ಸಭ್ಯನಾಗಿರುವೆ ಎನ್ನುವ ಉಮೇಶ್ ರೆಡ್ಡಿಗೆ ನೇಣಿನ ಶಿಕ್ಷೆ!
ಬೆಂಗಳೂರು : ಹೆಂಗಸರ ಪಾಲಿಗೆ ದುಶ್ಯಾಸನನಾಗಿ, ಹತ್ತಾರು ವರ್ಷ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ವಿಕೃತಗಾಮಿ ಮತ್ತು ಸರಣಿ ಕೊಲೆಗಾರ ಉಮೇಶ್ ರೆಡ್ಡಿಗೆ, ನ್ಯಾಯಾಲಯ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿದೆ.
ನಗರದ ಏಳನೇ ತ್ವರಿತ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಸುಕನ್ಯಾ ಅವರು, ‘ಪೀಣ್ಯದ ಜಯಶ್ರೀ ಅತ್ಯಾಚಾರ ಮತ್ತು ಕೊಲೆ ಪ್ರಕರಣ’ವನ್ನು ಗಂಭೀರವಾಗಿ ಪರಿಗಣಿಸಿ, ಮರಣ ದಂಡನೆ ಮತ್ತು 25ಸಾವಿರ ರೂ.ದಂಡವನ್ನು ವಿಧಿಸಿದ್ದಾರೆ.
ಕ್ಷಮೆಗೆ ಅಂಗಲಾಚಿದ ರೆಡ್ಡಿ :
ನಾನೀಗ ಬದಲಾಗಿದ್ದೇನೆ.. ಮರಣ ದಂಡನೆ ರದ್ದು ಪಡಿಸಿ, ಕ್ಷಮಾಧಾನ ನೀಡಿ.. ನನ್ನ ಅಮ್ಮನ ಆರೈಕೆ ಮಾಡಲು ಅವಕಾಶ ಕಲ್ಪಿಸಿ.. ಸಮಾಜದಲ್ಲಿ ಇನ್ನು ಮುಂದೆ ಸಭ್ಯನಾಗಿ ಬದುಕುತ್ತೇನೆ ಎಂದು ಉಮೇಶ್ ರೆಡ್ಡಿ, ನ್ಯಾಯಾಲಯದ ಮುಂದೆ ಪರಿಪರಿಯಾಗಿ ಬೇಡಿಕೊಂಡ. ರೆಡ್ಡಿಯ ಅಕ್ಷಮ್ಯ ಅಪರಾಧದ ಹಿನ್ನೆಲೆಯಲ್ಲಿ ಶಿಕ್ಷೆ ರದ್ದು ಮಾಡಲು ನ್ಯಾಯಾಲಯ ಒಪ್ಪಲಿಲ್ಲ.
ನನ್ನ ತಂದೆ ಸಾವನ್ನಪ್ಪಿದ್ದಾರೆ. ನನ್ನ ತಾಯಿಯೀಗ ಒಂಟಿ. ಆಕೆಗೆ ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲ.. ಕಳೆದ 13ವರ್ಷಗಳ ಜೈಲಿನ ಬದುಕಿನಲ್ಲಿ ಮನುಷ್ಯನಾಗಿದ್ದೇನೆ. ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಮಾಡುತ್ತಿದ್ದೇನೆ. ಜೊತೆಗೆ ಕಂಪ್ಯೂಟರ್ ಕಲಿಯುತ್ತಿದ್ದೇನೆ.. ನನ್ನ ನಡತೆ ಬಗ್ಗೆ ಜೈಲಿನ ಅಧಿಕಾರಿಗಳಲ್ಲಿ ವಿಚಾರಿಸಿ ಎಂದು ಉಮೇಶ್ ರೆಡ್ಡಿ ಮಾಡಿದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು.
ಯಾರಿವನು ಉಮೇಶ್ ರೆಡ್ಡಿ? :
ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ತಲೆ ತಪ್ಪಿಸಿಕೊಂಡು ಸುತ್ತಾಡುತ್ತಿದ್ದ ಉಮೇಶ್ ರೆಡ್ಡಿ, ಒಂಟಿ ಮಹಿಳೆಯರ ಮೇಲೆ ಕಣ್ಣಿಡುತ್ತಿದ್ದ. ಅವರನ್ನು ಕೊಂದು, ನಂತರ ಶವದೊಂದಿಗೆ ಸಂಭೋಗ ನಡೆಸುತ್ತಿದ್ದ. ಮಹಿಳೆಯರ ಒಳ ಉಡುಪು ಧರಿಸಿ ಸುಖ ಪಡುತ್ತಿದ್ದ. ಇವನೊಬ್ಬ ವಿಕೃತಗಾಮಿ ಎಂಬ ಅಭಿಪ್ರಾಯ ಪೊಲೀಸರದು.
ಸಾಕಷ್ಟು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಈತ ನಡೆಸಿದ್ದಾನೆ ಎನ್ನಲಾಗಿದ್ದು, ಪೀಣ್ಯದ ಜಯಶ್ರೀ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ಆಕೆಯ ಆರು ವರ್ಷದ ಮಗ ನುಡಿದ ಸಾಕ್ಷಿ, ಉಮೇಶ್ ರೆಡ್ಡಿಯನ್ನು ಗಲ್ಲು ಕಂಭದ ಮುಂದೆ ನಿಲ್ಲಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications