ಸರ್ಕಾರ ಗಮನಿಸುತ್ತಿಲ್ಲ : ಗ್ರಾ.ಪಂ. ನೌಕರರ ಅಳಲು
ರಾಯಚೂರು : ಗ್ರಾಮ ಪಂಚಾಯತ್ ನೌಕರರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ, ಈ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುವ ನೌಕರರತ್ತ ಆಲೋಚಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಮಧ್ಯೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಗ್ರಾಮ ಪಂಚಾಯತ್ ನೌಕರರು ಮಾರ್ಚ್ 12ರಿಂದ ಅನಿರ್ದಿಷ್ಟ ಕಾಲ ರಾಜ್ಯವ್ಯಾಪಿ ಧರಣಿ ನಡೆಸಲಿದ್ದಾರೆ.
ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಎಲ್ಲ 175 ತಾಲ್ಲೂಕು ಕಚೇರಿಗಳ ಎದುರು ನೌಕರರು ಧರಣಿ ನಡೆಸಲಿದ್ದಾರೆ. ಬೇಡಿಕೆಗಳು ಈಡೇರುವವರೆಗೆ ಧರಣಿ ಮುಂದುವರಿಯಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ನೌಕರರಿಗೆ ಸೇವಾ ನಿಯಮಗಳನ್ನು ರೂಪಿಸಬೇಕು. ಭವಿಷ್ಯನಿಧಿ(ಪ್ರಾವಿಡೆಂಟ್ ಫಂಡ್) ವ್ಯಾಪ್ತಿಗೆ ಅವರನ್ನು ತರಬೇಕು. ಕಲ್ಯಾಣ ನಿಧಿ ಸ್ಥಾಪಿಸಿ, ನೌಕರರ ನಿವೃತ್ತಿಯ ಸಂದರ್ಭದಲ್ಲಿ ನಿಧಿಯಿಂದ 1ಲಕ್ಷ ರೂಪಾಯಿ ನೀಡಬೇಕು ಎಂಬ ಬೇಡಿಕೆಗಳನ್ನು ಸಂಘ ಇಟ್ಟಿದೆ ಎಂದು ಅವರು ವಿವರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸಿ.ಎಂ.ಉದಾಸಿ ಹಾಗೂ ಇಲಾಖೆ ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸಮೂರ್ತಿ ನೀಡಿದ ಭರವಸೆ ಈಡೇರಿಲ್ಲ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರದ ಗಮನ ಸೆಳೆಯಲು ಗ್ರಾಮ ಪಂಚಾಯತ್ ನೌಕರರು, ಜನವರಿ 21ರಂದು ಬೆಂಗಳೂರಿನಲ್ಲಿ ರ್ಯಾಲಿ ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications