ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗಾಗಿ ತಾನೆಂಬುದೇ ಧರ್ಮ- ರಂಭಾಪುರಿ ಶ್ರೀ

By Staff
|
Google Oneindia Kannada News

ಬಾಳೆಹೊನ್ನೂರು : ತಾನು ಎಲ್ಲರಿಗಾಗಿ ಎಂಬುದು ನಿಜಧರ್ಮ. ತಾನು ತನಗಾಗಿ ಎಂಬುದು ಅಧರ್ಮ - ಧರ್ಮದ ಬಗ್ಗೆ ರಂಭಾಪುರಿ ವೀರಸಿಂಹಾಸನಾಧೀಶ್ವರ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕೊಟ್ಟ ವ್ಯಾಖ್ಯೆಯಿದು.

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಭಾನುವಾರ (ಮಾರ್ಚ್‌ 16) ನಡೆದ ಇತಿಹಾಸದಲ್ಲೇ ಪ್ರಥಮವಾದ ಪಂಚಪೀಠ ಯತಿವರ್ಯರು ಭಾಗವಹಿಸಿದ್ದ ಬೃಹತ್‌ ಧರ್ಮ ಸಾಹಿತ್ಯ ಸಮ್ಮೇಳನದಲ್ಲಿ ಭಗವತ್ಪಾದರು ಆಶೀರ್ವಚನ ಕೊಟ್ಟರು. ವಿರಕ್ತ ಮಠಗಳ ಕಾರ್ಯದಲ್ಲಿ ಪಂಚ ಪೀಠಗಳಾಗಲೀ, ಪಂಚ ಪೀಠಗಳ ಕಾರ್ಯದಲ್ಲಿ ವಿರಕ್ತ ಮಠಗಳಾಗಲೀ ಹಸ್ತಕ್ಷೇಪ ಮಾಡಿಲ್ಲ ಎಂದು ಅವರು ಹೇಳಿದರು.

ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಡೆದ ಬೃಹತ್‌ ಧರ್ಮ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಉದ್ಘಾಟಿಸಿದರು. ಗುರುಪೀಠಗಳು ಜನರ ಬದುಕನ್ನು ಸಂಪನ್ನಗೊಳಿಸುವ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದು ಕೃಷ್ಣ ಕರೆ ಕೊಟ್ಟರು.

ವಾದ- ವಿವಾದಗಳು ಏನೇ ಇರಲಿ. ಲೋಕ ಕಲ್ಯಾಣದ ಉದ್ದೇಶ ಹೊತ್ತು ಪಂಚ ಪೀಠಗಳ ಯತಿವರ್ಯರು ಒಂದೇ ವೇದಿಕೆಯಲ್ಲಿ ಈ ಪ್ರಮಾಣದಲ್ಲಿ ಸೇರಿರುವುದು ಖುಷಿಯಾಗುತ್ತಿದೆ. ಇದೊಂದು ಆರೋಗ್ಯಕರ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಉಜ್ಜಯಿನಿ ಮಠದ ಮರುಳಸಿದ್ಧ ರಾಜದೇಶೀಕೇಂದ್ರ ಶಿವಾಚಾರ್ಯ, ಕೇದಾರ ಮಠದ ಭೀಮಶಂಕರಲಿಂಗ ಶಿವಾಚಾರ್ಯ, ಶ್ರೀಶೈಲ ಮಠದ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ, ಕಾಶಿ ಮಠದ ಡಾ.ಚಂದ್ರಶೇಖರ ಶಿವಾಚಾರ್ಯ, ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠದ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ, ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ, ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಹರಪನಹಳ್ಳಿ ತೆಗ್ಗಿನಮಠದ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಪ್ರದಾನ ಮಾಡಿದರು. ವಿಧಾನ ಸಭೆಯ ಪ್ರತಿಪಕ್ಷ, ಬಿಜೆಪಿಯ ನಾಯಕ ಜಗದೀಶ್‌ ಶೆಟ್ಟರ್‌ ‘ಸದ್ಬೋಧಾಮೃತ ಶತಕ’ ಗ್ರಂಥವನ್ನು ಬಿಡುಗಡೆ ಮಾಡಿದರು.

ನಾಡಿನ ವಿವಿಧ ಮಠಗಳ ನೂರಾರು ಸ್ವಾಮಿಗಳು ಹಾಗೂ ಅನೇಕ ರಾಜಕಾರಣಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X