ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಸುತ್ತಲ ಜಗತ್ತು ಹೀಗಿದೆ... ಜನಗಳ ಮನ ಹೀಗಿದೆ!

By Staff
|
Google Oneindia Kannada News

ನಮ್ಮ ಸುತ್ತಲೂ ಏನಾಗುತ್ತಿದೆ? ಜನಗಳು ಏನು ಮಾಡುತ್ತಿದ್ದಾರೆ? ಬನ್ನಿ ನಮ್ಮ ಜೊತೆ ಒಂದು ಸುತ್ತು..

  • ಅನು
ಎಲ್ಲೋ ಓದಿದ್ದೆವು. ಅಮೆರಿಕಾ ಅಧ್ಯಕ್ಷರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳು ಪಬ್‌ನಲ್ಲಿ ಬೀರು ಹೀರುವಾಗ ಪೊಲೀಸರಿಗೆ ಸಿಕ್ಕಿಬಿದ್ದಳಂತೆ. 16 ವಯಸ್ಸಿನ ಕೆಳಗಿನವರು ಹೀಗೆಲ್ಲ ಮಾಡಬಾರದು, ಮಾಡಿದರೆ ಶಿಕ್ಷೆ ಎನ್ನುತ್ತದೆ ಅಲ್ಲಿನ ಸಮಾಜ. ಕಾನೂನು ರೀತ್ಯ ಪೋಲೀಸರು ನಡೆದುಕೊಂಡರು. ತರುಣಿಯನ್ನು ತರಾಟೆಗೆ ತೆಗೆದುಕೊಂಡರು. ಈ ಅಧಿಕಾರಿಗಳು ತಮ್ಮ ಕಾರ್ಯಪಾಲನೆ ಮಾಡದಂತೆ ವೈಟ್‌ಹೌಸ್‌ನಿಂದ ಯಾರೂ ಫೋನ್‌ ಮಾಡಿ ತಮ್ಮ ದರ್ಪ, ಅಧಿಕಾರ, ಶಿಫಾರಸು ವ್ಯಕ್ತಪಡಿಸಲಿಲ್ಲ. ಅಧ್ಯಕ್ಷರೂ ಕೂಡ ತುಟಿಕ್‌ ಪಿಟಕ್‌ ಎನ್ನಲಿಲ್ಲ.

--ಇಂಥ ಉದಾಹರಣೆಗಳನ್ನು ಕರ್ನಾಟಕದಲ್ಲಿ ಯಾರಾದರೂ ನಮ್ಮ ಆಳ್ವಿಕರಿಗೆ ಹೇಳಬೇಕು, ಹೇಳುತ್ತಲೇ ಇರಬೇಕು.

***

ಗಂಡ ಅಥವಾ ಸಂಗಾತಿ ಮತ್ತು ಸಂಬಂಧಿಕರು ನೀಡುವ ಕಿರುಕುಳ-ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸಲು ರೂಪಿಸಲಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005 ಇವತ್ತು ಗುರುವಾರ ಬೆಳಗ್ಗೆಯಿಂದ ಜಾರಿಗೆ ಬಂದಿದೆ. ಈ ಕಾಯ್ದೆಯ ಅನುಷ್ಠಾನದೊಂದಿಗೆ ಹೆಂಡತಿಯನ್ನು ಹೊಡೆಯುವ ಅಥವಾ ಅವಮಾನಿಸುವ, ಪೀಡಿಸುವ, ಕೆಣಕುವ, ಗದರುವ, ಅಪಹಾಸ್ಯ ಮಾಡುವ, ಉದಾಸೀನ ಮಾಡುವ ಗಂಡ-ಗಂಡಸರನ್ನು ಜೈಲಿಗೆ ಕಳಿಸಲಾಗುತ್ತದೆ. ಜತೆಗೆ 2000 ರೂ. ದಂಡ ಪೀಕಬೇಕು.. Yup!

-ಹೆಂಗಸರೇನೋ ಬಚಾವಾದರು. ಆದರೆ ಪತಿ ಪೀಡಕ ಪತ್ನಿ ಅಥವಾ ಸಂಗಾತಿಗೆ ಕಡಿವಾಣ ಅಥವಾ ಮೂಗುದಾರ ಹಾಕುವ ಕಾಯ್ದೆ ಏಕಿಲ್ಲ ಎಂದು ಜಬರಾಯಿಸ್ತಾನೆ ನಮ್ಮ ನೆರೆಮನೆ ಗುಂಡಣ್ಣ. ( ಬೆಂಗಳೂರಿನಲ್ಲಿ ಪತ್ನಿ ಪೀಡಿತರ ಸಂಘ ಇದೆಯಂತೆ. ಅದರ ಅಡ್ರೆಸ್‌ ಇದ್ದರೆ ಯಾರಾದರೂ ಕಳಿಸಿಕೊಡಿ, ಯಾವುದಕ್ಕೂ ಇರುತ್ತದೆ)

***

ಮೊನ್ನೆ ದೀಪಾವಳಿ ಹಬ್ಬ ತುಂಬ ಕರ್ಕಶವಾಗಿತ್ತು. ಅಹೋರಾತ್ರಿ ಬೆಂಗಳೂರಿನಲ್ಲಿ ಶಬ್ದಾಡಂಬರಗಳ ದರ್ಬಾರು ಚಾಲ್ತಿಯಲ್ಲಿತ್ತು. ‘ಮೈದಾನಕ್ಕೆ ಹೋಗಿ ಪಟಾಕಿ ಹಚ್ಚಿರಿ, ಮನೆಮುಂದೆ ಹಾವಳಿ ಯಾಕೆ ಮಾಡ್ತೀರಾ? ಎಂದು ಹೇಳಿದವರ ಮೇಲೆ ಜನ ತಿರುಗಿ ಬಿದ್ದ ಸುದ್ದಿ ಬಂದಿದೆ. ‘ನಮ್ಮ ದುಡ್ಡು ನಮ್ಮ ಬಾಂಬ್‌ ನಿಮ್ಮದೇನು ಮಧ್ಯೆ’ ಎಂದು ಪಟಾಕಿ ಮನುಷ್ಯರು ವಾಗ್ವಾದಕ್ಕೆ ಇಳಿದರಂತೆ. ಆದರೆ ಹಠ ಬಿಡದ ಅವರು ಪೋಲಿಸರಿಗೆ ಫೋನ್‌ ಮಾಡಿದರೆ ‘ಇವೆಲ್ಲ ಮಾಮೂಲಿ ಬಿಡಿ ಸಾರ್‌, ನಾಕು ದಿವಸ ಗಲಾಟೆ ಇರತ್ತೆ ಆಮೇಲೆ ನಿಂತು ಹೋಗತ್ತೆ’ ಅಂತ ಕಂಟ್ರೋಲ್‌ ರೂಂನವರು ಸಮಾಧಾನ ಮಾಡಿದರಂತೆ.

-ರಾಜ್ಯದಲ್ಲಿ ಜಲ-ವಾಯು-ಶಬ್ದ ಮಾಲಿನ್ಯ ತಗ್ಗಿಸುವುದಕ್ಕೆ ಕಾನೂನು ದತ್ತ ನಿಯಮಗಳಿವೆ. ಉಲ್ಲಂಘಿಸುವವರ ವಿರುದ್ಧ ಶಿಕ್ಷೆ ವಿಧಿಸುವ ಕ್ರಮಗಳೂ ಉಲ್ಲೇಖವಾಗಿವೆ. ಆದರೆ, ಭಾವ ಮಾಲಿನ್ಯ ನಿವಾರಣೆ ಆಗುವತನಕ ಬೇರಾವ ಮಾಲಿನ್ಯಗಳೂ ಹತೋಟಿಗೆ ಬರುವುದಿಲ್ಲ.

***

ತರಕಾರಿ ಬೆಲೆಗಳು ಬೆಂಗಳೂರಿನಲ್ಲಿ ನೆಲ ಕಚ್ಚುತ್ತಿವೆ. 60 ರೂ ಕೆಜಿ ಇದ್ದ ದೊಣ್ಣೆ ಮೆಣಸಿನಕಾಯಿ 15 ರೂ.ಗೆ ಕುಸಿದಿದೆ. ಅಂದಮೇಲೆ ಕೋಸು, ಸೊಪ್ಪು, ಬದನೆಕಾಯಿ ಬೆಲೆ ವಿವರ ನಿಮಗೆ ಹೇಳಬೇಕಾಗಿಲ್ಲ. ಆದರೆ, ದ್ವಿದಳ ಧಾನ್ಯಗಳಲ್ಲಿ ಉದ್ದು ತುಂಬಾ ತೇಜಿ ಆಗಿದೆ. 35 ರೂ. ಕೆಜಿ ಇದ್ದದ್ದು 70 ರೂ. ಗೆ ಜಿಗಿದಿದೆ.

-ಹೋಟೆಲ್‌ನಲ್ಲಿ ಉದ್ದಿನ ವಡೆಯ ಬೆಲೆ ಯಾವುದೇ ಕ್ಷಣ ಹೆಚ್ಚಾಗುತ್ತದೆ. ಆತಂಕ ಬೇಡ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X