ಕೆಪಿಎಸ್‌ಸಿ ಅಧ್ಯಕ್ಷರಾಗಿ ಗೋನಾಳ್ ಭೀಮಪ್ಪ ನೇಮಕ
ಬೆಂಗಳೂರು : ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಗೋನಾಳ್ ಭೀಮಪ್ಪ ಕರ್ನಾಟಕ ಲೋಕಸೇವಾ(ಕೆಪಿಎಸ್‌ಸಿ) ಆಯೋಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದಲ್ಲದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿಶೇಷ ಅಧಿಕಾರಿ ಎನ್.ರಾಮಕೃಷ್ಣ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸರ್ಕಾರ ಈ ಕುರಿತ ಶಿಫಾರಸನ್ನು ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರಿಗೆ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಗೋನಾಳ್ ಭೀಮಪ್ಪ, 1989ರಲ್ಲಿ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದಿದ್ದರು.
4 ತಿಂಗಳಿಂದ ಖಾಲಿ ಬಿದ್ದ ಹುದ್ದೆ : ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಅಧಿಕಾರಾವಧಿ ಪ್ರಸಕ್ತ ವರ್ಷದ ಜನವರಿ 15ರಂದು ಮುಗಿದಿತ್ತು. ಆನಂತರ ಈ ಸ್ಥಾನ ಖಾಲಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ಹಿರಿಯ ಸದಸ್ಯ ವೆಂಕಟಸ್ವಾಮಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications