ಮಂತ್ರಾಲಯ ಮಠದಿಂದ ‘ಆಧ್ಯಾತ್ಮಿಕ ಜಾಗೃತಿ’ ರಾಷ್ಟ್ರೀಯ ಸಮ್ಮೇಳನ
ಬೆಂಗಳೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಜುಲೈ 17 ರಿಂದ ಮೂರು ದಿನಗಳ ಕಾಲ ‘ಆಧ್ಯಾತ್ಮಿಕ ಜಾಗೃತಿ’ ರಾಷ್ಟ್ರೀಯ ಸಮ್ಮೇಳನವನ್ನು ಪುಣೆಯಲ್ಲಿ ಏರ್ಪಡಿಸಿದೆ.
ಮುನ್ನೂರಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸುವ ಈ ಸಮ್ಮೇಳನದಲ್ಲಿ ಆಧ್ಯಾತ್ಮಿಕ ವಿಷಯ ಮಾತ್ರವಲ್ಲದೆ ಸಾಂಸ್ಕೃತಿಕ, , ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ವಿಷಯಗಳ ಬಗೆಗೂ ಬೆಳಕು ಚೆಲ್ಲಲಾಗುವುದು ಎಂದು ಪ್ರಸಿದ್ಧ ಸಾಹಿತಿ ಅರಳುಮಲ್ಲಿಗೆ ಪಾರ್ಥಸಾರಥಿ ಸುದ್ದಿಗಾರರಿಗೆ ಸಮ್ಮೇಳನದ ವಿವರಗಳನ್ನು ತಿಳಿಸಿದರು.
ಅಪರೂಪದ ಹಸ್ತಪ್ರತಿಗಳು, ಹಳೆಯ ಪುಸ್ತಕಗಳು ಹಾಗೂ ರಾಘವೇಂದ್ರ ಸ್ವಾಮಿ ಬದುಕು- ಸಾಧನೆಯನ್ನು ಬಿಂಬಿಸುವ ಚಿತ್ರಗಳ ಪ್ರದರ್ಶನ ಸಮಾವೇಶದ ಅಂಗವಾಗಿ ನಡೆಯಲಿದೆ. ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್ ಭೀಮಸೇನ ಜೋಷಿ, ಸುಪ್ರಿಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಸಂವಿಧಾನ ಪರಾಮರ್ಶೆ ಆಯೋಗದ ಅಧ್ಯಕ್ಷ ಎಂ.ಎನ್.ವೆಂಕಟಾಚಲಯ್ಯ, ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್.ಶೇಷನ್ ಅವರು ಸಮಾವೇಶದಲ್ಲಿ ಭಾಗವಹಿಸುವರು.
ಪ್ರಸಿದ್ಧ ಗಾಯಕ ಜೇಸುದಾಸ್ ಮತ್ತಿತರ ಸಂಗೀತ ವಿದ್ವಾಂಸರಿಂದ ಸಂಗೀತ ಕಾರ್ಯಕ್ರಮ, ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಹಾಗೂ ನೇತ್ರ ಶಿಬಿರಗಳು ಸಮಾವೇಶದ ಪ್ರಯುಕ್ತ ನಡೆಯಲಿವೆ. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ 50 ವಿದ್ವಾಂಸರಿಂದ ‘ವಿಷ್ಣು ಮಹಾಯಾಗ’ ನಡೆಯಲಿದೆ.
ಪಾರ್ಥಸಾರಥಿ ಅವರ ‘ಪುರಂದರದಾಸರು’ ಕೃತಿಯ ಇಂಗ್ಲೀಷ್ ಆವೃತ್ತಿ ಸಮಾವೇಶದಲ್ಲಿ ಬಿಡುಗಡೆಯಾಗುವುದು. ಕರ್ನಾಟಕದಿಂದ 12 ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸುವರು ಎಂದು ಅರಳುಮಲ್ಲಿಗೆ ಪಾರ್ಥಸಾರಥಿ ತಿಳಿಸಿದರು.(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications