ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಣ ಮಾಡುವಾಗಲೇ ಹೃದಯಾಘಾತ, ಸ್ವಾತಂತ್ರ್ಯಯೋಧನ ಸಾವು

By Staff
|
Google Oneindia Kannada News

ಬೆಂಗಳೂರು : ದಲಿತರಿಗೆ ಮತ್ತು ಹಿಂದುಳಿದವರಿಗಾಗಿ ನನ್ನ ಕೊನೇ ಉಸಿರಿರುವವರೆಗೆ ಹೋರಾಡುತ್ತೇನೆ ಎಂದು ವೇದಿಕೆಯಲ್ಲಿ ಭಾಷಣ ಮಾಡುತ್ತಿರುವಂತೆಯೇ ಹಿರಿಯ ಸ್ವಾತಂತ್ರ್ಯ ಸೇನಾನಿ ಅನಂತಯ್ಯ ಮಿತ್ರ ಅವರು ಕುಸಿದು ಬಿದ್ದು ಮೃತರಾದ ಘಟನೆ ಭಾನುವಾರ ನಡೆದಿದೆ.

ನಗರದ ಯವನಿಕಾ ಸಭಾಂಗಣದಲ್ಲಿ ‘ದೇವರಾಜ ಅರಸು ಮತ್ತು ಹಿಂದುಳಿದ ವರ್ಗಗಳು’ ಎಂಬ ವಿಷಯದ ಬಗ್ಗೆ ದಲಿತ ಮತ್ತು ಅಲ್ಪ ಸಂಖ್ಯಾತರ ಜಂಟಿ ಕ್ರಿಯಾ ಸಮಿತಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅನಂತಯ್ಯ ಭಾಷಣ ಮಾಡುತ್ತಿದ್ದರು.

‘ಹಿಂದುಳಿದವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಗೋವಾ ಸತ್ಯಾಗ್ರಹಿಗಳಿಗೆ ಇನ್ನೂ ಪಿಂಚಣಿ ಲಭಿಸುತ್ತಿಲ್ಲ. ಇದಕ್ಕಾಗಿ ನಾನು ನಿರಂತರವಾಗಿ ಹೋರಾಡಲು ಸಿದ್ಧ. ಹಿಂದುಳಿದವರಿಗಾಗಿ ನನ್ನ ಕೊನೇ ಉಸಿರು ಇರುವವರೆಗೂ ಹೋರಾಟ ನಡೆಸುತ್ತೇನೆ ಎಂಬ ಮಾತುಗಳನ್ನು ಮುಗಿಸುತ್ತಲೇ ಅನಂತಯ್ಯ ಆಯಾಸಗೊಂಡು ಮಾತು ನಿಲ್ಲಿಸಿ ಕುಸಿದು ಬಿದ್ದರು.

ತಕ್ಷಣ ಜಂಟಿ ಕ್ರಿಯಾ ಸಮಿತಿಯ ಸದಸ್ಯ ಹಾಗೂ ಅನಂತಯ್ಯ ಅವರ ಪುತ್ರ ಡಾ. ಗೋಪಾಲ ಕೃಷ್ಣ ಮಿತ್ರ ಅವರು ವೇದಿಕೆಗೆ ಧಾವಿಸಿ ಬಂದು, ತಮ್ಮ ತಂದೆಗೆ ಹೃದಯಾಘಾತವಾಗಿರುವುದನ್ನು ಖಚಿತಪಡಿಸಿಕೊಂಡರು. ಹತ್ತಿರದ ಮಾರ್ತಾಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅನಂತಯ್ಯ ಅವರ ಇಹ ಲೋಕ ಯಾತ್ರೆ ಮುಗಿದಿತ್ತು.

ಗೋವಾ ಸತ್ಯಾಗ್ರಹಿಗಳಿಗೆ ಪಿಂಚಣಿ ಒದಗಿಸಲು ಅನಂತಯ್ಯ ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಲೇ ಇದ್ದರು. ತುರ್ತು ಪರಿಸ್ಥಿತಿ, ಸ್ವಾತಂತ್ರ್ಯ ಹೋರಾಟ, ಭಾರತ ಸೇವಾದಳ, ಗೋವಾ ವಿಮೋಚನಾ ಚಳವಳಿಯಲ್ಲಿ ಅನಂತಯ್ಯ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

70 ವರ್ಷ ವಯಸ್ಸಿನ ಅನಂತಯ್ಯ ಅವರ ಅಂತ್ಯ ಕ್ರಿಯೆ ಅವರ ಹುಟ್ಟೂರು ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿ ಸೋಮವಾರ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X