ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ 2002-03ರಲ್ಲಿ ಆರ್ಥಿಕ ವ್ಯವಸ್ಥೆಗೆ ಕಾಯಕಲ್ಪ ನೀಡಲು ಸಿನ್ಹ ಸಿದ್ಧತೆ

By Staff
|
Google Oneindia Kannada News

ನವದೆಹಲಿ : ನಾಲ್ಕು ರಾಜ್ಯಗಳ ವಿಧಾನಸಭೆಯೂ ಸೇರಿದಂತೆ ಹಲವು ರಾಜ್ಯಗಳ ಉಪ ಚುನಾವಣೆ ಮುಗಿದು, ಫಲಿತಾಂಶವೂ ಹೊರಬಿದ್ದಿದೆ. ಇಷ್ಟು ದಿನ ಚುನಾವಣೆ - ಫಲಿತಾಂಶಗತ್ತ ನೆಟ್ಟಿದ್ದ ಕುತೂಹಲದ ಕಣ್ಣುಗಳು ಈಹೊತ್ತು ರೈಲ್ವೆ ಮತ್ತು ಕೇಂದ್ರ ಬಜೆಟ್‌ನತ್ತ ಹೊರಳಿವೆ.

ರೈಲ್ವೆ ಸಚಿವ ನಿತೀಶ್‌ ಕುಮಾರ್‌ ಅವರು ಈಗಾಗಲೇ ರೈಲು ಪ್ರಯಾಣ ದರ ಏರಿಸುವ ಸುಳಿವು ನೀಡಿದ್ದಾರೆ. ದ್ವಿತೀಯ ದರ್ಜೆ ರೈಲು ಪ್ರಯಾಣ ದರದಲ್ಲಿ ಪ್ರತಿಶತ 7ರಿಂದ 10ರಷ್ಟು ದರ ಏರುವ ಸಾಧ್ಯತೆ ಇದೆ. ಜನಸಾಮಾನ್ಯರಿಗಾಗಿ ಶತಾಬ್ದಿ ಎಕ್ಸ್‌ಪ್ರೆಸ್‌ ಮಾದರಿಯಲ್ಲೇ ‘ಜನಶತಾಬ್ದಿ’ ಎಂಬ ಹೊಸ (ಇಂಟರ್‌ಸಿಟಿ) ರೈಲು ಓಡಾಟ ಆರಂಭಿಸುವ ಸಾಧ್ಯತೆಯ ಸುಳಿವೂ ದೊರೆತಿದೆ.

ಆದರೆ, ಸಾಮಾನ್ಯ ಕೇಂದ್ರ ಬಜೆಟ್‌ ಬಗ್ಗೆ ವಿತ್ತ ಸಚಿವ ಯಶವಂತ ಸಿನ್ಹ ಅವರು ಯಾವುದೇ ಸುಳಿವು ನೀಡಿಲ್ಲದಿದ್ದರೂ, ಈ ಬಾರಿಯ ಬಜೆಟ್‌ ರೋಗಗ್ರಸ್ಥ ಅರ್ಥವ್ಯವಸ್ಥೆಗೆ ಕಹಿ ಕಷಾಯ ಕುಡಿಸುವ ಎಲ್ಲ ಲಕ್ಷಣಗಳೂ ಕಂಡು ಬಂದಿವೆ. ಸಿನ್ಹ ಅವರು ಮಂಡಿಸಲಿರುವ ಬಜೆಟ್‌ ಬಗ್ಗೆ ನಿರೀಕ್ಷೆಗಳ ಲೆಕ್ಕಾಚಾರ ಆರಂಭವಾಗಿದೆ.

ಎಲ್ಲ ವಲಯಗಳವರೂ ತಮ್ಮ ವಲಯಕ್ಕೆ ಬರುವ ಬಜೆಟ್‌ ಎಷ್ಟು ಲಾಭದಾಯಕವಾಗಬಹುದು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ, ಸತತ ಐದನೇ ಬಾರಿ ಬಜೆಟ್‌ ಮಂಡಿಸುತ್ತಿರುವ ಅನುಭವಿ ಅರ್ಥಸಚಿವ ಯಶವಂತ ಸಿನ್ಹರ ಲೆಕ್ಕಾಚಾರಗಳು ಏನು ಎಂಬುದು ಫೆ.28ರಂದು ತೆರೆಕಾಣಲಿವೆ.

ಆದರೆ, ಅವರ ಯೋಜನೆಗಳ ಪ್ರಕಾರ ದೇಶದ ಅರ್ಥವ್ಯವಸ್ಥೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಸಾರ್ವಜನಿಕ ವೆಚ್ಚವನ್ನು ಶೇ.40ರಷ್ಟು ಹೆಚ್ಚುವ ಸಾಧ್ಯತೆ ಇದೆ. ಆಹಾರ ಮತ್ತು ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕಡಿತ ಮಾಡಿ ದೂರಗಾಮಿ ಕೃಷಿ ಸುಧಾರಣೆಗೆ ಸಿನ್ಹ ಒತ್ತು ನೀಡಬಹುದು ಎಂದು ಆರ್ಥಿಕ ತಜ್ಞರು ಲೆಕ್ಕಚಾರ ಹಾಕಿದ್ದಾರೆ.

ವೇತನದಾರರಿಗಾಗಿ: ಜಾಗತಿಕ ಆರ್ಥಿಕ ಹಿನ್ನಡೆಯಿಂದ ದೇಶದ ಆರ್ಥಿಕ ಸಂಗ್ರಹಣೆಯೂ ಕುಸಿದಿದೆ. ಹೀಗಾಗಿ ಸಿನ್ಹ ಅವರು, ಆದಾಯ ಮತ್ತು ಕಾರ್ಪೊರೇಟ್‌ ತೆರಿಗೆ ದರದಲ್ಲಿ ಕಡಿತ ಘೋಷಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು. ಅದರೆ, ಇದಕ್ಕೆ ಬದಲಾಗಿ ವೇತನದಾರರಿಗೆ ಅನುವಾಗುವಂತೆ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡುವರೆಂದು ನಿರೀಕ್ಷಿಸಲಾಗಿದೆ. ನಿವೃತ್ತ ವೇತನದಾರರು ಅರ್ಥಾತ್‌ ಪಿಂಚಣಿದಾರರಿಗೆ ಈ ಬಾರಿಯ ಬಜೆಟ್‌ನಲ್ಲಿ ಕೆಲವು ರಿಯಾಯಿತಿ ದೊರಕುವ ಸಾಧ್ಯತೆ ಇವೆ.

ಕರಾರುಬದ್ಧ ಮತ್ತು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಶೇ.1ರಿಂದ 1.5ರಷ್ಟು ಕಡಿತಗೊಳಿಸುವ, ವಸತಿ ಕ್ಷೇತ್ರಕ್ಕೆ ವಿದೇಶೀ ಬಂಡವಾಳ ಆಹ್ವಾನಿಸುವ, ಗರಿಷ್ಠ ವಿದೇಶೀ ವ್ಯಾಪಾರ ಸುಂಕವನ್ನು ಶೇ.35ರಿಂದ 30ಕ್ಕೆ ಇಳಿಸುವ ಘೋಷಣೆಗಳನ್ನು ಸಿನ್ಹ ಮಾಡುವ ನಿರೀಕ್ಷೆ ಇದೆ.

ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಗರಿಷ್ಠ ಮೌಲ್ಯದ ಬ್ಯಾಂಕಿಗ್‌ ವ್ಯವಹಾರಗಳ ಮೇಲೆ ಶೇ.ಐದರಷ್ಟು ಸೇವಾತೆರಿಗೆ ವಿಧಿಸುವ ಸಾಧ್ಯತೆಯೂ ಇದೆ. ಕಾರ್ಪೊರೇಟ್‌ ಆಸ್ಪತ್ರೆಗಳು, ವಂತಿಗೆ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೆರಿಗೆ ವಿಧಿಸುವ ಯೋಜನೆಯನ್ನು ಸಿನ್ಹಾ ರೂಪಿಸಿದ್ದಾರೆ.

ಪಡಿತರ ಆಹಾರ ಧಾನ್ಯಗಳ ಬೆಲೆ ಇಳಿಕೆ, ಜವಳಿ ಮತ್ತು ಆಟೋಮೊಬೈಲ್‌ ಉದ್ಯಮಗಳ ಮೇಲಿನ ಅಬಕಾರಿ ಸುಂಕ ಕಡಿತ, ಮೂಲಭೂತ ಸೌಕರ್ಯ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆ ಇರುವ ಬಜೆಟ್‌ನಲ್ಲಿ ಸಿಗರೇಟ್‌, ಮದ್ಯ, ಶೃಂಗಾರ ಸಾಮಗ್ರಿಗಳ ಮೇಲೆ ಹೆಚ್ಚಿನ ಕರ ವಿಧಿಸುವ ಸಾಧ್ಯತೆ ಇದೆ. ಫೆ.28ರಂದು ಸಿನ್ಹ ಬಜೆಟ್‌ ಮಂಡಿಸಲಿದ್ದಾರೆ.

(ಪಿಟಿಐ /ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X