ಕೃಷ್ಣನಾ ಶಂಖದ ಕರೆ..ಆಲಿಸು ಕೃಷ್ಣನಾ ಶಂಖದಾ ಕರೆ
ಭುವನೇಶ್ವರ : ಒರಿಸ್ಸಾದ ಪುರಿ ಜಗನ್ನಾಥ ದೇವಾಲಯದಲ್ಲೊಂದು ಶಂಖ. ಅದಕ್ಕೆ ಕಿವಿಕೊಟ್ಟರೆ ಕೇಳುತ್ತವೆ ಮಂತ್ರಗಳು ಓತಪ್ರೋತ. ಜಗನ್ನಾಥ ಪ್ರಚಾರ ಸಮಿತಿ ಹೇಳುವ ಪ್ರಕಾರ- ಇದು ಕೃಷ್ಣನ ಪಾಂಚಜನ್ಯ.
ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ ಊದಿದ್ದ ಪಾಂಚಜನ್ಯವೇ ಇದು ಎಂಬುದು ಇಲ್ಲಿನ ಅನೇಕ ಪಂಡಿತರ ನಂಬಿಕೆ. ಜಗನ್ನಾಥ ರಥೋತ್ಸವದಲ್ಲೂ ಎಲ್ಲರಲ್ಲಿ ಪಾಂಚಜನ್ಯದ್ದೇ ಮಾತು. ಆ ಶಂಖ ಪ್ರಾಸಬದ್ಧವಾದ ಮಂತ್ರೋಚ್ಛಾರಣೆ ಮಾಡುತ್ತದಂತೆ. ಅದಕ್ಕೆ ಭಕ್ತಿ ಇರಬೇಕಂತೆ. ನಿಜವಾದ ಭಕ್ತಿ ಇದ್ದವರು ಶಂಖವನ್ನು ಕಿವಿಗೆ ಅವುಚಿಕೊಂಡರೆ ಮಂತ್ರಗಳು ಕೇಳುತ್ತವಂತೆ.
ಇವೆಲ್ಲಾ ಅಂತೆ- ಕಂತೆಗಳು ಮೌಢ್ಯದ ಪರಮಾವಧಿ ಎಂದು ಜರೆದ ಒಬ್ಬ ವಿಜ್ಞಾನಿ ಆ ಶಂಖದಲ್ಲಿ ಮೈಕ್ರೋಚಿಪ್ ಇದೆ ಅಂತ ಪಟ್ಟು ಹಿಡಿದು ಅದನ್ನು ಸಾಬೀತು ಮಾಡಲು ಮುಂದಾದರು. ಶಂಖದ ಮೇಲಿನ ಗಂಧದ ಪದರ ಕೆರೆದರೂ, ಏನೂ ಚಿಪ್ ಸಿಗಲಿಲ್ಲ. ಬದಲಿಗೆ ಮಂತ್ರೋಚ್ಛಾರ ಮುಂದುವರೆಯಿತು. ಚಿಪ್ ಇದೆ ಎಂದವರಿಗೆ ಮುಖ ಭಂಗವಾಯಿತು.
ಒರಿಸ್ಸಾದ ಪಂಡಿತರು ಈ ಶಂಖದ ಬಗ್ಗೆ ಹೇಳುವ ಕತೆ ಹೀಗಿದೆ- 1983ರಲ್ಲಿ ಒಬ್ಬ ಅಪರಿಚಿತ ಸಾಧು ರಾಮೇಶ್ವರದಿಂದ ಪುರಿಗೆ ಬಂದ. ಅವನ ಹತ್ತಿರ ಈ ಶಂಖ ಇತ್ತು. ಇಲ್ಲಿನ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಗೆ ಸೇರಿದ ಹುಡುಗನೊಬ್ಬನ ಕೈಗೆ ಸಾಧು ಶಂಖ ಕೊಟ್ಟ. ಅದನ್ನು ಖಜಾಂಚಿ ಖಜಾನೆಯಲ್ಲಿರಿಸಿದ. ಈ ಶಂಖದ ಬಗ್ಗೆ ಕೆಲವೇ ಕೆಲವರಿಗೆ ಮಾತ್ರ ಗೊತ್ತಿತ್ತು.
ಶಂಖದ ಶ್ಲೋಕ ಕೇಳುವ ಅವಕಾಶ ಎಲ್ಲ ಭಕ್ತರಿಗೆ ಸಿಗುತ್ತಿಲ್ಲ. ಒಂದು ವೇಳೆ ಕೇಳಿಸದೇ ಇದ್ದರೆ ತಾವು ಪಾಪಿಗಳೆಂಬ ಆತಂಕ ಭಕ್ತರು ಶಂಖದ ಸಹವಾಸಕ್ಕೆ ಹೋಗದಂತೆ ಮಾಡಿದೆ. ಈ ಶಂಖ ಕೃಷ್ಣನದೋ ಅಲ್ಲವೋ ಅಂತ ಆ ಜಗನ್ನಾಥನೇ ಹೇಳಬೇಕು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications