ್ಥರಿಗೆ ಹೇಳಲಾಗುವುದು ತಿಳಿಸಿದರು.
ರೈತರನ್ನು ರಕ್ಷಿಸೀತೇ ಸರ್ಕಾರ...?
ಮೂವರು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿ, ಟಾಟಾ ಸಂಸ್ಥೆಗೆ ನೀಡಬಹುದಾದ ಸುಂಕ ವಿನಾಯತಿ(ಮುಖ್ಯವಾಗಿ ವ್ಯಾಟ್ ರಹಿತ ತೆರಿಗೆ), ಇನ್ನಿತರ ಸೌಲಭ್ಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳಿವೆ.
ಆದರೆ ಯೋಜನೆಯಿಂದ ಆಗಬಹುದಾದ ಅನ್ಯಾಯಗಳ ಕಡೆಗೂ ಸರ್ಕಾರ ಗಮನಹರಿಸುವುದೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಬಂಗಾಳದ ಸಿಂಗೂರು ಭೂ ವಿವಾದದಲ್ಲಿ ಭಾರೀ ಸುದ್ದಿಯಾಗಿದ್ದ ಟಾಟಾ ಮೋಟಾರ್ಸ್ ಕಂಪನಿ, ಕರ್ನಾಟಕಕ್ಕೆ ಯಾವ ರೀತಿ ಉಪಯೋಗವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications