ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ರೈಲು ನಿಲ್ದಾಣಕ್ಕೆ ನೀರು ನೀಡದ ನಗರಸಭೆ!

By Staff
|
Google Oneindia Kannada News

ತುಮಕೂರು : ಇದು ವಿಚಿತ್ರ, ಆದರೆ ಸತ್ಯ ಸಂಗತಿ. ತುಮಕೂರು ನಗರದ ಹೃದಯ ಭಾಗದಲ್ಲಿರುವ ರೈಲು ನಿಲ್ದಾಣಕ್ಕೆ ಕುಡಿಯುವ ನೀರಿನ ಬಳಕೆಗಾಗಿ ಹೇಮಾವತಿ ನೀರನ್ನು ನಗರಸಭೆ ಕೊಟ್ಟಿಲ್ಲ !

ಇದು ಉದ್ದೇಶಪೂರ್ವಕವೋ ಅಥವಾ ತಾಂತ್ರಿಕ ಕಾರಣವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ರೈಲ್ವೆ ಇಲಾಖೆಯ ಸತತ ಕೋರಿಕೆಯ ನಂತರವು ತುಮಕೂರು ನಗರಸಭೆ ಅದರತ್ತ ಸ್ಪಂದಿಸಿಲ್ಲ! ಹೇಮಾವತಿ ನೀರನ್ನು ಪೂರೈಸಿಲ್ಲ!!

ತುಮಕೂರು ನಗರದ ರೈಲು ನಿಲ್ದಾಣವು, ಪ್ರಮುಖ ರೈಲು ನಿಲ್ದಾಣಗಳಲ್ಲೊಂದಾಗಿದೆ. ಜಿಲ್ಲಾ ಕೇಂದ್ರವೂ ಆಗಿರುವುದರಿಂದ ಸಹಜವಾಗಿಯೇ ಈ ನಿಲ್ದಾಣಕ್ಕೆ ಮಹತ್ವ ಇರುತ್ತದೆ. ಇಲ್ಲಿ ಮೂರು ಪ್ಲಾಟ್‌ ಫಾರಂಗಳಿವೆ. ರೈಲ್ವೆ ನಿಲ್ದಾಣದ ಕಟ್ಟಡ, ಇತರೆ ಸೇವೆಗಳ ಕಟ್ಟಡಗಳಲ್ಲದೆ, ಸಿಬ್ಬಂದಿಗೆ ಸೇರಿದ ಸುಮಾರು 70 ವಸತಿ ಗೃಹಗಳಿವೆ. ಇಲ್ಲಿ ವಾಸಿಸುವ ರೈಲ್ವೆ ಸಿಬ್ಬಂದಿಯ ಸಂಖ್ಯೆಯೇ ಅಂದಾಜು 350ರಿಂದ 500ರಷ್ಟು ಇರುತ್ತದೆ.

ಒಂದು ಅಂದಾಜಿನ ಪ್ರಕಾರ ರೈಲು ನಿಲ್ದಾಣ ಹಾಗೂ ವಸತಿ ಗೃಹ ಸೇರಿದಂತೆ ಈ ರೈಲ್ವೆ ಕಾಲೋನಿಗೆ ಪ್ರತಿನಿತ್ಯ 1 ಲಕ್ಷ 50 ಸಾವಿರ ಲೀಟರ್‌ಗಳಷ್ಟು ನೀರಿನ ಅಗತ್ಯತೆ ಇದೆ. ಅತ್ಯಂತ ಆಳದ ಬೋರ್‌ವೆಲ್‌ ಮತ್ತು ತೆರೆದ ಬಾವಿಯೇ ಇಲ್ಲಿನ ಆಸರೆಯಾಗಿದೆ. ಆದರೆ ಈ ನೀರಿನ ಆಸರೆಯೂ ಅನಿಶ್ಚಿತವಾಗಿದೆ. ಏಕೆಂದರೆ ಬೋರ್‌ವೆಲ್‌ಗಳ ವೈಫಲ್ಯ, ಬೇಸಿಗೆಯಲ್ಲಿ ನೀರು ಬತ್ತಿಹೋಗಿ ಒಣಗುವುದು, ಇದಕ್ಕೂ ಮಿಗಿಲಾಗಿ ಇದು ಕುಡಿಯಲು ಯೋಗ್ಯವಾಗಿಲ್ಲದೆ ಇರುವುದು. ಹೀಗಾಗಿ ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಕಾಲೋನಿ ನೀರಿನ ಸಂಕಷ್ಟ ಅನುಭವಿಸುತ್ತಿದೆ.

ಪರ್ಯಾಯವಾಗಿ ರೈಲ್ವೆ ಇಲಾಖೆಯೂ ಖಾಸಗಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ಹಾಗೂ ದಿನಬಳಕೆಯ ನೀರನ್ನು ಉಪಯೋಗಿಸುತ್ತಿದ್ದು, ಇದಕ್ಕಾಗಿ ಮಾಸಿಕ ಅಪಾರ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಮೂಲಗಳು ಹೇಳುತ್ತವೆ.

ಏಳುವರ್ಷಗಳಿಂದ ಪತ್ರೋತ್ತಾಯ :

ರೈಲುನಿಲ್ದಾಣ ಹಾಗೂ ರೈಲ್ವೆ ಕಾಲೋನಿಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ತುಮಕೂರು ನಗರ ಸಭೆಯ ಮೊರೆಯಿಟ್ಟಿತು. ಬೆಂಗಳೂರಿನಲ್ಲಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಕಾಮಗಾರಿ) ತುಮಕೂರು ನಗರಸಭೆಯ ಆಯುಕ್ತರಿಗೆ ಪತ್ರಗಳ ಮೇಲೆ ಪತ್ರ ಬರೆದರು.

ದಿನಾಂಕ 18.04.2002, ದಿನಾಂಕ 06.11.2004, ದಿನಾಂಕ 27.03.2006, ದಿನಾಂಕ 06.06.2006 ಮತ್ತು ದಿನಾಂಕ 07.02.2007 ಹೀಗೆ ಸತತ ಏಳು ವರ್ಷಗಳಿಂದ ರೈಲ್ವೆ ಇಲಾಖೆ ಪತ್ರ ಬರೆಯುತ್ತಲೇ ಇದೆ. ಅದನ್ನು ನಗರಸಭೆ ಅಧಿಕೃತವಾಗಿ ಸ್ವೀಕರಿಸುತ್ತಲೇ ಇದೆ! ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ !!

ದಿನಾಂಕ 07.02.2007ರಂದು ಬರೆದಿರುವ ಪತ್ರದಲ್ಲಿ , ದಿನೇ ದಿನೇ ಸಮಸ್ಯೆ ಬಿಗಡಾಯಿಸುತ್ತಿದೆ. ಈಬಗ್ಗೆ ಅನೇಕ ಮನವಿಗಳನ್ನು ಮಾಡಲಾಗಿದೆ. ಆದರೂ ನಗರಸಭೆ ಸ್ಪಂದಿಸಿಲ್ಲ. ನಿಲ್ದಾಣಕ್ಕೆ ಭೇಟಿಕೊಡುವ ಸಂಸದರು, ಶಾಸಕರು ಮೊದಲಾದ ಗಣ್ಯರು ಸಹ ಈ ಬಗ್ಗೆ ಬೇಸರ ವ್ಯಕ್ತಪಡಿಸಿ, ನಗರ ಸಭೆಯ ನೀರಿನ ಸಂಪರ್ಕ ಪಡೆಯಲು ಸೂಚಿಸಿದ್ದಾರೆ. ಆದ್ದರಿಂದ ಕುಡಿಯುವ ನೀರಿನ ಸಂಪರ್ಕ ಒದಗಿಸಿಕೊಡಿ ಎಂದು ಹಾಗೂ ಈ ವಿಷಯವನ್ನು ತುರ್ತು ಎಂದು ಪರಿಗಣಿಸಬೇಕೆಂದು ಕೋರಲಾಗಿದೆ.

ಇಷ್ಟೆಲ್ಲ ಬೇಡಿಕೆ ಹಾಗೂ ಮನವಿಗಳನ್ನು ಮುಂದಿಟ್ಟಿರುವ ರೈಲ್ವೆ ಇಲಾಖೆಯು ಪುಕ್ಕಟ್ಟೆಯಾಗಿ ನೀರು ಪೂರೈಸುವಂತೆ ಕೇಳುತ್ತಿಲ್ಲ. ಅಗತ್ಯವಿರುವ ಠೇವಣಿ ಹಾಗೂ ಮಾಸಿಕ ತೆರಿಗೆ ಪಾವತಿಸುವುದಾಗಿ ಪದೇ ಪದೇ ಸ್ಪಷ್ಟಪಡಿಸಿದೆ. ಆದರೂ ಸಹ ತುಮಕೂರು ನಗರಸಭೆ ಇದರತ್ತ ತಲೆಕೆಡಿಸಿಕೊಳ್ಳದಿರುವುದು ಸಂದೇಹಾಸ್ಪದವಾಗಿದೆ.

ನಾಯಕರೇ ನೀರು ಕೊಡಿ...

ರೈಲ್ವೆ ಇಲಾಖೆ ಅಗತ್ಯವಿರುವ ಹಣ ಪಾವತಿಸಲು ಸಿದ್ಧವಿರುವುದಾಗಿ ಹೇಳುತ್ತಿದ್ದರೂ, ಇದರಿಂದ ತುಮಕೂರು ನಗರಸಭೆಗೆ ಅಧಿಕ ಆದಾಯ ಬರುವ ಸಂಭವ ಇದ್ದರೂ, ಜನಪ್ರತಿನಿಧಿಗಳೂ ಸೇರಿದಂತೆ ಯಾರೊಬ್ಬರೂ ಇತ್ತ ಲಕ್ಷ್ಯ ತೋರದಿರುವುದು ಇದೀಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಎಸ್‌. ಮಲ್ಲಿಕಾರ್ಜುನಯ್ಯ ಮತ್ತು ತುಮಕೂರಿನ ಶಾಸಕರೂ ಆಗಿರುವ ರಾಜ್ಯದ ರೇಷ್ಮೆ ಸಚಿವರಾದ ಎಸ್‌. ಶಿವಣ್ಣ ಅವರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವರೆಂಬುದು ಕುತೂಹಲಕರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X