ಹಳಿತಪ್ಪಿದ ಕಾಚಿಗುಡ ಎಕ್ಸ್‌ಪ್ರೆಸ್ : ಕನಿಷ್ಠ 20 ಸಾವು
ಬೆಂಗಳೂರು : ಬೆಂಗಳೂರಿನತ್ತ ಬರುತ್ತಿದ್ದ ಕಾಚಿಗುಡ- ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಆಂಧ್ರಪ್ರದೇಶದ ಪೆಂಡೇಕಲ್- ಪಗಡಿರೈ ನಿಲ್ದಾಣಗಳ ನಡುವೆ ಶನಿವಾರ ಮೊದಲ ಜಾವ 1.10ಗಂಟೆಯ ಸುಮಾರಿನಲ್ಲಿ ಹಳಿ ತಪ್ಪಿದ್ದು, ಕನಿಷ್ಠ 20 ಪ್ರಯಾಣಿಕರು ಮೃತ ಪಟ್ಟಿದ್ದಾರೆಂದು ಶಂಕಿಸಲಾಗಿದೆ.
ರೈಲಿನಲ್ಲಿ 1500ರಿಂದ 1600 ಪ್ರಯಾಣಿಕರಿದ್ದರು. 8 ಬೋಗಿಗಳು ಹಳಿ ತಪ್ಪಿದ್ದು, ಅನೇಕ ದೇಹಗಳು ಬೀದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಹುತೇಕ ಪ್ರಯಾಣಿಕರು ಸಕ್ಕರೆ ನಿದ್ದೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಒಟ್ಟು 23 ಬೋಗಿಗಳಿದ್ದ ರೈಲು ಬೆಂಗಳೂರು ತಲುಪಲು ಇನ್ನೂ 280 ಕಿ.ಮೀ. ಕ್ರಮಿಸಬೇಕಾಗಿತ್ತು. ಕೊರೆವ ಚಳಿಯಲ್ಲಿ ನರಳುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ನಡೆದಿದೆ. ಸಾವಿನ ಸಂಖ್ಯೆ ಎಷ್ಟು ಎಂದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಈವರೆಗೆ 10 ಶವಗಳು ಪತ್ತೆಯಾಗಿವೆ ಎಂದು ರೈಲ್ವೆ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ.
ಅಪಘಾತದ ಬಗ್ಗೆ ವಿವರಗಳಿಗೆ ಬೆಂಗಳೂರಿನ ರೈಲ್ವೆ ಕಚೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆಗಳು- 2876288 ಮತ್ತು 2203269.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications