ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ ರಾಜಲಕ್ಷ್ಮಿ ಕಥೆಗೆ ಬಹುಮಾನ

By Staff
|
Google Oneindia Kannada News

ದಟ್ಸ್‌ಕನ್ನಡ ರಾಜಲಕ್ಷ್ಮಿ ಕಥೆಗೆ ಬಹುಮಾನ
ಡಾ. ಅನುಪಮಾ ನಿರಂಜನಾ ಅವರ 70ನೇ ಹುಟ್ಟುಹಬ್ಬದ ಆಚರಣೆ

ಬೆಂಗಳೂರು : ಕನ್ನಡ ವೈದ್ಯಕೀಯ ಸಾಹಿತ್ಯಕ್ಕೆ ಹೊಸ ಪರಿಭಾಷೆಯನ್ನು ಕೊಟ್ಟವರು ಡಾ. ಅನುಪಮ ನಿರಂಜನ. ಜನಪ್ರಿಯತೆಯ ಧಾಟಿಯಲ್ಲಿ ಶುರುವಾದ ಅವರ ಬರವಣಿಗೆ 70ರ ದಶಕದ ನಂತರ ಗಟ್ಟಿ ಕಾಳುಗಳನ್ನು ಹೊಮ್ಮಿಸಿತು ಎಂದು ಮಾಜಿ ಸಚಿವೆ ಹಾಗೂ ಬರಹಗಾರ್ತಿ ಬಿ.ಟಿ.ಲಲಿತಾ ನಾಯಕ್‌ ಅಭಿಪ್ರಾಯ ಪಟ್ಟರು.

ಮಂಗಳವಾರ (ಜು.01) ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ. ಅನುಪಮಾ ನಿರಂಜನ ಅವರ 70ನೇ ಹುಟ್ಟುಹಬ್ಬದ ಆಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಲಲಿತಾ ನಾಯಕ್‌ ಮಾತಾಡುತ್ತಿದ್ದರು. ಬದುಕೇ ಬರಹ ಎನ್ನುವಂತೆ ಪ್ರೀತಿ ಇಟ್ಟುಕೊಂಡಿದ್ದ ಅನುಪಮಾ ಅವರದ್ದು ಅನುಕರಣೀಯ ವ್ಯಕ್ತಿತ್ವ ಎಂದು ಹೊಗಳಿದ ಲಲಿತಾನಾಯಕ್‌, ಅವರ ಕಾದಂಬರಿಗಳ ಪಾತ್ರಗಳ ಶಕ್ತಿಯನ್ನು ನೆನಪಿಸಿದರು.

ಅನುಪಮಾ ನಿರಂಜನ ಅವರ ಬದುಕು ಬರಹವನ್ನು ವಿಮರ್ಶಕಿ ಡಾ.ಎಲ್‌.ಜಿ.ಮೀರಾ ಕಟ್ಟಿಕೊಟ್ಟರು. ಬರೆಯುವುದನ್ನು ನಿಲ್ಲಿಸಿದರೆ ತಾನು ಸತ್ತಂತೆ ಎಂದು ಭಾವಿಸಿದ್ದ ಅನುಪಮಾ ಅವರ ಗಟ್ಟಿ ವ್ಯಕ್ತಿತ್ವವನ್ನು ಅವರ ಬರವಣಿಗೆಯ ಸಹಿತ ಬಣ್ಣಿಸಿದ ಮೀರಾ, ಅವರ ‘ಆಳ’ ಕಾದಂಬರಿಯ ಗಾಢ ಕಾಡುವಿಕೆಯ ಕುರಿತು ಹೇಳುವಾಗ ಕಣ್ತುಂಬಿಕೊಂಡರು. ವಿಮರ್ಶಕರಿಗೆ ಹೆಣ್ಣು ಮನಸ್ಸು ಇರಬೇಕೆಂಬ ಅನುಪಮಾ ಅವರ ವಾದವನ್ನು ಮೀರಾ ಮತ್ತೆ ಮತ್ತೆ ಸಮರ್ಥಿಸಿದರು.

ದಟ್ಸ್‌ಕನ್ನಡದ ರಾಜಲಕ್ಷ್ಮಿ ಕಥೆಗೆ ಮೊದಲ ಬಹುಮಾನ
ಅನುಪಮಾ ಅವರ ನೆನಪಿನಲ್ಲಿ ಕನ್ನಡ ಸಂಘರ್ಷ ಸಮಿತಿ ನಡೆಸಿದ ರಾಜ್ಯ ಮಟ್ಟದ ಮಹಿಳಾ ಕಥಾ ಸ್ಪರ್ಧೆಯ ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ನೀಡಲಾಯಿತು. ದಟ್ಸ್‌ಕನ್ನಡ ಡಾಟ್‌ ಕಾಂನ ಹಿರಿಯ ಉಪ ಸಂಪಾದಕಿ ರಾಜಲಕ್ಷ್ಮಿ ಕೆ. ರಾವ್‌ ಅವರ ‘ಕೋವಿ ಮನೆ’ ಕಥೆ ಪ್ರಥಮ ಬಹುಮಾನ ಪಡೆಯಿತು. ಡಾ. ಜಯಶ್ರೀ ದಂಡೆಯವರ ‘ಧರೆಹತ್ತಿ ಉರಿದೊಡೆ’ ಕಥೆಗೆ ದ್ವಿತೀಯ ಬಹುಮಾನ ಕೊಡಲಾಯಿತು. ಡಿ.ಎಸ್‌.ಇಂದುಮತಿಯವರ ಕಥೆಗೆ ಮೂರನೇ ಬಹುಮಾನ ಸಂದಿತು. ಪುರುಷ ಕಥೆಗಾರರಿಗೂ ವಿಶೇಷ ಬಹುಮಾನವನ್ನು ಇಡಲಾಗಿದ್ದು, ಲಿಂಗದಹಳ್ಳಿ ಹಾಲಪ್ಪನವರ ‘ಒಡಲಾಳದ ಹಾಡು’ ಕತೆಗೆ ಈ ಬಹುಮಾನ ಸಿಕ್ಕಿತು.

ಕನ್ನಡ ಮತ್ತು ಸಂಸ್ಕೃತಿ ಖಾತೆಯ ಇನ್ನೊಬ್ಬ ಮಾಜಿ ಸಚಿವೆ ಹಾಗೂ ಲೇಖಕಿ ಲೀಲಾದೇವಿ ಆರ್‌ ಪ್ರಸಾದ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ರಾಮಣ್ಣ ಕೋಡಿಹೊಸಹಳ್ಳಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X