ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಹೆಂಗಸಿನ ಮರಪ್ರೀತಿನಗರ ಪಾಲಿಕೆಯ ಕೊಡಲಿ ನೀತಿ

By Staff
|
Google Oneindia Kannada News

ಬೆಂಗಳೂರು ಹೆಂಗಸಿನ ಮರಪ್ರೀತಿ
ನಗರ ಪಾಲಿಕೆಯ ಕೊಡಲಿ ನೀತಿ
ಇನ್ನೂರು ಮರಗಳ ಚೆಂದದ ಪುಟ್ಟ ಕಾಡು
ಗರಗಸಕ್ಕೆ ಸಿಕ್ಕಿ ಬೋಳಾಯಿತು ನೋಡು
ನಿಂತಿತು ದೂರದೂರಿನ ಅತಿಥಿ ಹಕ್ಕಿಹಾಡು

*ವಿಘ್ನೕಶ್ವರ ಕುಂದಾಪುರ

ಬೆಂಗಳೂರು : ನಗರದ ಬಿಟಿಎಂ ಬಡಾವಣೆಯ 16 ಹಾಗೂ 17ನೇ ಮುಖ್ಯರಸ್ತೆಯ ನಡುವೆ ಚೆಂದದೊಂದು ಪಾರ್ಕು. 100 ಅಡಿ ಉದ್ದ ಪಾರ್ಕಿನಲ್ಲಿ ಒಂದು ಆಟದ ಬಯಲು. ಆಮೇಲೆ ಸಣ್ಣ ಪುಟ್ಟ ಗಿಡಗಳು. ಪಾರ್ಕಿನ ತುಟ್ಟ ತುದಿಯಲ್ಲಿ ಪುಟ್ಟದೊಂದು ದಟ್ಟಾರಣ್ಯ. ಹಿಮಾಲಯನ್‌ ಪೈನ್‌ನಂಥಾ ಮರಗಳೂ ಸೇರಿದಂತೆ ಸುಮಾರು 200 ಕಾಡು ಮರಗಳು. ಈ ಪುಟ್ಟ ಕಾಡಲ್ಲಿ ದೂರದೂರಿನ ಅತಿಥಿ ಹಕ್ಕಿ ಹಾಡು.

ಈಗ ಇದು ಬರಿ ಕನಸು. ನಡೆ ರಸ್ತೆ (ಫುಟ್‌ಪಾತ್‌) ಯನ್ನು ಅಗಲವಾಗಿಸುವ ಸಲುವಾಗಿ ಬೆಂಗಳೂರು ಮಹಾನಗರ ಪಾಲಿಕೆ (ಬಿಸಿಸಿ) ಯ ಮರಕಟುಕರು ಕಾಡಿನ ನೂರಕ್ಕೂ ಹೆಚ್ಚು ಮರಗಳನ್ನು ಕೆಡವಿ ಹಾಕಿದರು. ಹಕ್ಕಿಗಳು ಹಾರಿದವು. ಕಾಡಿನ ಎದುರಿನ ಮನೆಯಾಂದರಿಂದ ಹೊರಬಂದ ಹೆಂಗಸಿನ ಕಣ್ಣಲ್ಲಿ ನೀರು ತುಂಬಿತ್ತು.

A Bangalore Tree Lover is cryingಆ ಹೆಂಗಸಿನ ಹೆಸರು ಡಾ. ಮಂಜುಳಾ ರಾವ್‌. ಈಕೆಯ ಗಂಡ ಸಿವಿಲ್‌ ಸರ್ವೆಂಟ್‌. ಹೀಗಾಗಿ ವಾಸವಿರುವುದು ಸಿವಿಲ್‌ ಸರ್ವೆಂಟ್ಸ್‌ಗೆ ಮೀಸಲಾದ ಬಡಾವಣೆಯಲ್ಲೇ. ಈ ಬಡಾವಣೆಯ ಇನ್ನೊಂದು ಬದಿಗೆ ಪರ್ಯಾಯವಾಗಿ ಕಡಿಮೆ ಪಗಾರ ಸಿಗುವ ಮಧ್ಯಮ ವರ್ಗದವರು ವಾಸಿಸುತ್ತಾರೆ. ಮಂಜುಳಾ ರಾವ್‌ ಕಣ್ಣಲ್ಲಿ ನೀರು ತುಂಬಿಕೊಳ್ಳಲು ಕಾರಣ- ಮರಕಟುಕರ ಕೊಡಲಿಗೆ ಬಲಿಯಾಗಿದ್ದ ಎಷ್ಟೋ ಮರಗಳಿಗೆ ಈಕೆಯೇ ತಾಯಿ !

ದಶಕಗಳ ಹಿಂದೆ ಕೇರಳದ ಕೆಂಪು ಬಿದಿರು, ಮಲೆನಾಡಿನ ಸರಿಗಿ, ಪಡರಿ ಮೊದಲಾದ ಸಸಿಗಳನ್ನು ಮಂಜುಳಾ ತಂದು ನೆಟ್ಟು, ಗೊಬ್ಬರದ ಊಟ ಹಾಕಿ, ನೀರುಣಿಸಿ ದನ- ಕರುಗಳಿಂದ ಕಾಪಾಡಿದ್ದರು. ವರ್ಷಗಳ ನಂತರ ಮನೆ ಮುಂದಿನ ಪಾರ್ಕಿನಲ್ಲಿ ಸುಮಾರು 200 ಮರಗಳ ಚೆಂದದ ಪುಟ್ಟ ಕಾಡು ತಲೆಯೆತ್ತಿ ನಿಂತಿತು. ಆ ಜಾಗವನ್ನು ಉದ್ಯಾವನ್ನಾಗಿ ಮಹಾನಗರ ಪಾಲಿಕೆ ಪರಿವರ್ತಿಸಿದಾಗಲೂ ಮರಗಳನ್ನು ಹಾಗೇ ಉಳಿಸಿಕೊಂಡಿತು. ಬೆಳಗ್ಗೆ ಹಾಗೂ ಸಂಜೆ ವಾಕಿಂಗ್‌ ಮಾಡುವವರ ಪಾಲಿಗೆ ಈ ಕಾಡಿನ ಹಸುರು ನೋಡುವ ಭಾಗ್ಯ. ಜೂನ್‌- ಜುಲೈ ಬಂತೆಂದರೆ ಕ್ರೇನ್ಸ್‌, ಇಗ್ರೆಟ್ಸ್‌ನಂಥಾ ವಲಸೆ ಹಕ್ಕಿಗಳೂ ಈ ಪುಟ್ಟ ಕಾಡಲ್ಲಿ ಹಾಡು ಹಾಡುತ್ತಿದ್ದವು. ಈ ಹಕ್ಕಿಗಳ ದಾಹ ತಣಿಸಲು ಹತ್ತಿರದಲ್ಲೇ ಮಡಿವಾಳ ಕೆರೆಯಿತ್ತು.

ಅದು 1999. ಬೆಂಗಳೂರು ಮಹಾನಗರ ಪಾಲಿಕೆ ನಡೆದಾರಿ ನಿರ್ಮಿಸಲು ಟೆಂಡರ್‌ ಕರೆದೇಬಿಟ್ಟಿತು. ಪಾಲಿಕೆಯ ಕಟುಕರು ಸುಮಾರು 100 ಮರಗಳನ್ನು ನೆಲಕ್ಕುರುಳಿಸಿದರು. ಇಲ್ಲೊಂದು ನಡೆದಾರಿ ಬೇಕು ಎಂಬುದು ಜಾಗಿಂಗ್‌ ಬರುವವರ ಬಯಕೆಯಾಗಿತ್ತು. ಆದರೆ, ಮರ ಉರುಳಿಸಿ ಪಾಲಿಕೆ ಈ ಕೆಲಸ ಮಾಡುತ್ತದೆ ಎಂಬುದನ್ನು ಮಂಜುಳಾ ಕನಸಲ್ಲೂ ಎಣಿಸಿರಲಿಲ್ಲ. ಸುಮ್ಮನೆ ಕೂರುವ ಜಾಯಮಾನದವರಲ್ಲದ ಮಂಜುಳಾ, ಮಹಾನಗರ ಪಾಲಿಕೆಯ ಮರಕಟುಕತನವನ್ನು ಪ್ರಶ್ನಿಸಿ ಕೋರ್ಟಿನ ಮೆಟ್ಟಿಲು ಹತ್ತಿದರು. ಬರುವ ನವೆಂಬರ್‌ 15ನೇ ತಾರೀಕು ಕೋರ್ಟಿನ ವಿಚಾರಣೆಯಿದೆ. ಆದರೆ, ಮಂಜುಳಾ ಅಲ್ಲಿ ಕೋರ್ಟಿಗೆ ಎಡತಾಕುವ ಹೊತ್ತಿಗೇ ಇಲ್ಲಿ ಸಾಕಷ್ಟು ಮರಗಳು ಬೋಳಾಗಿ ಹೋಗಿದ್ದವು. ‘ಕನಿಷ್ಠ ಪಕ್ಷ ಕೋರ್ಟಿನ ವಿಚಾರಣೆ ಮುಗಿಯುವವರೆಗಾದರೂ ಪಾಲಿಕೆ ಸುಮ್ಮನಿರಬೇಕಿತ್ತು. ಅದಕ್ಕೆ ಹಸಿರಿನ ಬಗ್ಗೆ ಕಳಕಳಿಯೇ ಇಲ್ಲ ’ ಎಂದು ಮಂಜುಳಾ ಅಲವತ್ತುಕೊಳ್ಳುತ್ತಾರೆ.

ಕೆಲವೇ ವರ್ಷಗಳ ಹಿಂದೆ ತಮ್ಮ ಮನೆ ಮುಂದಿನ ಹುಲ್ಲು ಹಾಸಿನಲ್ಲಿ ಗಿಳಿ, ಮರಕುಟಕಗಳು ಆಡುತ್ತಿದ್ದುದನ್ನು ಮಂಜುಳಾ ನೆನೆಯುತ್ತಾರೆ. ಮನೆ ಮುಂದಿನ ಕಾಡು ಎಷ್ಟು ಬೋಳಾಗಿದೆ ಎಂದರೆ, ಎದುರು ಬೀದಿಯವರನ್ನು ಸನ್ನೆ ಮಾಡಿ ಈಗ ಕರೆಯಬಹುದು. ಮೊದಲು ಹಾಗಾಗುತ್ತಿರಲಿಲ್ಲ. ನಡೆರಸ್ತೆ ಬೇಕೆಂದು ಜಾಗರ್ಸ್‌ ಯಾಕೆ ಬಯಸಿದರೋ ಎಂದು ವಿಷಾದಿಸುತ್ತಾ ನಿಲ್ಲುವ ಮಂಜುಳಾ ಅವರ ಕಣ್ಣಲ್ಲಿ ಸಣ್ಣಗೆ ನೀರಾಡುತ್ತೆ. ಈಕೆಯ ಮರಪ್ರೀತಿಯನ್ನು ಕಾಪಾಡುವ ಜರೂರತ್ತು ಮಾತ್ರ ಪಾಲಿಕೆಗೆ ಅರಿವಾಗುತ್ತಿಲ್ಲ !

Post your views

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X