ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಂಗ್‌ ಅಸೆಂಬ್ಲಿ’: ಜಾಕ್‌ಪಾಟ್‌ ಯಾರಿಗೆ?

By Staff
|
Google Oneindia Kannada News

‘ಹಂಗ್‌ ಅಸೆಂಬ್ಲಿ’: ಜಾಕ್‌ಪಾಟ್‌ ಯಾರಿಗೆ?
ಜಾತ್ಯತೀತ ಜನತಾದಳವೋ ಅಥವಾ ಭಾರತೀಯ ಜನತಾ ಪಕ್ಷವೋ ? ಸಿದ್ಧರಾಮಯ್ಯ ಅಥವಾ ಬಂಗಾರಪ್ಪ ?

Hung Assembly in Karnataka

  • ದಟ್ಸ್‌ಕನ್ನಡ ಬ್ಯೂರೊ
ಗಿಣಿಪಾಠ ಉಲಿದಂತೆ ಏಕಪ್ರಕಾರವಾಗಿ ಉಲಿಯುತ್ತಿದ್ದ ಸಮೀಕ್ಷೆಗಳು ರಾಜ್ಯದ ಮಟ್ಟಿಗೆ ನಿಜವಾಗಿವೆ. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಬಗ್ಗೆ ಜನತೆ ನಿರಾಸಕ್ತಿ ವ್ಯಕ್ತಪಡಿಸುವುದರೊಂದಿಗೆ ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆ ಸೃಷ್ಟಿಯಾಗಿದೆ. ಮುಂದೇನು ?

ಮುಂದೇನು ಎನ್ನುವ ಪ್ರಶ್ನೆ ಜನತೆಯದು ಮಾತ್ರವಲ್ಲ - ವಿವಿಧ ರಾಜಕೀಯ ಪಕ್ಷಗಳು ಕೂಡ ಈ ಹೊತ್ತು ಚರ್ಚಿಸುತ್ತಿರುವುದು ಇದೇ ಪ್ರಶ್ನೆಯನ್ನು .

ರಾಜ್ಯದಲ್ಲಿನ ಪಕ್ಷಗಳ ಸ್ಥಿತಿಗತಿಯನ್ನು ನೋಡಿ : ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ರೂಪುಗೊಂಡಿದ್ದರೂ ಅದರೊಂದಿಗೆ ನಡೆಯಲಿಕ್ಕೆ ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ಸಂತೂ ಬಿಜೆಪಿಯನ್ನು ಬೆಂಬಲಿಸುವ ಮಾತು ದೂರ ಉಳಿಯಿತು. ಹಾಗಾಗಿ, ಜಾತ್ಯತೀತ ಜನತಾದಳ ನೂತನ ಸರ್ಕಾರದ ರಚನೆಯ ಹಿನ್ನೆಲೆಯಲ್ಲಿ ನಿರ್ಣಾಯಕ ಶಕ್ತಿಯಾಗಿದೆ.

ರಾಜ್ಯದಲ್ಲಿ ನೂತನ ಸರ್ಕಾರ ರಚನೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾಣುತ್ತಿರುವುದು ಎರಡೇ ಎರಡು ಸಾಧ್ಯತೆಗಳು : ಜಾತ್ಯತೀತ ಜನತಾದಳ ಬಿಜೆಪಿಯನ್ನು ಬೆಂಬಲಿಸುವುದು ಮೊದಲ ಸಾಧ್ಯತೆ. ಕಾಂಗ್ರೆಸ್‌ ಜಾತ್ಯತೀತ ಜನತಾದಳವನ್ನು ಬೆಂಬಲಿಸುವುದು ಇನ್ನೊಂದು ಸಾಧ್ಯತೆ. ಎರಡು ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ . ಹಿಂದುಳಿದ ವರ್ಗಗಳ ಮುಖಂಡ ಎಸ್‌.ಬಂಗಾರಪ್ಪ ಮುಖ್ಯಮಂತ್ರಿ ಆಗುವುದಾದರೆ ದೇವೇಗೌಡರು ಬೆಂಬಲ ನೀಡಲು ಸಿದ್ಧ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಹೇಳುತ್ತಾರೆ- ಅದೇನೇ ಆಗಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ . ಅಂದರೆ, ಜಾತ್ಯತೀತ ಜನತಾದಳಕ್ಕೆ ಕಾಂಗ್ರೆಸ್‌ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್‌ ಜಾತ್ಯತೀತ ಜನತಾದಳಕ್ಕೆ ಬೆಂಬಲ ನೀಡಿದರೆ ಸಂಭಾವ್ಯ ಮುಖ್ಯಮಂತ್ರಿಗಳ ಯಾದಿಯಲ್ಲಿ ಸಿದ್ಧರಾಮಯ್ಯನವರಿಗೆ ಮೊದಲ ಆದ್ಯತೆ. ಉಳಿದಂತೆ ಸಿಂಧ್ಯಾ, ಪ್ರಕಾಶ್‌ ರೇಸಿನಲ್ಲಿದ್ದಾರೆ.

ಒಂದುವೇಳೆ, ಜಾತ್ಯತೀತ ಜನತಾದಳ ಬಿಜೆಪಿಗೆ ಬೆಂಬಲ ನೀಡಿತೆಂದು ಇಟ್ಟುಕೊಳ್ಳೋಣ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಯಡಿಯೂರಪ್ಪ , ಅನಂತಕುಮಾರ್‌ ಹಾಗೂ ಬಂಗಾರಪ್ಪ ಮೊದಲಿಗರು. ಜಾತ್ಯತೀತ ದಳ ಬೆಂಬಲ ನೀಡುವುದಾದರೆ ಅನಂತಕುಮಾರ್‌ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಸಾಧ್ಯತೆಯ ಬಾಗಿಲುಗಳು ತಂತಾನೇ ಮುಚ್ಚುತ್ತವೆ. ಹಾಗಾಗಿ ಬಂಗಾರಪ್ಪನವರಿಗೆ ಜಾಕ್‌ಪಾಟ್‌ ಒಲಿಯಬಹುದು. ಬಂಗಾರಪ್ಪ ನಾಯಕರಾಗುವುದಾದರೆ, ಕಾಂಗ್ರೆಸ್‌ನಿಂದ ಒಂದು ಗುಂಪು ಬಿಜೆಪಿಗೆ ಹಾರುವ ಸಾಧ್ಯತೆಯೂ ಇದೆ.

ಪ್ರಾದೇಶಿಕ ಪಕ್ಷಗಳಿಗೆ ನೆಲೆಯಿಲ್ಲ !

ಈ ಬಾರಿಯ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಸ್ಪರ್ಧೆ ವಿಶೇಷ ಕುತೂಹಲ ಮೂಡಿಸಿತ್ತು . ವಿಜಯ ಸಂಕೇಶ್ವರರ ಕನ್ನಡ ನಾಡು ಪಾರ್ಟಿ, ಹರಿಖೋಡೆಯವರ ಅರಸು ಸಂಯುಕ್ತ ಪಕ್ಷ , ವಾಟಾಳರ ಕನ್ನಡ ಪಕ್ಷ ಕಣಕ್ಕಿಳಿದಿದ್ದವು. ವಿಜಯ್‌ ಮಲ್ಯ ಅವರ ಜನತಾ ಪಕ್ಷ ಕೂಡ ಪ್ರಾದೇಶಿಕ ಸ್ವರೂಪದ್ದೇ ಆಗಿದೆ. ಮಲ್ಯ ಅನೇಕ ರೀತಿಯಿಂದ ಸುದ್ದಿ ಮಾಡಿದರು. ಇನ್ನು ಸಂಕೇಶ್ವರ ತಮ್ಮ ವಿಜಯ ಕರ್ನಾಟಕ ಪತ್ರಿಕೆಯನ್ನು ಎಲ್ಲ ರೀತಿಗಳಲ್ಲೂ ಪಕ್ಷದ ಪ್ರಚಾರಕ್ಕೆ ಬಳಸಿಕೊಂಡರು. ಆದರೆ, ರಾಜ್ಯದ ಜನತೆ ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿವೆ. ಕನ್ನಡ ನಾಡಿನ ಸಂಸ್ಥಾಪಕ ಸಂಕೇಶ್ವರರೇ ಸೋತಿದ್ದಾರೆ. ಹುಬ್ಬಳ್ಳಿ ಕ್ಷೇತ್ರದ ಸ್ಪರ್ಧೆಯಲ್ಲವರಿಗೆ ನಾಲ್ಕನೇ ಸ್ಥಾನ. ಜನತಾ ಪಾರ್ಟಿಯೂ ನೆಲಕಚ್ಚಿದೆ. ವಾಟಾಳ್‌ ಏಕವ್ಯಕ್ತಿ ಪಕ್ಷವಾಗಿ ಯಶಸ್ಸು ಗಳಿಸಿದ್ದಾರೆ.

ಸಂಯುಕ್ತ ಜನತಾದಳ ಪಕ್ಷದ ಗತಿಯೂ ಭಿನ್ನವಲ್ಲ . ಪಕ್ಷದ ರಾಜ್ಯಾಧ್ಯಕ್ಷ ಸೋಮಶೇಖರ್‌ ಮಳವಳ್ಳಿಯಲ್ಲಿ ಸೋಲು ಕಂಡಿದ್ದಾರೆ. ಇನ್ನು , ಜಾತ್ಯತೀತ ಜನತಾದಳ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮೆರೆದಿದ್ದರೂ- ಲೋಕಸಭೆ ಮಟ್ಟಿಗೆ ನಿರಾಶಾದಾಯಕ ಪ್ರದರ್ಶನ. ಪಕ್ಷದ ಧುರೀಣ ದೇವೇಗೌಡರದು ಮಿಶ್ರ ಸಾಧನೆ. ಕನಕಪುರದಲ್ಲಿ ತೇಜಸ್ವಿನಿ ಶ್ರೀರಮೇಶ್‌ ವಿರುದ್ಧ ಹೀನಾಯ ಸೋಲವುಂಡಿರುವ ದೇವೇಗೌಡ, ಹಾಸನದಲ್ಲಿ ಶ್ರೀಕಂಠಯ್ಯನವರ ವಿರುದ್ಧ ಗೌರವಾರ್ಹ ಜಯ ಗಳಿಸಿದ್ದಾರೆ. ಆದರೆ, ಕನಕಪುರದ ಸೋಲು ಗೌಡರನ್ನು ಕಂಗೆಡಿಸಿರುವುದು ಸತ್ಯ. ಆ ಕಾರಣದಿಂದಲೇ ಜಾತ್ಯತೀತ ಜನತಾದಳದ ಗುರುವಾರದ ವಿಜಯೋತ್ಸವದಲ್ಲಿ ಮಿಂಚಿದ್ದು ದೇವೇಗೌಡರಲ್ಲ - ಪಿಜಿಆರ್‌ ಸಿಂಧ್ಯ !

ಮಾಹಿತಿ ತಂತ್ರಜ್ಞಾನ ಕ್ಷೇತ್ರದ್ದೇನು ಗತಿ ?

ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಹಾಗೂ ಕರ್ನಾಟಕದ ಎಸ್ಸೆಂ.ಕೃಷ್ಣರ ನಿರ್ಗಮನದಿಂದಾಗಿ ಉದ್ಭವಿಸಿರುವ ಪ್ರಶ್ನೆಯಿದು. ಇಬ್ಬರೂ ತಮ್ಮ ಆಡಳಿತಾವಧಿಯಲ್ಲಿ ಮಾಹಿತಿ ತಂತ್ರಜ್ಞಾನ ್ಫಕ್ಷೇತ್ರಕ್ಕೆ ಇನ್ನಿಲ್ಲದ ಮಹತ್ವ ನೀಡಿದ್ದರು. ಕರ್ನಾಟಕ ಹಾಗೂ ಆಂಧ್ರ ದೇಶದ ಐಟಿ ನಕ್ಷೆಯಲ್ಲಿ ಮುಂಚೂಣಿಯಲ್ಲಿದ್ದರು. ನಾಯ್ಡು-ಕೃಷ್ಣರ ಐಟಿ ಪ್ರೇಮವನ್ನು ಲೇವಡಿ ಮಾಡುತ್ತಲೇ ಅಧಿಕಾರಕ್ಕೆ ಬಂದಿರುವ ಪಕ್ಷಗಳ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಗತಿಯೇನು ?

ಎಸ್ಸೆಂ.ಕೃಷ್ಣ ಈ ಕುರಿತು ಏನನ್ನೂ ಹೇಳುತ್ತಿಲ್ಲ . ಗುರುವಾರ ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಎಸ್ಸೆಂ.ಕೃಷ್ಣ ಜಾರಿಕೆ ಉತ್ತರ ನೀಡಿದರು. ಆಂಧ್ರದ ಕಾಂಗ್ರೆಸ್‌ ನಾಯಕ ವೈ.ಎಸ್‌.ರಾಜಶೇಖರ ರೆಡ್ಡಿ ತಮ್ಮ ಆದ್ಯತೆ ಗ್ರಾಮೀಣ ಪ್ರದೇಶದ ಸಮಸ್ಯೆಗಳತ್ತ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಐಟಿ ಕಂಪನಿಗಳಿಗಿದು ಚಿಂತೆಯ ಕಾಲ !

ಶುಕ್ರವಾರ (ಮೇ14) ಜಾತ್ಯತೀತ ಜನತಾದಳ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆ ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಣಯಿಸುವ ಸಭೆಯೂ ಹೌದು. ಆ ಮಟ್ಟಿಗೆ ದೇವೇಗೌಡರಿಗೆ ಕಿಂಗ್‌ಮೇಕರ್‌ ಪಟ್ಟ ಸಲ್ಲುತ್ತದೆ.

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X