ಮುಖ್ಯಮಂತ್ರಿ ಗಾದಿ ಜಯಲಲಿತಾಗೆ ಮತ್ತಷ್ಟು ಹತ್ತಿರ
ಚೆನ್ನೈ : ಬಹುಕೋಟಿ ರುಪಾಯಿ ಕಲ್ಲಿದ್ದಲು ಅಮದು ಹಗರಣಕ್ಕೆ ಸಂಬಂಧಿಸಿದಂತೆ ಗುರುವಾರ ತೀರ್ಪು ನೀಡಿರುವ ಚೆನ್ನೈನ ವಿಶೇಷ ನ್ಯಾಯಾಲಯ ಎಐಡಿಎಂಕೆ ನಾಯಕಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿದೆ. ನ್ಯಾಯಮೂರ್ತಿ ಎಸ್.ಪಿ. ದಾರ್ವೆಶ್ ಈ ತೀರ್ಪು ನೀಡಿದ್ದಾರೆ.
ಈ ಮಹತ್ವದ ತೀರ್ಪಿನಿಂದಾಗಿ ಮುಖ್ಯಮಂತ್ರಿ ಆಗುವ ಜಯಲಲಿತಾ ಅವರ ಹಾದಿ ಮತ್ತಷ್ಟು ಸುಗಮವಾಗಿದೆ. ಈ ಹಿಂದೆ ತಾನ್ಸಿ ಭೂ ಹಗರಣವೂ ಸೇರಿದಂತೆ ಮೂರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಜಯಲಲಿತಾ ಅವರನ್ನು ಆರೋಪ ಮುಕ್ತ ಗೊಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಈಗ ಆರೋಪ ಮುಕ್ತರಾಗಿರುವ ಜಯಲಲಿತಾ ಎಐಡಿಎಂಕೆ ಶಾಸಕನ ರಾಜೀನಾಮೆಯಿಂದ ತೆರವಾಗಿರುವ ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನಿಸಿದೆ. ಈ ಮಧ್ಯೆ ನ್ಯಾಯಾಲಯ ಜಯಲಲಿತಾ ಅವರನ್ನು ಆರೋಪ ಮುಕ್ತ ಗೊಳಿಸಿದ ಸುದ್ದಿ ತಿಳಿದ ಎಐಡಿಎಂಕೆ ಕಾರ್ಯಕರ್ತರು ನ್ಯಾಯಾಲಯದೆದುರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
65 ದಶಲಕ್ಷ ರುಪಾಯಿ ಕಲ್ಲಿದ್ದಲು ಆಮದು ಹಗರಣದಲ್ಲಿ ಜಯಲಲಿತಾ ಅವರೊಂದಿಗೆ ಇತರ 11 ಜನರನ್ನೂ ನ್ಯಾಯಾಲಯ ಆರೋಪ ಮುಕ್ತ ಗೊಳಿಸಿದೆ. ಕಳೆದ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುಮತ ಪಡೆದ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು, ಆರು ತಿಂಗಳ ಒಳಗಾಗಿ ವಿಧಾನಪರಿಷತ್ತು ಅಥವಾ ವಿಧಾನಸಭೆಯ ಸದಸ್ಯರಾಗಲು ಸಾಧ್ಯವಾಗದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications