90.4: ಮಣ್ಣಿನ ಮಕ್ಕಳಿಗಾಗಿ ಎಫ್‌ಎಂ ರೇಡಿಯೋ ವಾಹಿನಿ
ಧಾರವಾಡ : ದೇಶದಲ್ಲೇ ಪ್ರಥಮ ಎನ್ನಬಹುದಾದ ರೈತರಿಗಾಗಿ ಪ್ರತ್ಯೇಕ ರೇಡಿಯಾವಾಹಿನಿ( ಎಫ್‌ಎಂ 90.4) ಗೆ ಕೃಷಿ ಸಚಿವ ಬಂಡೆಪ್ಪ ಕಾಶೆಂಪುರ್ ಅವರು ಚಾಲನೆ ನೀಡಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಮುದಾಯ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರೈತರಿಗೆ ಸಬ್ಸಿಡಿ ದರದಲ್ಲಿ ರೇಡಿಯೋ ಸೆಟ್‌ಗಳನ್ನು ಒದಗಿಸಲಾಗುವುದು ಎಂದರು.
ಮಣ್ಣಿನ ಫಲವತ್ತತೆ, ಭಿತ್ತನೆ, ಹವಾಮಾನ ಆಧಾರಿತ ಕೃಷಿ ಮುಂತಾದ ವಿಷಯಗಳ ಜತೆಗೆ, ಬೆಳೆ ವಿಮೆ, ಬೀಜ ಸಂಸ್ಕರಣೆ, ಕೃಷಿ ಕ್ಷೇತ್ರದಲ್ಲಿನ ಹೊಸ ಸಂಶೋಧನೆ ಬಗ್ಗೆ ರೇಡಿಯೋದಲ್ಲಿ ಮಾಹಿತಿ ಲಭ್ಯ. ಸುಮಾರು 25 ಕಿ.ಮೀ ವ್ಯಾಪ್ತಿಯಲ್ಲಿ ಆಲಿಸಬಹುದಾದ ಪ್ರಾಯೋಗಿಕ ಎಫ್‌ಎಂ ರೇಡಿಯೋ ಪ್ರಸಾರ ಧಾರವಾಡದಲ್ಲಿ ಯಶಸ್ವಿಯಾದರೆ ಉಳಿದ ಜಿಲ್ಲೆಗಳಿಗೂ ವ್ಯಾಪಿಸಲಾಗುವುದು ಎಂದು ಹೇಳಿದರು.
ರೈತಮಿತ್ರ ಪುಸ್ತಕ ಯೋಜನೆ, ಭೂಮಿ ತಾಯಿ ಆರೋಗ್ಯ ಯೋಜನೆ, ಸಾಯಿಲ್ ಹೆಲ್ತ್ ಕಾರ್ಡ್(ಮಣ್ಣಿನ ಫಲವತ್ತತೆ ಕಾಪಾಡಲು), ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮುಂತಾದ ಪ್ರಮುಖ ಯೋಜನೆಗಳು ಸರ್ಕಾರದ ಮುಂದಿದೆ. ಶೀಘ್ರದಲ್ಲೆ ಯೋಜನೆಗಳು ಕಾರ್ಯಗತವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications