ಸುಬ್ರಹ್ಮಣ್ಯದಲ್ಲಿ ಕುಂಭದ್ರೋಣ: ಕುಮಾರಧಾರ ಜಲ ಸಮಾಧಿ
ಸುಬ್ರಹ್ಮಣ್ಯ : ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನೆರೆ ನೀರು ಏರುತ್ತಿದ್ದು ಕುಮಾರಧಾರಾ ಸೇತುವೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಜಲ ಸಮಾಧಿಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ನೆರ ನೀರು ಇನ್ನೂ ಹೆಚ್ಚುವ ಭೀತಿಯಿದೆ.
ಗುರುವಾರ ರಾತ್ರಿ ಆರಂಭಗೊಂಡ ಮಳೆ ಒಂದೇ ಸಮನೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಘಟ್ಟದ ಮೇಲಿನ ನೀರು ಕೂಡ ಕುಮಾರಧಾರಾ ನದಿಗೆ ಸೇರುತ್ತಿದ್ದು , ಶುಕ್ರವಾರದ ಮಧ್ಯಾಹ್ನದ ವೇಳೆಗೇ ಸೇತುವೆ ನೀರಿನಲ್ಲಿ ಮುಳುಗಿಹೋಯಿತು. ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡೂ ಕಡೆಗಳಲ್ಲಿ ಗೇಟ್ ಹಾಕಿ ಪೊಲೀಸರು ವಾಹನ ಹಾಗೂ ಜನ ಸಂಚಾರವನ್ನು ತಡೆದಿದ್ದಾರೆ.
ಸೇತುವೆ ಮುಳುಗಡೆಯಿಂದ ಮಂಗಳೂರು, ಉಪ್ಪಿನಂಗಡಿ, ಧರ್ಮಸ್ಥಳ ಹಾಗೂ ಬೆಂಗಳೂರು ಕಡೆಯ ವಾಹನಗಳು ಸುಬ್ರಹ್ಮಣ್ಯಕ್ಕೆ ಬರಲಾಗುತ್ತಿಲ್ಲ . ಪಂಜ ಮಾರ್ಗದಲ್ಲೂ ಸೇತುವೆ ಮೇಲೆ ನೀರು ಏರುತ್ತಲೇ ಇದೆ.
ಸುಬ್ರಹ್ಮಣ್ಯದಲ್ಲಿ ನೂರಾರು ಯಾತ್ರಿಕರು ಮಳೆಯಿಂದಾಗಿ ತೊಂದರೆಗೆ ಸಿಲುಕಿದ್ದು , ಶಾಲಾ ಕಾಲೇಜು ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಮಳೆ ಪ್ರಾರಂಭವಾದಾಗಿನಿಂದ ವಿದ್ಯುತ್ ನಾಪತ್ತೆಯಾಗಿದೆ.
ಮಳೆ ಮಳೆ ಮಳೆ
ಕರಾವಳಿಯ ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ ಮುಂತಾದೆಡೆಯೂ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಕೆಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications