ಡಿಸೆಂಬರ್ 31ರಂದು ಮೈಸೂರಿನಲ್ಲಿ ‘ಜಾಗತಿಕ ಸಂಗೀತ ಉತ್ಸವ’
ಬೆಂಗಳೂರು : ‘ಲಕ್ಷ್ಮೀನಾರಾಯಣ ಜಾಗತಿಕ ಸಂಗೀತ ಉತ್ಸವ’ ಮೈಸೂರಿನ ನಾಡ ಮಂಟಪದಲ್ಲಿ ಡಿಸೆಂಬರ್ 31ರಂದು ಆರಂಭವಾಗಲಿದೆ.
ಪ್ರಸಿದ್ಧ ವಯಲಿನ್ ವಾದಕ ದಿವಂಗತ ಲಕ್ಷ್ಮೀನಾರಾಯಣ ಅವರ ಸ್ಮರಣಾರ್ಥ ಆಯೋಜಿಸುವ ಈ ಸಂಗೀತೋತ್ಸವಕ್ಕೆ 2002ನೇ ವರ್ಷದಲ್ಲಿ ದಶಮಾನೋತ್ಸವದ ಸಂಭ್ರಮ. ಜೊತೆಗೆ ಲಕ್ಷ್ಮೀನಾರಾಯಣ ಅವರ 90ನೇ ಹುಟ್ಟು ಹಬ್ಬದ ಸಡಗರ ಎಂದು ಡಾ. ಎಲ್. ಸುಬ್ರಮಣ್ಯಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನ ವಿವಿಧ ಪ್ರದೇಶದಲ್ಲಿರುವ ಸಂಗೀತಗಾರರು ಹಾಗೂ ಸಂಗೀತಾಭಿಮಾನಿಗಳನ್ನು ಒಂದೆಡೆ ಸೇರುವಂತೆ ಮಾಡುವುದು ಈ ಉತ್ಸವದ ಉದ್ದೇಶ. ಪ್ರವೇಶ ಶುಲ್ಕದ ಹಂಗಿಲ್ಲದೆ ಎಲ್ಲ ಸಂಗೀತಾಸಕ್ತರು ಈ ಉತ್ಸವದಲ್ಲಿ ಭಾಗವಹಿಸಬಹುದು. ಕಲೆಯ ಮೂಲಕ ವಿಶ್ವಶಾಂತಿ ಮತ್ತು ಸಾಮರಸ್ಯವನ್ನು ಹರಡುವುದು ಸಂಗೀತೋತ್ಸವದ ಧ್ಯೇಯ ಎಂದು ಸುಬ್ರಮಣ್ಯಂ ಹೇಳಿದರು.
ಸಂಗೀತೋತ್ಸವವನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಮ್ಮ ಆಶ್ರಮದಲ್ಲಿ ಉದ್ಘಾಟಿಸಲಿದ್ದಾರೆ. ಉತ್ಸವದ ಅಂಗವಾಗಿ ಜನವರಿ 2ರಂದು ಚೆನ್ನೈನಲ್ಲಿ ಸಂಗೀತ ಕಚೇರಿ, 7ರಂದು ತಿರುವನಂತಪುರಂ ಹಾಗೂ 11ರಂದು ಹೈದರಾಬಾದ್‌ನಲ್ಲಿ ಕಚೇರಿಗಳನ್ನು ಏರ್ಪಡಿಸಲಾಗುವುದು ಎಂದು ಸುಬ್ರಮಣ್ಯಂ ಹೇಳಿದರು.
ಸಾರಂಗಿ ವಾದನದಲ್ಲಿ ಪ್ರಪಂಚದಲ್ಲಿಯೇ ಗುರುತಿಸಲ್ಪಟ್ಟ ಪಂಡಿತ್ ರಾಮ್ ನಾರಾಯಣ್, ನಾರ್ವೆಯ ರೂಅರ್ ಎಂಗೆಲ್ಬರ್ಗ್ ಮತ್ತು ಸ್ಟೈ ಎರಿಕ್ ಒಲ್ಸನ್, ಕವಿತಾ ಕೃಷ್ಣ ಮೂರ್ತಿ ಉತ್ಸವದಲ್ಲಿ ಸಂಗೀತ ಕಚೇರಿ ನೀಡುವರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications