ದಟ್ಸ್‌ಕನ್ನಡ ಫಲಶೃತಿ ಚೆಸ್ ಪ್ರತಿಭೆ ಮಾ.ಗಿರೀಶ್ ಕೌಶಿಕ್‌ಗೆ ನೆರವಿನ ಭರವಸೆ
ಬೆಂಗಳೂರು : ವಿಶ್ವ ಚೆಸ್ ಚಾಂಪಿಯನ್(10 ವರ್ಷ ವಯೋಮಿತಿ) ಗಿರೀಶ್ ಕೌಶಿಕ್ ಅವರ ಮುಂದಿನ ಭವಿಷ್ಯಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ, ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ(ಡಿವೈಎಸ್‌ಎಸ್) ಮುಖ್ಯಸ್ಥ ಕುಮಾರ್‌ನಾಯ್ಕ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಹೆಮ್ಮೆಯ ಗಿರೀಶ್ ಕೌಶಿಕ್ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ. ಬಾಲ ಚೆಸ್ ಪಟುವಿನ ಭವಿಷ್ಯದ ನೀಲಿ ನಕಾಶೆಯನ್ನು ತಯಾರಿಸಲು, ಚೆಸ್ ಆಟಗಾರರು ಹಾಗೂ ಡಿವೈಎಸ್‌ಎಸ್‌ನ ಅಧಿಕಾರಿಗಳುಳ್ಳ ಸಮಿತಿ ರಚನೆ ಮಾಡುವಂತೆ ಸರ್ಕಾರವನ್ನು ಕೋರಿದ್ದೇವೆ ಎಂದರು.
ಗಿರೀಶ್ ಅವರಿಗೆ ಅಗತ್ಯವಿರುವ ಆರ್ಥಿಕ ನೆರವು, ತರಬೇತುದಾರರ ಬಗ್ಗೆ ಸಮಿತಿಯು ಗಮನಹರಿಸಲಿದೆ. ಆರ್ಥಿಕ ನೆರವಿಗೆ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಪ್ರಾಯೋಜಕರನ್ನು ಸಂಪರ್ಕಿಸಲಾಗುವುದು. ಚಿಕ್ಕ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿರುವ ಗಿರೀಶ್ ಅವರಿಗೆ ನಮ್ಮ ಪೂರ್ಣ ಬೆಂಬಲವಿದೆ ಎಂದು ಎಂದು ಕುಮಾರ್‌ನಾಯ್ಕ್ ತಿಳಿಸಿದರು.
ಖುಷಿ : ಗಿರೀಶ್ ಕೌಶಿಕ್ ಅವರ ತಂದೆ ಅರುಣ್ ಕೌಶಿಕ್ ಸರ್ಕಾದಿಂದ ನೆರವಿನ ಭರವಸೆ ಸಿಕ್ಕ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ, ತಮ್ಮ ಮಗನಿಗೆ ಬೆಂಬಲ ನೀಡಿದ ಎಲ್ಲರಿಗೂ ವಂದನೆಗಳು. ಚೆಸ್ ಪ್ರತಿಭೆ ಬೆಳಗಲು ಇದೇ ರೀತಿ ಸಹಕಾರ ನೀಡಿ ಎಂದು ಕೋರಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications