‘ರಾಜ್ಯೋತ್ಸವ ಸಮಿತಿಗಳು ಜಲ, ಗಡಿ ರಕ್ಷಣೆಯ ವೇದಿಕೆಯಾಗಬೇಕು’
ಬೆಂಗಳೂರು : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಕೇವಲ ಅಬ್ಬರ ಆಚರಣೆಯ ಉತ್ಸವಗಳಾಗಬಾರದು. ಅವು ಕನ್ನಡ ನೆಲ, ಜಲ, ಗಡಿ ರಕ್ಷಣೆಯ ಹೋರಾಟದ ವೇದಿಕೆಗಳಾಗಬೇಕು ಎಂದು ಮಾಜಿ ಸಚಿವ ಹಾಗೂ ಭಿನ್ನಿಪೇಟೆ ಶಾಸಕ ವಿ. ಸೋಮಣ್ಣ ಕರೆ ನೀಡಿದ್ದಾರೆ.
ಬುಧವಾರ ರಾತ್ರಿ ಆವಲಹಳ್ಳಿ ಡಾ.ರಾಜ್ ಗೆಳೆಯರ ಬಳಗ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಈ ಹೊತ್ತು ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಹೇಳುತ್ತಿದ್ದಾರೆ.
ತಮಿಳುನಾಡಿನ ನಾಯಕರಂತೂ ಪದೆ ಪದೇ ಕಾವೇರಿ ನದಿ ನೀರಿನ ಮೇಲೆ ಪ್ರಭುತ್ವ ಸಾಧಿಸಲು ಕೂಗಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ನಮ್ಮ ರಾಜ್ಯದ ಹಿತ ಕಾಪಾಡಲು, ರಾಜ್ಯೋತ್ಸವ ಆಚರಣೆ ಸಮಿತಿಗಳು ಹೋರಾಟದ ವೇದಿಕೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಮತ್ತು ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ್ ಹಾಗೂ ಶಾಸಕ ವಿ. ಸೋಮಣ್ಣ ನವರಿಗೆ ಕನ್ನಡ ಕಣ್ಮಣಿ ಬಳಗದ ವತಿಯಿಂದ ಬೆಳ್ಳಿಯ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications