‘ಸಿರಿಕನ್ನಡ ನಾಡಿದು ಬನ್ನಿ ಉದ್ದಿಮೆದಾರರೆ ನೀವೆಲ್ಲರು’
ಬೆಂಗಳೂರು : ಸಮರ್ಥ, ಸ್ಪರ್ಧಾತ್ಮಕ, ಪಾರದರ್ಶಕ ಹಾಗೂ ಲಾಭದಾಯಕ ವಾಣಿಜ್ಯ ಪರಿಸರವನ್ನು ಹೊಂದಿರುವ ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಕರೆ ನೀಡಿದ್ದಾರೆ.
ದಾವೋಸ್‌ನ ಸೆಂಟ್ರಲ್ ಸ್ಪೋರ್ಟ್ ಹೋಟೇಲ್‌ನಲ್ಲಿ ಏರ್ಪಡಾಗಿದ್ದ ಸ್ಟೇಟ್ ಆಫ್ ಕರ್ನಾಟಕ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಕರ್ನಾಟಕದಲ್ಲಿನ ವಾಣಿಜ್ಯ ಪರಸರದ ಕುರಿತು ಮುಖ್ಯಮಂತ್ರಿ ಕೃಷ್ಣ ಅಂತರರಾಷ್ಟ್ರೀಯ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ವಿವಿಧ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ನೂರಕ್ಕೂ ಹೆಚ್ಚು ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ದಾವೋಸ್‌ನಲ್ಲಿ ಮುಖ್ಯಮಂತ್ರಿ ಕೃಷ್ಣ ಅವರು ನೀಡಿದ ಪ್ರಾತ್ಯಕ್ಷಿಕೆಯ ಮುಖ್ಯಾಂಶಗಳನ್ನು ಮುಖ್ಯಮಂತ್ರಿಗಳ ಸಚಿವಾಲಯ ಸುದ್ದಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಬಂಡವಾಳ ಹೂಡಿಕೆಗೆ ಕರ್ನಾಟಕದಲ್ಲಿ ವಿಫುಲ ಅವಕಾಶಗಳು ಹಾಗೂ ಉತ್ತಮ ಮೂಲಭೂತ ಸೌಕರ್ಯಗಳಿವೆ. ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ರಾಜ್ಯ 100 ವರ್ಷಗಳ ಪ್ರಗತಿಯ ಹಿನ್ನೆಲೆ ಹೊಂದಿದೆ. ಹಂಪೆ, ಬೇಲೂರು, ಹಳೇಬೀಡು ಮುಂತಾದ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಚಾರಿತ್ರಿಕ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಬಂಡವಾಳ ಹೂಡಿಕೆಗೆ ಅವಕಾಶಗಳಿವೆ ಎಂದು ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications