ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಪಾರ್ಕಿಂಗ್‌ ಪರದಾಟ

By Staff
|
Google Oneindia Kannada News

ಬೆಂಗಳೂರಿನ ಪಾರ್ಕಿಂಗ್‌ ಪರದಾಟ
‘ಅಮೆರಿಕೆಯಲ್ಲಿ ಪಾರ್ಕಿಂಗ್‌ ಲಾಟಲ್ಲಿ ಪ್ರೀತಿ ಮಾಡ್ತಾರೆ’ ಎಂಬ ಹಾಡು ಬೆಂಗಳೂರಿಗರ ಪಾಲಿಗೆ ಕನಸೇ ಸರಿ. ಪ್ರೇಯಸಿಗೋ ಹೆಂಡತಿಗೋ ಐಸ್‌ ಕ್ರೀಮ್‌ ತಿನ್ನಿಸಿ, ಬಟ್ಟೆ ಕೊಡಿಸಿ, ಹೊಟೇಲಲ್ಲಿ ದೋಸೆ ಕೊಡಿಸುವಷ್ಟರಲ್ಲಿ ಐಸ್‌ಕ್ರೀಮಿಗೆ ಕೊಟ್ಟಷ್ಟೇ ಹಣವನ್ನು ಪಾರ್ಕಿಂಗ್‌ ಫೀಸ್‌ ರೂಪದಲ್ಲಿ ಕೊಟ್ಟಿರುತ್ತೀರಿ !

*ಎಂ.ವಿನೋದಿನಿ

ಸಂಜೆ ಹೊತ್ತು ಶಾಪಿಂಗ್‌ ಹೊರಟಿರಾ.. ? ಕಿಸೆಯಲ್ಲಿ ಪಾರ್ಕಿಂಗ್‌ಗೆ ಅಂತ ಹತ್ತು ಹನ್ನೆರಡು ರೂಪಾಯಿ ಚಿಲ್ಲರೆಯಾದರೂ ಇಟ್ಟುಕೊಳ್ಳಿ. ಕಿಸೆಯಲ್ಲಿ ಕಾಸಿದ್ದರೆ ಪಾರ್ಕಿಂಗ್‌ ಸಲೀಸು ಅಂತೇನಿಲ್ಲ. ನೀವು ಯಾವ ಏರಿಯಾದಲ್ಲಿ ಶಾಪ್ಪಿಂಗ್‌ ನಡೆಸುತ್ತೀರಿ ಎಂಬುದನ್ನೂ ಪಾರ್ಕಿಂಗ್‌ ಅವಲಂಬಿಸಿದೆ. ಹಾಗೇ ಪಾರ್ಕಿಂಗ್‌ ಫೀಸೂ ಕೂಡ.

ತಕರಾರಿರುವುದು ಫೀಸಿನ ವಿಷಯದಲ್ಲಲ್ಲ. ಪಾರ್ಕಿಂಗ್‌ ಫೀಸು ಕೊಟ್ಟರೂ ಗಾಡಿಯನ್ನು ಪಾರ್ಕ್‌ ಮಾಡುವುದಕ್ಕೆ ಕ್ಯೂ ನಿಲ್ಲಬೇಕು. ಪಾರ್ಕಿಂಗ್‌ನಲ್ಲಿ ಖಾಲಿ ಜಾಗವೇ ಇರುವುದಿಲ್ಲ. ಯಾರಾದರೂ ಪುಣ್ಯಾತ್ಮರು ಬಂದು ಗಾಡಿಯನ್ನು ಪಾರ್ಕಿಂಗ್‌ನಿಂದ ಆಚೆಗೆ ತೆಗೆಯುವವರೆಗೆ ಬೈಕನ್ನು ಮೈಗೆ ಆನಿಸಿಕೊಂಡು ನಿಲ್ಲಬೇಕು. ಕಾರಾದರೆ ಇನ್ನೊಂದು ಸುತ್ತು ಗಿರಕಿ ಹೊಡೆದು ಪೆಟ್ರೋಲ್‌ ಸುಡುವ ಜರೂರತ್ತು. ನಗರದಲ್ಲಿ ವಾಹನಗಳ ಸಂಖ್ಯೆ ಇತ್ತೀಚೆಗೆ ತೀರಾ ಏರುಮುಖವಾಗಿದೆ. ಸುಮಾರು 17 ಲಕ್ಷ ಖಾಸಗಿ ವಾಹನಗಳು ಬೆಂಗಳೂರು ರಸ್ತೆಯಲ್ಲಿ ಓಡುತ್ತಿವೆ. ತಪ್ಪು ಪಾರ್ಕಿಂಗ್‌ಗೆ ಟ್ರಾಫಿಕ್‌ಪೊಲೀಸರು ಒಂದು ವರ್ಷದಲ್ಲಿ 2 ಲಕ್ಷದ 10 ಸಾವಿರದ 209 ಕೇಸುಗಳನ್ನು ಬುಕ್‌ ಮಾಡಿದ್ದಾರೆ. ತಪ್ಪು ಪಾರ್ಕಿಂಗ್‌ನ ಕಾರಣದಿಂದಲೇ ಸುಮಾರು 80 ಅಪಘಾತಗಳು ನಡೆದಿದ್ದು , 78 ಜನ ಗಾಯಗೊಂಡ ಪ್ರಕರಣಗಳು ನಡೆದಿವೆ.

Packed Vehicles in a Parking areaಪಾರ್ಕಿಂಗ್‌ಗೆ ಜಾಗ ಇಲ್ಲದೇ ಇದ್ದರೆ, ಪಾರ್ಕಿಂಗ್‌ ಮಿತಿ ಗೆರೆಯಾಚಾಗಿನ ಜಾಗದಲ್ಲೂ ಪಾರ್ಕ್‌ಮಾಡುವ ಜನರ ದುರಭ್ಯಾಸವೂ ಪಾರ್ಕಿಂಗ್‌ ಅವಾಂತರಗಳಿಗೆ ಕಾರಣವಾಗುತ್ತದೆ ಎಂದು ಟ್ರಾಫಿಕ್‌ ಪೊಲೀಸರು ದೂರುತ್ತಾರೆ.

ದೂರುಗಳು ಎಲ್ಲ ಕಡೆಯಿಂದಲೂ ಬರುವಂತಹುದೇ. ಗಾಂಧಿಬಜಾರ್‌ನ ರೋಟೀ ಘರ್‌ಗೆ ಹೋಗಿ ಜಾಮೂನು ತಗೊಂಡು ಬರುವಾಗ ಎರಡು ರೂಪಾಯಿ ಪಾರ್ಕಿಂಗ್‌ ಶುಲ್ಕ ಕಟ್ಟಿದ್ದಾಗಿರುತ್ತದೆ. ವಾಪಸ್ಸು ಬರ್ತಾ ರೋಟಿ ಘರ್‌ನಲ್ಲಿಯೇ ಕೈ ಚೀಲ ಬಿಟ್ಟು ಬಂದಿರುವುದು ನೆನಪಾಗುತ್ತದೆ. ಮತ್ತೆರಡು ರೂಪಾಯಿ ಪಾರ್ಕಿಂಗ್‌ ಚಾರ್ಜ್‌ ಕೊಡುವಾಗ ಬೇಜಾರಾಗುವುದಿಲ್ಲವಾ ? ಅಲ್ಲಿಂದ ಬುಲ್‌ ಟೆಂಪಲ್‌ಗೆ ಹೋದಿರೆಂದರೆ ಮತ್ತೆ ಪಾರ್ಕಿಂಗ್‌ ಚಾರ್ಜು, ಚಪ್ಪಲಿ ಕಾಯುವಾತನಿಗೆ ಪ್ರತ್ಯೇಕ ಚಾರ್ಜು! ಹೀಗೆ ಪುಡಿಗಾಸನ್ನು ನುಂಗಿ ನುಂಗಿ, ಕಿಸೆ ಖಾಲಿಮಾಡುವ ಪಾರ್ಕಿಂಗ್‌ಗೋಸ್ಕರ ಬೇರೆ ಜಾಗಗಳನ್ನು ಜನ ಹುಡುಕಿಕೊಳ್ಳುತ್ತಾರೆ. ಉದಾಹರಣೆಗೆ ರೋಟಿ ಘರ್‌ಮುಂದೆ ವಾಹನ ನಿಲ್ಲಿಸದೇ, ಅಲ್ಲೇ ತುಸು ದೂರ ಇರುವ ಪಾಪಡಿವಾಲಾ ಹೋಟೆಲ್‌ ಮುಂದೆ ನಿಲ್ಲಿಸುತ್ತಾರೆ. - ಇದು ಕಾಸು ಬಚಾವ್‌ ಮಾಡುವ ಕಿತಾಪತಿಯಾದರೆ ದುಡ್ಡು ಕೊಟ್ಟರೂ ಪಾರ್ಕಿಂಗ್‌ಗೆ ಜಾಗ ಸಿಗದೇ ಇರುವ ಕಡೆಗಳಲ್ಲಿ ವಾಹನ ಚಾಲಕರದು ಇನ್ನೊಂದು ಪರಿಪಾಟಲು. ಒಂದು ಮೊಪೆಡ್‌ಗೂ ಇನ್ನೊಂದು ಮೊಪೆಡ್‌ ನಡುವಿನ ಅಂತರವನ್ನು ವಿಸ್ತರಿಸುವ ಭರದಲ್ಲಿ ಗಾಡಿಗಳನ್ನು ಸ್ಕ್ಯಾೃಚ್‌ ಮಾಡುವ ಆತುರಗಾರರೂ ಇಲ್ಲುಂಟು.

ಕಾರನ್ನು ಪಾರ್ಕ್‌ ಮಾಡಿ, ಆಟೋ ಹತ್ತುವ ಉಳ್ಳವರು

M.G.Road : Vehicles everywhereಬೆಂಗಳೂರಿನ ಬಸವೇಶ್ವರನಗರದಿಂದ ಚಿಕ್ಕಪೇಟೆಯಲ್ಲಿ ರೇಷ್ಮೆ ಸೀರೆ ಖರೀದಿಸಲು ರಾಜೇಂದ್ರ ಶರ್ಮ ತಮ್ಮ ಮನೆಯವರೊಂದಿಗೆ ಹೊರಡುತ್ತಾರೆ. ಆದರೆ ಕಾರು ನೇರವಾಗಿ ಮೆಜೆಸ್ಟಿಕ್‌ನ ಕೆಎಸ್ಸಾರ್ಟಿಸಿ ಬಸ್‌ಸ್ಟ್ಯಾಂಡಲ್ಲಿ ಪಾರ್ಕಾಗುತ್ತೆ. ಅಲ್ಲಿ ರಾಜೇಂದ್ರ ಅಂಡ್‌ ಪ್ಯಾಮಿಲಿ ಆಟೋ ಹತ್ತುತ್ತೆ. ಚಿಕ್ಕಪೇಟೆಗೆ ಆಟೋ ಸವಾರಿ. ಸೀರೆ ಖರೀದಿ ನಂತರ ಮತ್ತೆ ಮೆಜೆಸ್ಟಿಕ್ಕಿಗೆ ಆಟೋ. ಅಲ್ಲಿಂದ ಮನೆಗೆ ಕಾರು ! ಇದಕ್ಕೆ ಪಾರ್ಕಿಂಗ್‌ ತೊಂದರೆಯೇ ಕಾರಣ. ಉಳ್ಳವರ ‘ಕಾರು’ಬಾರೇನೋ ಹೀಗೆ ನಡೆಯುತ್ತೆ. ಆದರೆ, ಸಾಲ ಮಾಡಿ ಬಡವರ ಮಾರುತಿ ಕಾರ್‌ ಕೊಂಡವರು ಏನು ಮಾಡಬೇಕು?

ಬೆಂಗಳೂರಲ್ಲಿ ಮನೆಗೊಂದು ಕಾರು, ಎರಡು ಮೂರು ಟೂ ವ್ಹೀಲರ್ರು- ಎಲ್ಲಾ ಮನೆ ಮುಂದೆ ನಿಂತಿದ್ದು, ಮಹಾನಗರ ಪಾಲಿಕೆ ಬಸ್‌ಗಳಲ್ಲಿ ಪಾಸ್‌ ಮಾಡಿಸಿಕೊಂಡು ಓಡಾಡುವವರೂ ಇಲ್ಲುಂಟು. ಯಾಕೆ ಅಂತ ಕೇಳಿ ನೋಡಿ, ಟ್ರಾಫಿಕ್‌ ಪ್ರಾಬ್ಲಮ್ಮು ಮತ್ತು ಪಾರ್ಕಿಂಗ್‌ ಕಿರಿಕ್ಕಿನಿಂದ ಹೀಗೆ ಮಾಡಬೇಕಾಗಿದೆ ಎಂಬ ಉತ್ತರ ಸಿಗುತ್ತೆ. ಬೆಂಗಳೂರಂದ್ರೆ ತಮಾಷೀನಾ?

ನಿಮಗೂ ಪಾರ್ಕಿಂಗ್‌ ವಿಷಯದಲ್ಲಿ ರಸವತ್ತಾದ ಅನುಭವ ಇರಬಹುದು, ಹಂಚಿಕೊಳ್ಳುವಂಥವರಾಗಿ.

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X