ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಿ ಮಳೆ ಸುರೀತಾ ಇದೆಯಾ ?

By Super
|
Google Oneindia Kannada News

ಊರಿಗೆ ಫೋನ್‌ ಮಾಡೋಣ ಅಂತ ಫೋನೆತ್ತಿಕೊಂಡರೆ ಕ್ಷೇಮ ಸಮಾಚಾರದಲ್ಲೇ ಮಳೆಯ ಮಾತು- 'ಅಲ್ಲಿ ಮಳೆ ಬಂತಾ ? ಇಲ್ಲಿ ಬರೇ ಮೋಡ. ಮಳೆ ಬರುತ್ತೆ ಅನ್ನುವಷ್ಟರಲ್ಲಿ ಗಾಳಿ ಬೀಸಿ ಆಕಾಶ ಸ್ವಚ್ಛ ಸ್ವಚ್ಛ. ಇಲ್ಲಿ ಮಳೆ ಸುರಿಯದಿದ್ದರೇನು, ಹಾರಿ ಹೋದ ಮೋಡಗಳಿಂದ ಎಲ್ಲಾದರೂ ಮಳೆಯಾಗಲಪ್ಪಾ. ಇಷ್ಟಕ್ಕೂ ಈ ಬೆಂಗಳೂರಲ್ಲಿ ಮಳೆಯಾದರೆ ಯಾರಿಗೆ ಉಪಯೋಗ ಉಂಟು ? ಕೊಡಗಿನಲ್ಲಿ ಮಳೆ ಕನ್ನಂಬಾಡಿಗೆ ನೀರು ಬರುತ್ತೆ, ಬೆಂಗಳೂರಿಗರಿಗೆ ಕುಡಿಯಲಿಕ್ಕೆ ನೀರು ಸಿಗುತ್ತದೆ. ಅಂತೂ ಮಳೆ ಶುರು ಹಚ್ಚಿಕೊಂಡಿತಲ್ಲ. ಈ ಮಳೆಗಾಲ ಚೆನ್ನಾಗಿ ಆಗಲಿ.

ಆದರೆ ನೋಡಿ. ಈ ಬಾರದ ಮಳೆ ಬಂದರೂ ಎಂಥಾ ಕಷ್ಟಗಳು. ಮಂಗಳೂರು, ಕಾಸರಗೋಡು ಮತ್ತು ಉಡುಪಿ ಜಿಲ್ಲೆಯಲ್ಲಿ ಸೇಡು ತೀರಿಸಿಕೊಳ್ಳಲೇನೋ ಎಂಬಂತೆ ಸುರಿಯುತ್ತಿರುವ ಮಳೆ. ಈ ಮಳೆಗೆ ಏಳು ಮಂದಿ ಬಲಿಯಾಗಿದ್ದಾರೆ.

ಅಂದಹಾಗೆ, ಈ ಮಳೆಗಾಲ ಕರಾವಳಿಯಲ್ಲಿ ಸತ್ತವರ ಒಟ್ಟು ಸಂಖ್ಯೆ 11. ಮಂಗಳೂರು- ಉಡುಪಿ ಹೆದ್ದಾರಿಯಲ್ಲಿ ಭೂ ಕುಸಿತ, ಉಡುಪಿ ಪೇಟೆಯಲ್ಲಿ ಭರಫೂರ ನೆರೆ, ನೀರುಪಾಲಾಗುತ್ತಿರುವ ಗುಡಿಸಲುಗಳು... ಕರಾವಳಿಯಲ್ಲಿ ನಷ್ಟ ಕೋಟಿ ಕೋಟಿ. ಗೋಕರ್ಣ-ಅಂಕೋಲ ಮತ್ತು ಮಂಗಳೂರು- ಕಣ್ಣೂರು ಮಾರ್ಗದಲ್ಲಿ ಭೂಕುಸಿತ ಆಗಿರುವುದರಿಂದ ರೈಲುಮಾರ್ಗಗಳನ್ನೆಲ್ಲಾ ಬದಲಿಸಲಾಗಿದೆ.

ಹೀಗೆ ಅಲ್ಲಿ , ಕರಾವಳಿಯಲ್ಲಿ ನಿರಂತರವಾಗಿ ಸಿಕ್ಕಾಪಟ್ಟೆ ಮಳೆ ಬರ್ತಾ ಉಂಟು. ನೇತ್ರಾವತಿ ತುಂಬಿದೆ. ಕಾವೇರಿ ಮೈತುಂಬಿಕೊಂಡಿದ್ದಾಳೆ. ಸಣ್ಣ ಪುಟ್ಟ ನದಿಗಳು ಕೆಂಪು ನೀರು ಹೊತ್ತು ಹರಿಯುತ್ತಿವೆ. ಬಿತ್ತನೆ ಕಾರ್ಯಗಳು ಶುರುವಾಗಿವೆ. ಸರ್ವೇಜನೋ ಸುಖಿನಾಭವಂತು.

ಮಳೆ ಹನಿಗಳ ಓಡಾಟದ ಜಾಡು ಹಿಡಿದು ಹೋದರೆ-

ಶಿವಮೊಗ್ಗ : ಜೂನ್‌19ರಿಂದ ಶರಾವತಿ ಜಲಾನಯನ ಪ್ರದೇಶದಲ್ಲಿ ಮತ್ತು ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆ ಸುರಿಯಲಾರಂಭಿಸಿದೆ. ತೀರ್ಥಹಳ್ಳಿ ಹೊಸನಗರ, ಶಿಕಾರಿಪುರ ತಾಲ್ಲೂಕುಗಳಲ್ಲಿ ಮತ್ತು ಸೊರಬದಲ್ಲಿ ಒಂದು ಸುತ್ತು ಮಳೆಯಾಗಿದೆ. ಆದರೆ ಭೂಮಿ ತಣಿಯುವಷ್ಟು ಮಳೆ ಇನ್ನೂ ಮಲೆನಾಡಿಗೆ ಕಾಲಿಟ್ಟಿಲ್ಲ. ಮಳೆಯ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ.

ಜೋಗ: ಜಗದ್ವಿಖ್ಯಾತ ಜೋಗ ಜಲಪಾತದ ಸುತ್ತ ಮುತ್ತ ಎರಡು ದಿನಗಳ ಕಾಲ ಧಾರಾಕಾರ ಮಳೆ ಬಿದ್ದಿದೆ. ಒಂದೇ ದಿನದಲ್ಲಿ ಶರಾವತಿ ಜಲಾನಯನಯ ಪ್ರದೇಶದಲ್ಲಿ ನೀರಿನ ಮಟ್ಟ 1. 90 ಅಡಿಯಷ್ಟು ಏರಿದೆ.

ಮಲೆನಾಡ ಸಾಹಿತ್ಯಿಕ ಊರು ತೀರ್ಥಹಳ್ಳಿಯಲ್ಲಿ ಅರ್ಧ ದಿನ ಸತತ ಮಳೆ ಬಂದಿದ್ದು, ಸದ್ಯ ಮಳೆಗಾಲ ಕಾಲಿಟ್ಟಿತಲ್ಲ ಎಂದು ಜನ ನಿಟ್ಟುಸಿರಿಟ್ಟಿದ್ದಾರೆ. ಆಗುಂಬೆ ಘಾಟಿಯಲ್ಲಿ 168.8 ಮಿಮೀ ಮಳೆಯಾಗಿದೆ. ಸಾಗರದಲ್ಲಿಯೂ ಅರ್ಧ ದಿನದವರೆಗೆ ಮಳೆ ತನ್ನ ಡ್ಯೂಟಿ ನಡೆಸಿದೆ.

ಕಾರವಾರ : ಕರಾವಳಿಯನ್ನೇ ನೆಚ್ಚಿಕೊಂಡಿರುವ ಮುಂಗಾರು ಮಳೆ ಕಾರವಾರಕ್ಕೆ ಮೋಸ ಮಾಡಲಿಲ್ಲ. ವೀಕೆಂಡ್‌ ಮಳೆ ಚೆನ್ನಾಗೇ ಸುರಿದಿದ್ದು, ಹೊನ್ನಾವರದಲ್ಲಿ 19 ಸೆಂಟಿಮೀಟರ್‌ ಮಳೆ ದಾಖಲಾಗಿದೆ. ಭಟ್ಕಳ, ಅಂಕೋಲಾ ಮತ್ತು ಕುಮಟಾಗಳಲ್ಲಿ 10 ಸೆಂಟಿ ಮೀಟರ್‌ಗಿಂತ ಜಾಸ್ತಿ ಮಳೆಯಾಗಿದೆ.

ಕೊಡಗು : ಭಾಗಮಂಡಲ ಮತ್ತು ಹಾರಂಗಿ ಜಲಾಶಯಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ. ಕೇರಳದಲ್ಲಿಯೂ ಚೆಂದ ಮಳೆ ಬೀಳುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವು ಸಿಕ್ಕಾಪಟ್ಟೆ ಹೆಚ್ಚಿದೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ತಡವಾಗಿಯಾದರೂ ಚೆನ್ನಾದ ಮಳೆ ಬೀಳುತ್ತಿದ್ದು, ಮೈಸೂರು ಭಾಗದ ಜನ ಖುಷಿಗೊಂಡಿದ್ದಾರೆ.

ಜೂನ್‌ ಆರಂಭದಲ್ಲಿ ಮಳೆಯ ಸೂಚನೆ ತೋರಿಸಿದ್ದ ಮೈಸೂರಿನಲ್ಲಿ ಈಗ ಬರೀ ಹನಿ ಹನಿ ಮಳೆ. ಹೂಮಳೆ.

ಬೀದರ್‌ : ಭಾನುವಾರ ಸಂಜೆಯಿಂದ ಬೀದರ್‌ನಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಅಲ್ಲೀಗ ವರ್ಷದ ಮೊದಲ ಮಳೆಯ ಸಂಭ್ರಮ. ಹುಮನಾಬಾದ್‌, ದುಬಲಂಗಡಿ, ಹಳ್ಳಿ ಖೇಡ್‌, ಭಾಲ್ಕಿ ಸುತ್ತ ಮುತ್ತ ಮಳೆ ಬೀಳುತ್ತಿದೆ.

ಯಡಬಿಡಂಗಿ ಬೆಂಗಳೂರು

ಪ್ರತಿ ಸಂಜೆ ಸುಳಿದಾಡುವ ಗಾಳಿ, ಕವಿಯುವ ಮೋಡಗಳು ಬೆಂಗಳೂರಿಗರೊಂದಿಗೆ ಟೂ ಬಿಟ್ಟಿದೆ. ಆಕಾಶದಲ್ಲಿ ಅಣಕಿಸುತ್ತಾ ಬೀಸುಗಾಳಿಯಾಂದಿಗೆ ತೇಲಿ ಹೋಗುವ ಮೋಡಗಳು ಇಡೀ ಬೆಂಗಳೂರನ್ನು ತೊಪ್ಪೆಯಾಗಿಸಲು ಒಪ್ಪುತ್ತಿಲ್ಲ. ಆದರೆ ನಗರದಲ್ಲಿ ತಂಪು ಗಾಳಿ ಬೀಸಲಾರಂಭಿಸಿದೆ. ಉಷ್ಣಾಂಶ 28-20ಕ್ಕೆ ಇಳಿದಿದೆ. ತಂಪುಗಾಳಿಯಿಂದಾಗಿ ಬೆಳಗಿನ ಹೊತ್ತು ನಗರವನ್ನು ತುಸುವೇ ಚಳಿ ಆವರಿಸಿದೆ. ಪ್ರತಿ ವರ್ಷವೂ ಸೈಕ್ಲೋನ್‌ ಕೃಪೆಯಿಂದಾದರೂ ನಾಲ್ಕು ದಿನ ಪಿರಿ ಪಿರಿ ಮಳೆ ಬರುತ್ತಿತ್ತು. ಈ ಬಾರಿ ಅಂತಹ ಮಳೆಯ ಪ್ರಸಾದವೂ ಇಲ್ಲ. ಸಂಕೇಶ್ವರ ನಿಪ್ಪಾಣಿಯಲ್ಲಿ ತಲಾ 7 ಸೆ.ಮೀ, ಬೆಳಗಾವಿ ನಗರದಲ್ಲಿ 9 ಸೆಮೀ ಮಳೆ ಸುರಿದಿದೆ. ಪಾಪ ಬೆಂಗಳೂರು !

ಅಪ್ಪಾ ಮಳೆರಾಯ,

ಮಳೆ ಸಾಮ್ರಾಜ್ಯ ಕರಾವಳಿಯಿಂದ ಉತ್ತರ ಕರ್ನಾಟಕದವರೆಗೆ ವಿಸ್ತರಿಸಲಿ ಎಂಬುದು ರಾಜ್ಯದ ಜನತೆಯ ಬೇಡಿಕೆ. ಆದರೆ ಗಂಗಾವತರಣವಾಗಿ ವಾರ ಕಳೆದರೂ ಮಳೆ ಕರಾವಳಿಯಿಂದ ಮುಂದುವರೆಯಲು ಮನಸ್ಸಿದ್ದಂತೆ ಕಾಣುವುದಿಲ್ಲ. ಬೆಟರ್‌ ಲೇಟ್‌ ದ್ಯಾನ್‌ ನೆವರ್‌ ಅನ್ನುವಂತಾದರೂ ಸುಡುವ ಬೀದರ್‌, ರಾಯಚೂರ್‌ಗಳಲ್ಲಿ ಮಳೆಯಾಗಲಿ. ತುಮಕೂರು, ಕೋಲಾರ ಜಿಲ್ಲೆಗಳ ರೈತರ ಕನಸುಗಳು ಮಳೆಯಿಂದ ಒದ್ದೆಯಾಗಲಿ. ಕೊಳಗಗಟ್ಟಲೆ ಮಳೆ ಸುರಿದು ಬೆಳೆ ಚೆನ್ನಾಗಾಗಲಿ. ಒಳ್ಳೆಯ ಹಾರೈಕೆಗಳು ಹುಸಿಯಾಗುವುದಿಲ್ಲ , ಅಲ್ಲವೇ ?

ಮಳೆಯೇ ಬಾ, ಹದವಾಗಿ ಬಾ

ಮಂಗಳೂರಿನಲ್ಲಿ ಮಳೆಗೆ ಬಲಿಯಾದವರು : ಬಜಾಲ್‌ನಲ್ಲಿ ಗೋಡೆ ಕುಸಿದು, ಜಯರಾಮ ಪೂಜಾರಿ(45)ರ, ಬಂಟ್ವಾಳ ಪೇರಾಜೆಯ ಸಂಜೀವ ನಾಯಕ್‌ ಅವರ ಮಗಳು ಸಂಧ್ಯಾಲಕ್ಷ್ಮಿ(16), ಕಾರ್ಕಳದ ಒಲಿಮಾರುವಿನ ಜೋಗಿ ಪೂಜಾರಿ(85). ಮೃತಪಟ್ಟ ಇತರರ ವಿವರ ದೊರೆತಿಲ್ಲ.

English summary
Karnataka weather report : Lovely Rain Lovely Rain, Where had you been ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X