ಏನು ಮಾಯವೋ ಏನು ಮರ್ಮವೋ.. ಎಣ್ಣೆ ಇಲ್ಲದೆಉರಿವ ಚಿಗಳ್ಳಿ ಲಾಟೀನು!
ಬೆಂಗಳೂರು : ಇಪ್ಪತ್ತು ವರುಷಗಳಿಂದ 3 ಲಾಟೀನುಗಳು ನಿರಂತರ ಉರಿಯುತ್ತಲೇ ಇವೆ; ಎಣ್ಣೆಯೇ ಇಲ್ಲದೆ ! ಉತ್ತರ ಕನ್ನಡ ಜಿಲ್ಲೆಯ ಮುಂದಗೋಡು ಬಳಿಯ ಚಿಗಳ್ಳಿ ಈಗ ಪ್ರವಾಸೀ ತಾಣವಾಗಿ ಬೆಳೆಯುತ್ತಿರುವುದು ಈ ಕಾರಣಕ್ಕೇ. ‘ಲಾಟೀನು ಪವಾಡ’ಕ್ಕೆ ಮನಸೋತಿರುವ ರಾಜ್ಯ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಲಾಟೀನುಗಳಿರುವ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದ ನೆರವು ಕೊಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ.
ಒಂದೆಡೆ ಜನರು ಎಣ್ಣೆ ಕೇಳದೆ ಉರಿಯುವ ಲಾಟೀನುಗಳ ನೋಡಲು ಮುಗಿ ಬೀಳುತ್ತಿದ್ದರೆ, ದಕ್ಷಿಣ ಕನ್ನಡದಲ್ಲಿ ವಿಚಾರವಾದಿಗಳ ಸಂಘ ಲಾಟೀನುಗಳನ್ನು ಮುಂದಿಟ್ಟುಕೊಂಡು ಸಂಶೋಧನೆಗೆ ತೊಡಗಿದೆ. ಸಂಘದ ಕಾರ್ಯದರ್ಶಿ ನರೇಂದ್ರ ನಾಯಕ್ ಇದರ ಮುಂದಾಳು.
ಯಾವುದೇ ಪವಾಡ ಬಯಲಾದ ಮರು ದಿನವೇ ಮಾಧ್ಯಮಗಳ ಕದ ತಟ್ಟಿ, ಹುಬ್ಬೇರಿಸಿ, ಸವಾಲೆಸೆಯುವ ನರೇಂದ್ರ ನಾಯಕ್ ಕಳೆದ ಒಂದು ತಿಂಗಳಿಂದ ಸದ್ದು ಮಾಡುತ್ತಿರುವ ಎಣ್ಣೆ ರಹಿತ ಲಾಟೀನುಗಳ ಬೆನ್ನಿಗೆ ಬಿದ್ದಿದ್ದಾರೆ. ಅವರ ವಾದವೇನಿದ್ದರೂ ವೈಜ್ಞಾನಿಕ ನೆಲೆಗಟ್ಟಿನಲ್ಲೇ.
ಲಾಟೀನನ್ನು ಉರಿಸುತ್ತಲೇ ನರೇಂದ್ರ ಹೇಳುತ್ತಾರೆ- ಯಾವುದೇ ಲಾಟೀನಾಗಲಿ ಎಣ್ಣೆ ತುಂಬಿಸಿದ ನಂತರ 48 ತಾಸು ಉರಿಯುತ್ತದೆ. ಭಕ್ತರು ಎಣ್ಣೆ ಇಲ್ಲದ ಲಾಟೀನುಗಳನ್ನು ನೋಡಿ, ಅಬ್ಬಾ ಎಂದು ಮನೆಗೆ ಹೋಗುತ್ತಾರೆ. ಆದರೆ ಅದರೊಳಗೆ ಎಣ್ಣೆ ಇದೆಯೋ ಇಲ್ಲವೋ ಅಂತ ಪರೀಕ್ಷಿಸುವ ಗೊಡವೆಗೆ ಹೋಗುವುದಿಲ್ಲ. ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಯಾರಾದರೂ ಎಣ್ಣೆ ತುಂಬಿಸಬಹುದಲ್ಲವೇ? ಇದೆಂಥ ಪವಾಡ? ಮಿನಿಸ್ಟರೂ ಇದನ್ನು ನಂಬುವರೆಂದರೆ ಎಂಥಾ ದುರಂತ. ಮೂರು ಲಾಟೀನುಗಳಲ್ಲಿ ಸರ್ಕಾರ ಒಂದನ್ನು ಪರೀಕ್ಷೆ ಮಾಡಲು ಕೊಡಲಿ. ಅಸಲಿಯತ್ತು ಬಯಲಾಗುತ್ತದೆ. ಖುದ್ದು ಹೋಗಿ, ದೇವಸ್ಥಾನದವರನ್ನು ಲಾಟೀನು ಕೊಡಿ ಅಂತ ಕೇಳಿದರೆ, ಅದಕ್ಕೆ ದೇವರ ಅಪ್ಪಣೆಯಿಲ್ಲ ಅನ್ನುತ್ತಾರೆ. ಇದು ಹುಂಬತನದ ಪರಮಾವಧಿ !
ಇದೇ ದಿನ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ, ‘ಪವಾಡಗಳನ್ನು ನಂಬದಿರಿ. ಶೂನ್ಯದಲ್ಲೇ ಏನನ್ನೋ ಸೃಷ್ಟಿಸುವುದು ಅವೈಜ್ಞಾನಿಕವಷ್ಟೇ ಅಲ್ಲ, ಅಕ್ಷರಶಃ ಅಸಾಧ್ಯ. ಅಂಥಾದರಲ್ಲಿ ಪುಟ್ಟಪರ್ತಿ ಸಾಯಿಬಾಬ ಅಂಥವರು ಏನೇನೋ ಪವಾಡ ಮಾಡುತ್ತಾರೆ ಅಂತ ಜನ ಹೇಳುತ್ತಾರೆ. ನನ್ನೆದುರಿಗೆ ಬಂದು ಅಂತದ್ದೇನನ್ನಾದರೂ ಯಾಕೆ ತೋರಿಸಬಾರದು?’ ಎಂದು ಸವಾಲೆಸೆದಿದ್ದಾರೆ.
ನರೇಂದ್ರ ನಾಯಕ್ ವಾದವನ್ನು ನೀವು ಅನುಮೋದಿಸುವಿರಾ? ನೀವೇನಾದರೂ ಇಂಥಾ ಪವಾಡಗಳನ್ನು ಕಂಡಿದ್ದೀರಾ? ತಕ್ಷಣ ಬರೆಯಿರಿ.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications