ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿದಾನಂದಮೂರ್ತಿ ನೇತೃತ್ವದಲ್ಲಿ ‘ಬರ ಪರಿಹಾರ ನಿಧಿ’

By Staff
|
Google Oneindia Kannada News

ಚಿದಾನಂದಮೂರ್ತಿ ನೇತೃತ್ವದಲ್ಲಿ ‘ಬರ ಪರಿಹಾರ ನಿಧಿ’
ಬರ ಸಂತ್ರ್ತರ ನೆರವಿಗೆ ಬರಹಗಾರರು ಹಾಗೂ ಬುದ್ಧಿಜೀವಿಗಳು

ಬೆಂಗಳೂರು : ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಬರ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸುವ ಉದ್ದೇಶದ ‘ಬರ ಪರಿಹಾರ ನಿಧಿ’ಯಾಂದನ್ನು ಸ್ಥಾಪಿಸಲಾಗಿದೆ.

ನವಂಬರ್‌ 1ರಿಂದ ‘ಬರ ಪರಿಹಾರ ನಿಧಿ’ ಜಾರಿಗೆ ಬರಲಿದ್ದು - ಚಿಂತಕರು, ಗಣ್ಯರು, ಬುದ್ಧಿಜೀವಿಗಳನ್ನೊಳಗೊಂಡ ಬೆಂಗಳೂರಿನ ಕನ್ನಡ ಬಳಗ ಈ ನಿಧಿಯನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲಿರುವ ಬಿಎಂಶ್ರೀ, ತೀನಂಶ್ರೀ ಹಾಗೂ ಕುವೆಂಪು ಅವರ ಪ್ರತಿಮೆಗಳಿಗೆ ರಾಜ್ಯೋತ್ಸವ ದಿನ (ನ.1)ದಂದು ಪುಷ್ಪಮಾಲೆ ಅರ್ಪಿಸುವ ಮೂಲಕ ‘ಬರ ಪರಿಹಾರ ನಿಧಿ’ಗೆ ಚಾಲನೆ ದೊರೆಯಲಿದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿದಾನಂದಮೂರ್ತಿ ತಿಳಿಸಿದ್ದಾರೆ. ಸೋಮವಾರ (ಅ.20) ಸುದ್ದಿಗೋಷ್ಠಿಯಲ್ಲಿ ಬರ ಪರಿಹಾರ ನಿಧಿಯ ಕುರಿತು ವಿವರಗಳನ್ನು ಚಿಮೂ ನೀಡಿದರು.

ಬರ, ಪ್ರವಾಹ, ಭೂಕಂಪ ಮುಂತಾದ ಪ್ರಕೃತಿ ವಿಕೋಪಗಳು ಉಂಟಾದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡುವುದು ಪ್ರಜ್ಞಾವಂತರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಿಧಿ ಸ್ಥಾಪಿಸಲಾಗಿದ್ದು , ಆರಂಭಿಕ ಪ್ರತಿಕ್ರಿಯೆ ಚೆನ್ನಾಗಿದೆ ಎಂದು ಚಿಮೂ ತಿಳಿಸಿದ್ದಾರೆ.

ಸಂಗ್ರಹವಾಗುವ ಹಣವನ್ನು ಧಾನ್ಯರೂಪಕ್ಕೆ ಪರಿವರ್ತಿಸಿ, ಬರಪೀಡಿತ ಹಳ್ಳಿಗಳಲ್ಲಿ ನೇರವಾಗಿ ವಿತರಿಸಲಾಗುವುದು ಎಂದು ಚಿಮೂ ಹೇಳಿದರು.

ಸರಳ ರಾಜ್ಯೋತ್ಸವ : ರಾಜ್ಯದಲ್ಲಿ ತಾಂಡವವಾಡುತ್ತಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಬೇಕು ಎಂದು ಕನ್ನಡಿಗರಲ್ಲಿ ಚಿಮೂ ಮನವಿ ಮಾಡಿದ್ದಾರೆ.

ಎಲ್ಲ ಕನ್ನಡ ಅಭಿಮಾನಿಗಳು ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವ ಮೂಲಕ, ಮನರಂಜನೆ ಹಾಗೂ ವೈಭವಕ್ಕೆ ಖರ್ಚು ಮಾಡುವ ಹಣವನ್ನು ಬರ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಚಿದಾನಂದಮೂರ್ತಿ ಸಾರ್ವಜನಿಕರನ್ನು ಕೋರಿದ್ದಾರೆ.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದಕ್ಕೆ ಬರದೊಂದಿಗೆ ಕೇಂದ್ರದ ಕೃಷಿ ನೀತಿಯೂ ಕಾರಣವಾಗಿದೆ. ಕೃಷಿಪರ ನೀತಿಯನ್ನು ರಾಜ್ಯದಲ್ಲಿ ರೂಪಿಸಬೇಕಾದ ಅಗತ್ಯವಿದೆ. ಕಾರ್ಮಿಕ ಕಲ್ಯಾಣ ನಿಧಿ ಮಾದರಿಯಲ್ಲಿ ರೈತ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಚಿಮೂ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಪೆಡಂಭೂತವಾಗಿ ಪರಿಣಮಿಸಿರುವ ಆನ್‌ಲೈನ್‌ ಲಾಟರಿಯನ್ನು ರದ್ದುಗೊಳಿಸಬೇಕು ಎಂದು ಚಿಮೂ ಅಭಿಪ್ರಾಯಪಟ್ಟರು.

‘ಬರ ಪರಿಹಾರ ನಿಧಿ’ಗೆ ದೇಣಿಗೆ ನೀಡುವುದು ಹೇಗೆ ?

ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿನ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಸ್ಥಾಪಿಸಲಾಗಿರುವ ‘ಬರ ಪರಿಹಾರ ನಿಧಿ’ಯ ಚಾಲ್ತಿ ಖಾತೆಗೆ ಹಣ ಸಂದಾಯ ಮಾಡಬಹುದು. ಖಾತೆಯ ಸಂಖ್ಯೆ- 01000055096.

ಅಂಚೆ ಮೂಲಕ ಹಣ ಕಳುಹಿಸುವವರಿಗೆ ವಿಳಾಸ : ಡಾ.ಎಂ.ಚಿದಾನಂದಮೂರ್ತಿ, 6 /ಎ, 4ನೇ ತಿರುವು, 11ನೇ ಮುಖ್ಯರಸ್ತೆ , ವಿಜಯನಗರ 2ನೇ ಹಂತ, ಬೆಂಗಳೂರು- 560 040.
ಅಥವಾ
ರಾ.ನಂ. ಚಂದ್ರಶೇಖರ, 1, ಶ್ರೀ ನಿಲಯ, ಮಾರಮ್ಮ ದೇವಸ್ಥಾನ ರಸ್ತೆ , ಬನಶಂಕರಿ 3ನೇ ಹಂತ, ಬೆಂಗಳೂರು- 560 085.

‘ಬರ ಪರಿಹಾರ ನಿಧಿ’ ಸಂಚಾಲಕರು : ಇಂದಿರಾ ಹೆಗ್ಗಡೆ, ರಾ.ನಂ.ಚಂದ್ರಶೇಖರ,

‘ಬರ ಪರಿಹಾರ ನಿಧಿ’ ಸಲಹೆಗಾರರ ಮಂಡಳಿ : ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌, ಡಾ.ಎಚ್‌.ಎಂ.ಮರುಳಸಿದ್ಧಯ್ಯ, ಎಚ್‌.ಎಸ್‌.ಪಾರ್ವತಿ, ಡಾ.ಜಿ.ರಾಮಕೃಷ್ಣ ಹಾಗೂ ಸಿದಯ್ಯ.

ಒಳ್ಳೆಯ ಕೆಲಸಕ್ಕೆ ಮುಂದಾಗಿ, ಬರ ಪರಿಹಾರ ನಿಧಿಗೆ ಇಂದೇ ನೆರವು ನೀಡಿ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X