ಬೆಂಗ್ಳೂರು ಟೆಸ್ಟ್‌ಗೆ ಬಿಗಿ ಭದ್ರತೆ, ಪ್ರೇಕ್ಷಕರಿಗೆ ಹಲವು ನಿರ್ಬಂಧ
ಬೆಂಗಳೂರು : ಬುಧವಾರದಿಂದ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ. ಇದಕ್ಕಾಗಿ ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣ ಸಜ್ಜಾಗಿದೆ. ಎರಡೂ ತಂಡಗಳ ಆಟಗಾರರು ನಗರಕ್ಕಾಗಮಿಸಿದ್ದು, ತೀವ್ರ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುವ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜಧಾನಿಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಶಾಂತಿಯಿಂದ ವರ್ತಿಸುವಂತೆ ಪೊಲೀಸ್ ಅಧಿಕಾರಿಗಳು ಕ್ರಿಕೆಟ್ ಪ್ರೇಮಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ ಹಲವು ನಿರ್ಬಂಧಗಳನ್ನೂ ಹೇರಿದ್ದಾರೆ.
ಕ್ರೀಡಾಂಗಣ ಪ್ರವೇಶಿಸುವ ಮುನ್ನ ಕ್ರಿಕೆಟ್ ಪ್ರೇಮಿಗಳು ತಾವು ಯಾವ ಗೇಟ್ ಮೂಲಕ ಒಳಹೋಗಬೇಕು ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬೆಳಗ್ಗೆ 8ಕ್ಕೆ ಗೇಟ್‌ಗಳನ್ನು ತೆರೆಯಲಾಗುತ್ತದೆ. ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಯಲ್ಲಿ ನೀರನ್ನು ಕ್ರೀಡಾಂಗಣಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಟರ್ ಕ್ಯಾನ್‌ಗಳಿಗೆ ಅಡ್ಡಿ ಇಲ್ಲ.
ಯಾವುದೇ ಪೊಟ್ಟಣಗಳನ್ನು ಕ್ರೀಡಾಂಗಣದೊಳಗೆ ಒಯ್ಯುವಂತಿಲ್ಲ. ಬೆಂಕಿ ಪೊಟ್ಟಣ ಕೂಡ. ಹೀಗಾಗಿ ಸಿಗರೇಟ್ ಪ್ರಿಯರು ಸಹಕರಿಸದೆ ವಿಧಿ ಇಲ್ಲ. ಜಾಹೀರಾತು ಫಲಕಗಳು, ರೊಟ್ಟು ಹಾಗೂ ಪೇಪರ್‌ಗಳನ್ನು ಸುಡಬಹುದು ಎಂಬ ಕಾರಣಕ್ಕಾಗಿ ಬೆಂಕಿಪೊಟ್ಟಣವನ್ನು ಕ್ರೀಡಾಂಗಣದೊಳಗೆ ಕೊಂಡೊಯ್ಯದಂತೆ ನಿರ್ಬಂಧ ಹೇರಲಾಗಿದೆ.
ಪ್ಲಾಸ್ಟಿಕ್ ಚೀಲದಲ್ಲಿ ನೀರು ಮತ್ತು ಆಹಾರ ಕೊಂಡೊಯ್ಯಬಹುದು. ಪಟಾಕಿ ಸಿಡಿಮದ್ದು, ರ್ಯಾಕೆಟ್ ಇತ್ಯಾದಿಯನ್ನು ಯಾವುದೇ ಕಾರಣಕ್ಕೂ ತರುವಂತಿಲ್ಲ. ಅಕಸ್ಮಾತ್ ಈ ವಸ್ತುಗಳ ಸಹಿತ ಸಿಕ್ಕಿಬಿದ್ದರೆ, ಕಾನೂನು ಕ್ರಮ ಎದುರಿಸಬೇಕಾದೀತು ಎಚ್ಚರ. ಅಂದಹಾಗೆ ನಕಲಿ ಟಿಕೆಟ್‌ಗಳ ಹಾಗೂ ಪಾಸ್‌ಗಳ ಬಗ್ಗೆ ಕೂಡ ನಿಗಾ ಇಡುವಂತೆ ಸೂಚಿಸಲಾಗಿದೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications