ತುಮಕೂರಲ್ಲಿ ವಿಶ್ವಸಂಸ್ಥೆಯ ಬಯೋ ಮಾಸ್ ಶಕ್ತಿ ಪೈಲಟ್ ಯೋಜನೆ
ಬೆಂಗಳೂರು : ತನ್ನ ಅಭಿವೃದ್ಧಿ ಯೋಜನೆಗಳಡಿ ಜೈವಿಕ ಶಕ್ತಿ ಉತ್ಪಾದನಾ ಕಾರ್ಯಕ್ರಮವನ್ನು ಜಾರಿಗೆ ತರಲು ವಿಶ್ವಸಂಸ್ಥೆ ತುಮಕೂರು ಜಿಲ್ಲೆಯನ್ನು ಆರಿಸಿಕೊಂಡಿದೆ.
ಮೊದಲ ಹಂತದಲ್ಲಿ ಈ ಪೈಲಟ್ ಯೋಜನೆಯನ್ನು ತುಮಕೂರು ಜಿಲ್ಲೆಯ 25 ಹಳ್ಳಿಗಳಲ್ಲಿ ಜಾರಿಗೆ ತರಲಾಗುವುದು. ಕರ್ನಾಟಕದಲ್ಲಿ ಜೈವಿಕ ಶಕ್ತಿ ಉತ್ಪಾದನೆಯ ಮೂಲಕ ದಿನದ ಇಪ್ಪತ್ತನಾಲ್ಕೂ ಗಂಟೆ ವಿದ್ಯುತ್ ಪಡೆಯುವುದು ಈ ಯೋಜನೆಯ ಉದ್ದೇಶ.
ಗ್ರಿಡ್ ವಿದ್ಯುತ್ತನ್ನೇ ಅವಲಂಬಿಸಿರುವ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ವಿಶ್ವಸಂಸ್ಥೆ ನಿರ್ಧರಿಸಿದೆ. ಪ್ರಾಯೋಗಿಕ ಹಂತವಾಗಿ ತುಮಕೂರು ಜಿಲ್ಲೆಯನ್ನು ಅದು ಆರಿಸಿಕೊಂಡಿದೆ. ತುಮಕೂರಿನ ಹಳ್ಳಿಗಳಲ್ಲಿ ಈ ವಿದ್ಯುತ್ ಯೋಜನೆಯ ಸಾಧ್ಯತೆ- ಬಾಧ್ಯತೆಗಳನ್ನು ಪರಿಶೀಲಿಸಿದ ನಂತರ ದೇಶದೆಲ್ಲೆಡೆ ಜಾರಿಗೆ ತರಲಾಗುವುದು. ಹಳ್ಳಿಗಳಲ್ಲಿ ಅನಿಯಮಿತ ವಿದ್ಯುತ್ ಕಡಿತ ಇರುವ ಮುಖ್ಯವಾದ ಸಮಸ್ಯೆಯಿಂದ ಹೊರ ಬರಲು ಈ ಯೋಜನೆ ನೆರವಾಗಲಿದೆ ಎಂದು ವಿಶ್ವ ಸಂಸ್ಥೆಯ ಈ ಯೋಜನೆಯ ಭಾರತದ ಗ್ರಾಮೀಣ ಪ್ರದೇಶದ ಸಂಯೋಜನಾ ಅಧಿಕಾರಿ ಸುಭಾಷ್ ಚಂದ್ರ ಹೇಳಿದರು.
ಜಾಗತಿಕ ಪರಿಸರ ಸಂಸ್ಥೆ (ಜಿಇಎಫ್) ಹಾಗೂ ಇಂಡೋ- ಕೆನೆಡಿಯನ್ ಪರಿಸರ ನಿಧಿ (ಐಸಿಇಎಫ್) ಜಂಟಿಯಾಗಿ ಈ ಯೋಜನೆಯ ಮೇಲೆ 40 ಕೋಟಿ ರುಪಾಯಿ ವಿನಿಯೋಗಿಸಲಿವೆ.
ಈ ಯೋಜನೆ ಯಶಸ್ವಿಯಾದಲ್ಲಿ, ಹಳ್ಳಿಗರು ತಮ್ಮ ಊರಿನ ವಿದ್ಯುತ್ ವ್ಯವಸ್ಥೆಯನ್ನು ತಾವೇ ನಿರ್ವಹಿಸಿಕೊಂಡು ಹೋಗಬಹುದು. ಈಗ ಕಟ್ಟುತ್ತಿರುವ ವಿದ್ಯುತ್ ದರದಲ್ಲೇ ಬಯೋಮಾಸ್ ಶಕ್ತಿ ನಿರ್ವಹಣೆ ಸಾಧ್ಯವಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications