ಬರ ಕಾಮಗಾರಿಗಳಲ್ಲಿ ಸಚಿವರ ಪಾಲ್ಗೊಳ್ಳುವಿಕೆಗೆ ಕೃಷ್ಣ ವಕಾಲತ್ತು
ಬೆಂಗಳೂರು : ಬರ ಪರಿಹಾರ ಕಾರ್ಯಕ್ರಮಗಳಲ್ಲಿ ಸಚಿವರನ್ನು ತೊಡಗಿಸಿಕೊಳ್ಳಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ಬರಗಾಲವಿದ್ದು , ಬರ ಪರಿಹಾರ ಕಾರ್ಯಕ್ರಮಗಳಲ್ಲಿ ಸಚಿವರ ಭಾಗವಹಿಸುವಿಕೆ ಅಗತ್ಯವಾಗಿದೆ. ಆ ಕಾರಣದಿಂದಾಗಿ ಪರಿಹಾರ ಕಾಮಗಾರಿಗಳಲ್ಲಿ ಸಚಿವರು ಭಾಗವಹಿಸುವುದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆಯೇ ಎನ್ನುವ ಕುರಿತು ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿ ಕೃಷ್ಣ ಚುನಾವಣಾ ಆಯೋಗವನ್ನು ಕೋರಿದ್ದಾರೆ. ಈ ವಿಷಯವನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೃಷ್ಣ ತಿಳಿಸಿದರು. ಎಲ್ಲ ಕಾರ್ಯಕ್ರಮಗಳನ್ನು ಅಧಿಕಾರಿಗಳ ಮೂಲಕವೇ ಜಾರಿಗೊಳಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಕೃಷ್ಣ ಈ ಪತ್ರ ಬರೆದಿದ್ದಾರೆ.
ಕುಡಿಯುವ ನೀರು ಸರಬರಾಜು, ಜಾನುವಾರುಗಳಿಗೆ ಮೇವು, ಉದ್ಯೋಗ ಸೃಷ್ಟಿ ಮುಂತಾದ ಬರ ಪರಿಹಾರ ಕಾಮಗಾರಿಗಳಲ್ಲಿ ಸಚಿವರು ಪಾಲ್ಗೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಸಕ್ರಿಯವಾಗಿದ್ದರೂ, ಸಚಿವರ ಮೇಲುಸ್ತುವಾರಿ ಹಾಗೂ ನಿಯಂತ್ರಣ ಬೇಕಾಗಿದೆ. ಆದುದರಿಂದ ಚುನಾವಣಾ ಆಯೋಗದ ಅನುಮತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಕೃಷ್ಣ ಹೇಳಿದರು.
ಕಳೆದ ವಾರವಷ್ಟೇ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಕಾರ್ಯಗಳನ್ನು ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಸಚಿವರನ್ನು ಕಾಮಗಾರಿಗಳಿಂದ ದೂರವಿಡುವಂತೆ ಕೃಷ್ಣಮೂರ್ತಿ ನಿರ್ದೇಶಿಸಿದ್ದರು.(ಪಿಟಐ)












Click it and Unblock the Notifications