ದೂರದರ್ಶನದಲ್ಲಿ ಭ್ರಷ್ಟಾಚಾರ : ಜೋಶಿ ವರ್ಗಾವಣೆ
ಬೆಂಗಳೂರು : ಮಹೇಶ್ ಜೋಶಿ ಅವರನ್ನು ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಹುದ್ದೆಯಿಂದ ತೆಗೆದು, ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ.
ದೂರದರ್ಶನ ಕೇಂದ್ರದ ಬಗ್ಗೆ ಭ್ರಷ್ಟಾಚಾರದ ಅನೇಕಾನೇಕ ಆರೋಪಗಳು, ಗುಸುಗುಸುಗಳು ಇವೆ. ಕೆಲವು ಆಗಾಗ ಬಹಿರಂಗವಾಗುತ್ತಿರುತ್ತವೆ. ಆದರೆ, ಈ ಬಾರಿ ಮಹೇಶ್ ಜೋಶಿ ಅವರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಗಂಭೀರವಾದ ಆರೋಪಗಳನ್ನು ಸಂಸದರಾದ ಆರ್. ಎಲ್. ಜಾಲಪ್ಪ ಹೊರಿಸಿದ್ದಾರೆ.
ಜೋಷಿ ಅವರ ವಿರುದ್ಧ ಜಾಲಪ್ಪನವರು ಪ್ರಸಾರ ಭಾರತಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಜೋಶಿ ಅವರನ್ನು ಚೆನ್ನೈಗೆ ಎತ್ತಂಗಡಿ ಮಾಡಿರುವ ಆದೇಶ ಹೊರಬಿದ್ದಿದೆ. ಆದರೆ, ಜೋಷಿ ಅವರು ಸುಮ್ಮನೆ ಕುಳಿತಿಲ್ಲ. ವರ್ಗಾವಣೆ ವಿರೋಧಿಸಿ ಕೇಂದ್ರ ಆಡಳಿತ ನ್ಯಾಯ ಮಂಡಳಿಯ ಬೆಂಗಳೂರು ಕಚೇರಿಯಿಂದ ಒಂದು ತಿಂಗಳ ಮಟ್ಟಿಗೆ ತಡೆ ಆದೇಶ ತಂದಿದ್ದಾರೆ. ಅಷ್ಟೇ ಅಲ್ಲ, ನ್ಯಾಯಮಂಡಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಜೋಶಿ ಅವರು ಜಾಲಪ್ಪ ಅವರನ್ನು ಪ್ರತಿವಾದಿಯನ್ನಾಗಿ ಹೆಸರಿಸಿದ್ದಾರೆ.
ವಿಶೇಷ ಸಂಗತಿಯೆಂದರೆ, ಜಾಲಪ್ಪ ಅವರು ಹಿಂದೆ ಕೇಂದ್ರ ಜವಳಿ ಮಂತ್ರಿಯಾಗಿದ್ದಾಗ ಅವರಿಗೆ ಜೋಶಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ (officer on duty) ಸೇವೆ ಸಲ್ಲಿಸಿದ್ದರು.
ಮಹೇಶ್ ಜೋಶಿ ಅವರಿಗೆ ಕರ್ನಾಟಕ ಸರಕಾರ ಹೋದವಾರವಷ್ಟೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ಬಾಲ್ಟಿಮೋರ್‌ನಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ, ಪತ್ರಕರ್ತರ ವಿಭಾಗದಲ್ಲಿ ಸನ್ಮಾನಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)