ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಯೋಗ್ಯತೆಗೆ ಮೀರಿದ ಸ್ಥಾನ : ಅಂಬರೀಷ್‌ ಉವಾಚ

By Staff
|
Google Oneindia Kannada News

ಬೆಂಗಳೂರು : ಅರಮನೆ ಮೈದಾನ ಇಂದು(ನ.7) ಬಿಕೋ ಎನ್ನುತ್ತಿದೆ. ನಿನ್ನೆ ಜನ ಸಾಗರದಿಂದ ತುಂಬಿತುಳುಕುತ್ತಿದ್ದ ಮೈದಾನದಲ್ಲಿ ಇಂದು, ಮೌನ. ಮೈದಾನ ಸ್ವಚ್ಛಗೊಳಿಸುವ ಕೆಲಸ ಮತ್ತು ನಗರದ ವಿವಿಧೆಡೆ ಹಾಕಲಾಗಿದ್ದ ಆಳೆತ್ತರದ ಕಟೌಟು ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಕೇಂದ್ರ ಸಚಿವರಾದ ಮೇಲೆ, ತವರಿನಲ್ಲಿ ಮೊದಲ ಸನ್ಮಾನ ಸ್ವೀಕರಿಸಿದ ಅಂಬರೀಷ್‌, ತಮ್ಮನ್ನು ಕಾಣಲು ಬಂದ ಸಹಸ್ರಾರು ಅಭಿಮಾನಿಗಳನ್ನು ಕಂಡು ನಿನ್ನೆ ಅರಮನೆ ಮೈದಾನದಲ್ಲಿ ಒಂದು ಕ್ಷಣ ಮೂಕರಾದರು. ಅಭಿಮಾನಿಗಳ ಕೈಕುಲುಕುತ್ತಾ, ಅವರ ಪ್ರೀತಿಯನ್ನು ಹೃದಯದ ಪಾತ್ರೆಗೆ ತುಂಬಿಕೊಳ್ಳುತ್ತ ನಗರದ ಅರಮನೆ ಮೈದಾನದಲ್ಲಿ ಅಂಬಿ ನಡೆಯುತ್ತಿದ್ದರು. ಹತ್ತಿರದಿಂದ ತಮ್ಮ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಕೇಕೆ ಹಾಕಿದರು.

ಸಮಾರಂಭದಲ್ಲಿ ಮಾತನಾಡಿದ ಅಂಬರೀಷ್‌, ಕರ್ನಾಟಕದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿ ಇಂಡಿಯಾದ ಗಂಡಾಗುವುದೇ ನನ್ನ ಗುರಿ. ಸಚಿವ ಸ್ಥಾನ ಬಯಸದೆ ಬಂದ ಭಾಗ್ಯ. ಯೋಗ್ಯತೆ ಮೀರಿದ ಸ್ಥಾನ. ಸಿಕ್ಕಿರುವ ಖಾತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ರಾಜ್ಯಕ್ಕೆ ಮಸಿ ಬಳಿಯುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಕಳಂಕ ತರುವುದಿಲ್ಲ ಎಂದು ಘೋಷಿಸಿದರು.

ಅಂಬರೀಷ್‌ಗೆ ಕೆಲಸವಿಲ್ಲದ ಖಾತೆ ಕೊಡಲಾಗಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಕೆಲಸ ಇರಲಿ, ಇಲ್ಲದಿರಲಿ. ಹುಡುಕಿ ಕೆಲಸ ಮಾಡುತ್ತೇನೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ, ಒಳ್ಳೆಯತನದಿಂದ ರಾಜಕಾರಣ ಮಾಡುತ್ತೇನೆ ಎಂದು ಅಂಬರೀಷ್‌ ಹೇಳಿದರು.

ಚಿತ್ರರಂಗ ಮತ್ತು ರಾಜಕಾರಣದಲ್ಲಿ ನಡೆದು ಬಂದ ಹಾದಿಯನ್ನು ಸ್ಮರಿಸಿಕೊಂಡು ಭಾವುಕರಾದ ಅಂಬರೀಷ್‌, ಗಾಂಧಿ ಕುಟುಂಬದ ಆಶೀರ್ವಾದ ಮತ್ತು ಸೋನಿಯಾ ಗಾಂಧಿ ಅವರ ಪ್ರೀತಿ ನನಗೆ ಸಚಿವ ಪದವಿ ತಂದುಕೊಟ್ಟಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ, ನಟ ವಿಷ್ಣುವರ್ಧನ್‌, ರವಿಚಂದ್ರನ್‌, ಸುಂದರರಾಜ್‌, ರಾಕ್‌ಲೈನ್‌ ವೆಂಕಟೇಶ್‌ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X