ಬಜೆಟ್ ಅಧಿವೇಶನ : ರಾಷ್ಟ್ರಪತಿ ಭಾಷಣದ ಮುಖ್ಯಾಂಶ
ನವದೆಹಲಿ : ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಸಂಸತ್ತಿನ ಎರಡೂ ಸದನಗಳನ್ನುದ್ದೇಶಿಸಿ ಮಾತನಾಡುವುದರೊಂದಿಗೆ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಶುಕ್ರವಾರ ಆರಂಭಗೊಂಡಿತು.
ಸಂಝೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಕುರಿತು ಸಂತಾಪ ವ್ಯಕ್ತಪಡಿಸಿದ ಕಲಾಂ, ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸಲು ಯತ್ನಿಸುತ್ತಿರುವ ಸರ್ಕಾರದ ಪ್ರಯತ್ನಗಳ ಬಗ್ಗೆಯೂ ಮಾತನಾಡಿದರು. ಹಣದುಬ್ಬರ ಏರಿಕೆಯಾಗುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು.
ಭಾಷಣದ ಮುಖ್ಯಾಂಶಗಳು :
- ಸರ್ಕಾರ ಬಡವರನ್ನು ಬಡತನ, ರೋಗರುಜಿನ, ಅಂಧಕಾರದಿಂದ ಹೊರತರಲು ಎಲ್ಲ ಯತ್ನಗಳನ್ನೂ ಮಾಡಲಿದೆ. ಅಲ್ಲದೆ ಸಮಾಜದ ಎಲ್ಲ ವರ್ಗಗಳಿಗೂ ಹಾಗೂ ಎಲ್ಲ ಪ್ರದೇಶಗಳಿಗೂ ಉತ್ಪನ್ನದ ಸಮಾನ ಹಂಚಿಕೆ.
- ಕೈಗಾರಿಕಾ ಅಭಿವೃದ್ಧಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಇತ್ತೀಚೆಗೆ ವಿವಾದಗಳು ಉಂಟಾಗಿವೆ. ಹೀಗಾಗಿ ಭೂಸ್ವಾಧೀನ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹೊಸ ಪುನರ್ವಸತಿ ಯೋಜನೆ ತರಲು ಬದ್ಧ.
- 2005-06ನೇ ಸಾಲಿನಲ್ಲಿ ಕೃಷಿ ಕ್ಷೇತ್ರ ಶೇಕಡಾ 6ರಷ್ಟು ಬೆಳವಣಿಗೆ ಸಾಧಿಸಿದೆ. ದೇಶದ ವಿವಿಧ ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳದ ಸಂಗತಿ.
- ರೈತರ ಆತ್ಮಹತ್ಯೆ ಸಮಸ್ಯೆಗೆ ತುತ್ತಾದ 31ಜಿಲ್ಲೆಗಳಿಗೆ, 16,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಮೊತ್ತದ ಪ್ಯಾಕೇಜ್ ಜಾರಿಯಾಗುತ್ತಿದೆ. ರೈತರ ಸಮಸ್ಯೆಗಳ ಕುರಿತು ತಜ್ಞರ ಸಮಿತಿಯಾಂದು ಅಧ್ಯಯನ ನಡೆಸುತ್ತಿದೆ. ಈ ಸಮಿತಿ ಸಂಕಷ್ಟದಲ್ಲಿರುವ ರೈತರನ್ನು ಕಾಪಾಡುವುದರ ಕುರಿತು ಸಲಹೆಗಳನ್ನು ನೀಡಲಿದೆ.
ಬಜೆಟ್ ಪರ್ವ : ಫೆ.26ರಂದು ಕೇಂದ್ರ ರೈಲ್ವೆ ಬಜೆಟ್ ಮತ್ತು ಫೆ.28ರಂದು ಕೇಂದ್ರ ಬಜೆಟ್ ಮಂಡನೆಯಾಗಲಿವೆ.
(ಏಜನ್ಸೀಸ್)











Click it and Unblock the Notifications