ಕಂಬಳದಲ್ಲಿ ಗಾಂಧಿತತ್ವ !
(ಇನ್ಫೋ ಇನ್‌ಸೈಟ್)
ತುಳುನಾಡಿನ ಹೆಮ್ಮೆಯ ಜನಪದ ಕಲೆಯೆನಿಸಿರುವ ಕಂಬಳದ ಪ್ರಸಿದ್ಧಿ ದೊಡ್ಡದು. ವರ್ಷ ಪೂರ್ತಿ ತಿಂದು ಕೊಬ್ಬಿದ ಕೋಣವೊಂದು ಸ್ಪರ್ಧೆಯಲ್ಲಿ ಗೆದ್ದು ಯಜಮಾನನಿಗೆ ಕೀರ್ತಿ ತಂದು ಕೊಡುತ್ತವೆ. ಅದಕ್ಕಾಗಿ ಯಜಮಾನ ನೀರಿನಂತೆ ಹಣ ಖರ್ಚು ಮಾಡುತ್ತಾನೆ. ಆದರೆ ಈ ಕೀರ್ತಿಗಾಗಿ ಕೋಣಗಳನ್ನು ಸಿಕ್ಕಾಪಟ್ಟೆ ಹೊಡೆಯುವುದು ಸರಿಯೇ ...? ಚಪ್ಪಲಿಯೇಟು ನೀಡಿ ಹೋಳಿಗೆಯೂಟ ನೀಡುವುದು ಅಂತಾರಲ್ಲ . ಹಾಗೆ ಮಾಡುವುದು ಮಾನವೀಯತೆಗೆ ಭೂಷಣವಾ ?
ತುಳುನಾಡಿನಿಂದ ಅಳಿದುಹೋಗುವ ಮಟ್ಟಕ್ಕೇ ಬಂದಿದ್ದ ಕಂಬಳ ಕಲೆ ಈಗ ಪುನರುಜ್ಜೀವನಗೊಂಡಿದೆ. ಈ ಸಂದರ್ಭದಲ್ಲಿ ಸಾಕಷ್ಟು ಬದಲಾವಣೆಗಳು ನುಸುಳಿವೆ. ರಾಜಕೀಯ ಕೈ ತೂರಿಸಲು ಯತ್ನಿಸಿದೆ. ಹಲವು ಮನೆತನಗಳ ಪ್ರತಿಷ್ಠೆಯ ಹೋರಾಟ ಕಣವಾಗಿದೆ . ತಮ್ಮ ಕೋಣದ ಜೋಡಿ ಗೆಲ್ಲಬೇಕೆಂಬ ಅತ್ಯಾಸೆಯ ಕಣ್ಣಿನಲ್ಲಿ ಜೋಡಿ ಜೀವಗಳ ಮೇಲಿನ ಪ್ರೀತಿ ಕುರುಡಾಗಿದೆ. ಕಾನೂನು ಪ್ರಕಾರ ಹೇಳಬೇಕಿದ್ದರೆ, ಕಂಬಳದ ಸಂದರ್ಭದಲ್ಲಿ ಕೋಣವನ್ನು ಕೈ ಸೋಲುವಷ್ಟು ಹೊಡೆಯುವುದು 1960ರ ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆಯ ಉಲ್ಲಂಘನೆ.
ಈಗ ಕಾಯ್ದೆಯನ್ನೆಲ್ಲಾ ಕಟ್ಟುನಿಟ್ಟಾಗಿ ಯಾರು ಪಾಲಿಸುತ್ತಾರೆ ಸ್ವಾಮೀ ಅಂತ ನೀವು ಸಿನಿಕರಾಗಬೇಡಿ. ಈ ಬಾರಿಯ ಕಂಬಳ ಸ್ಪರ್ಧೆಗಳಲ್ಲಿ ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆಯನ್ನು ಅನುಸರಿಸಬೇಕು. ಕಂಬಳದ ಕೋಣಗಳನ್ನು ಸಿಕ್ಕಾಪಟ್ಟೆ ಹೊಡೆಯಬಾರದು ಎಂದು ಕರಾವಳಿಯ ಕಂಬಳ ಸಮಿತಿ ಕಟ್ಟು ನಿಟ್ಟಿನ ಅಪ್ಪಣೆ ಮಾಡಿದೆ.
ಈ ಶುಭ ನಿರ್ಣಯವನ್ನು ಸಮಿತಿಯ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ ಬುಧವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಇನೂ ಒಂದು ಹೆಜ್ಜೆ ಮುಂದೆ ಹೋಗಿ, ಕಂಬಳದ ಫೈನಲ್ಸ್‌ನ ವೇಳೆ ನಡೆಯುವ ಜೂಜನ್ನೂ ನಿಷೇಧಿಸಲು ಕಂಬಳ ಸಮಿತಿ ನಿರ್ಧರಿಸಿದೆ. ಕಂಬಳದ ಅಂತಿಮ ಸುತ್ತಿನಲ್ಲಿ ಗೆಲ್ಲುವ ಕೋಣಗಳ ಮೇಲೆ ಬೆಟ್ಟಿಂಗ್ ಕಟ್ಟುವುದು, ಸಿಕ್ಕಾಪಟ್ಟೆ ಮದ್ಯ ಸೇವಿಸುವುದು ಸಲ್ಲ.
ಡಿಸೆಂಬರ್ 9ರಂದು ಕದ್ರಿಕಂಬಳ
ಈ ನಿಟ್ಟಿನಲ್ಲಿ ಪ್ರಸಿದ್ಧ ಹಾಗೂ ಪ್ರತಿಷ್ಟಿತ ಮಂಗಳೂರಿನ ಕದ್ರಿ ಕಂಬಳ ಡಿಸೆಂಬರ್ 9ರಂದು ನಡೆಯಲಿದೆ. ನಗರದ ಕದ್ರಿ ಪ್ರದೇಶದಲ್ಲಿ ನಡೆಯುವ ಈ ವಾರ್ಷಿಕ ಕಂಬಳಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಕಂಬಳದ ಗದ್ದೆಗಳು ಅಲಂಕೃತಗೊಂಡಿವೆ. ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯ ಅನುಷ್ಠಾನಕ್ಕೆ ಮೊದಲ ಉದಾಹರಣೆ ಇದು.
ಕಾಯ್ದೆ , ಪ್ರತಿಜ್ಞೆಗಳ ಅನುಷ್ಠಾನ ಹೇಗಾಗುತ್ತದೆ ಎಂಬುದು ಡಿಸೆಂಬರ್ 9 ಭಾನುವಾರ ರಾತ್ರಿ ಸಾಬೀತಾಗುತ್ತದೆ. ಕಂಬಳದ ಉದ್ಘಾಟನಾ ಸಮಾರಂಭದಲ್ಲಿ ಕದ್ರಿ ಯೋಗೇಶ್ವರ ಮಠದ ರಾಜಮಹೋನ್ನತ ಕಪಾಲಿನಿ ಸ್ವಾಮೀಜಿ ಭಾಗವಹಿಸುತ್ತಾರೆ . ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಆರಂಭವಾಗುವ ಕಂಬಳದಲ್ಲಿ ನಿಜವಾಗಿಯೂ ದಯೆ, ಮಾನವೀಯತೆ ಮೆರೆಯುತ್ತದಾ ಎಂಬುದು ಒಂದು ಪ್ರಶ್ನೆಯಾದರೆ, ವರ್ಷ ಪೂರ್ತಿ ಗರಡಿಯಲ್ಲಿದ್ದು ಬೋಗುಣಿಗಟ್ಟಲೆ ಹುರುಳಿ ತಿಂದು ಕೊಬ್ಬಿದ ಕೋಣಗಳು ಚಾಟಿಯೇಟಿಲ್ಲದೆಯೇ ಯಜಮಾನನ ಮಾತು ಕೇಳುತ್ತವಾ ಎನ್ನುವುದು ಇನ್ನೊಂದು ಪ್ರಶ್ನೆ.
ಕಂಬಳಕ್ಕೆ ಕೋಣ ಓಡಿಸುವವರು ತುಳುನಾಡಿನಲ್ಲಿ ಅಪರೂಪವಾಗುತ್ತಿದ್ದಾರೆ. ಈಗಿರುವ ಪರಿಣತರಿಗೆ ಚಾಟಿ ಬಳಸದೇ ಕೋಣ ಓಡಿಸುವುದು ಸಲೀಸಾಗುತ್ತದೆಯೇ ಎನ್ನುವುದು ಇನ್ನೊಂದು ಪ್ರಾಕ್ಟಿಕಲ್ ಸಮಸ್ಯೆ.
ಅಂದ ಹಾಗೆ, ಕದ್ರಿ ಕಂಬಳವನ್ನು ಕಾರ್ಪೊರೇಷನ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಪಿ.ಕೆ. ಆಳ್ವ ಉದ್ಘಾಟಿಸುವರು. ಕ್ಯಾಂಪ್ಕೋ ಸಂಸ್ಥೆಯ ನಿರ್ವಹಣಾ ನಿರ್ದೇಶಕ ಎಂ. ಸೀತಾರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿಯ ಗಣ್ಯರು ಮತ್ತು ರಾಜಕಾರಣಿಗಳೂ ಕಂಬಳದಲ್ಲಿ ಭಾಗವಹಿಸುವರು. ಜೊತೆಗೆ ಕದ್ರಿ ಕಂಬಳ ಸಮಿತಿಯ ಆಶ್ರಯದಲ್ಲಿ ಗ್ರಾಮೀಣ ಸಾಂಪ್ರದಾಯಿಕ ಆಟಗಳಾದ ಹಗ್ಗ ಜಗ್ಗಾಟ ಮತ್ತು ಕೆಸರು ಗದ್ದೆ ಓಟದ ಸ್ಪರ್ಧೆಗಳೂ ನಡೆಯಲಿವೆ.
ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications