ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿತಾತನ ಸನ್ನಿಧಿಗೆ ಹದಿಹರೆಯದವರು...

By Super
|
Google Oneindia Kannada News

'ಶಿಷ್ಯ, ಗಾಂಧಿ ಇದನ್ನ ಸೇದಿದ ಮೇಲೇನೇ ಅಂತೆ ಒಳ್ಳೇದಲ್ಲ ಅಂತ ಹೇಳಿದ್ದು . ಇನ್ನು, ಇದು ಗಾಂಧಿ ಬ್ರಾಂದಿ" ಬಲಗೈಲೊಂದು ಸಿಗರೇಟು ತುಂಡು, ಎಡಗೈಲಿ ಶರಾಬು ತುಂಬಿದ ಗಿಲಾಸು ಹಿಡಿದ ಕಾಲೇಜು ಹುಡುಗರ ಇಂಥಾ ಮಾತುಗಳು ನಿಮ್ಮ ಕಿವಿಗೂ ಬಿದ್ದಿರಬಹುದು. ಗಾಂಧಿ ಈ ಹೊತ್ತು ಲೇವಡಿಮಾಡುವ ಸಾಧನವಾಗಿ ಹೋಗಿರುವುದು ದೊಡ್ಡ ದುರಂತ. ಗಾಂಧಿ ಯಃಕಶ್ಚಿತ್‌ ಮನುಷ್ಯನಾಗಿ ಉಳಿಯದೆ ಮಹಾತ್ಮನಾದದ್ದು ಹೇಗೆ? ಅವರ ಚಿಂತನಗಳ ಹರಹು ಎಂಥದು? ಅವು ಎಷ್ಟರ ಮಟ್ಟಿಗೆ ತರ್ಕಬದ್ಧವಾಗಿದ್ದವು? ಇವೆಲ್ಲವನ್ನೂ ಓದಿಕೊಂಡ ನಂತರ ಅವರ ಬಗ್ಗೆ ಒಂದು ನಿಲುವು ತಳೆಯುವುದು ಸೂಕ್ತ. ಅಂಥ ಅವಕಾಶ ಕಲ್ಪಿಸುತ್ತಿದೆ ಭಾರತೀಯ ವಿದ್ಯಾಭವನದ 'ಗಾಂಧಿ ಸೆಂಟರ್‌ ಆಫ್‌ ಸೈನ್ಸ್‌ ಅಂಡ್‌ ಹ್ಯೂಮನ್‌ ವ್ಯಾಲ್ಯೂಸ್‌".

ಯೋಗಿ ಮತ್ತು ಚೇಳು : ಈ ವ್ಯಾಲ್ಯೂಸ್‌ ಅಥವಾ ಮೌಲ್ಯಗಳ ವಿಷಯ ಕೇಳಿದಾಗ ಒಂದು ಸಣ್ಣ ಕತೆ ನೆನಪಿಗೆ ಬರುತ್ತದೆ. ಒಬ್ಬ ಯೋಗಿ ನೀರಲ್ಲಿ ತೇಲುತ್ತಾ, ಒದ್ದಾಡುತ್ತಿದ್ದ ಒಂದು ಚೇಳನ್ನು ಹಿಡಿದು ದಡಕ್ಕೆ ಬಿಡುತ್ತಾನೆ. ಈ ಕೆಲಸ ಮಾಡುವಾಗ ಚೇಳು ಆತನ ಕೈಯನ್ನು ಕಚ್ಚುತ್ತದೆ. ಕೆಲ ಸಮಯದ ನಂತರ ಚೇಳು ಮತ್ತೆ ನೀರಿಗೆ ಬೀಳುತ್ತದೆ. ಯೋಗಿ ಪುನಃ ಅದನ್ನು ದಡ ಮುಟ್ಟಿಸುತ್ತಾನೆ. ಆಗಲೂ ಚೇಳು ಕಡಿಯುತ್ತದೆ. ಇದು ಹಲವಾರು ಬಾರಿ ಪುನರಾವರ್ತನೆಯಾಗುತ್ತದೆ. ಕೊನೆಗೆ ಗೆಲ್ಲುವುದು ರಕ್ಷಿಸುವ ಯೋಗಿಯ ಹಠ. ಇದನ್ನು ಕಂಡ ಶಿಷ್ಯನೊಬ್ಬ, 'ಸ್ವಾಮಿ, ಅದು ಕಚ್ಚಿದರೂ ನೀವು ದಡ ಮುಟ್ಟಿಸಿದ್ದು ಏಕೆ?" ಎಂದು ಕೇಳಿದ. ಆಗ ಯೋಗಿ ಹೇಳಿದ್ದು- 'ಕಚ್ಚುವುದು ಚೇಳಿನ ಕೆಲಸ. ರಕ್ಷಿಸುವುದು ನನ್ನ ಕೆಲಸ". ಚೇಳು ನೀರಿಗೆ ವಿರುದ್ಧದ ದಿಕ್ಕಿನಲ್ಲಿ ಚಲಿಸುತ್ತಾ ಹೋಗುತ್ತದೆ. ಯೋಗಿ ಸಣ್ಣಗೆ ಸಾರ್ಥಕತೆಯ ನಗೆ ನಗುತ್ತಾರೆ.

ಜೀವನ ದರ್ಶನ ಎಂದರೆ ಇದೇ. ಉಪನ್ಯಾಸಗಳಿಂದ, ಭಾಷಣಗಳಿಂದ ಒಬ್ಬ ಗುರು ಕಲಿಸಲಾರದ್ದನ್ನು ಆತನ ಕ್ಷಣಕಾಲದ ಒಂದು ವರ್ತನೆ ಕಲಿಸಬಲ್ಲುದು. 'ನನ್ನ ಮಗು ಸಿಕ್ಕಾಪಟ್ಟೆ ಬೆಲ್ಲ ತಿನ್ನುತ್ತಾನೆ. ಅದನ್ನು ಬಿಡಿಸಿ" ಅಂತ ಪರಮಹಂಸರಲ್ಲಿ ಹೆಂಗಸೊಬ್ಬಳು ಅಲವತ್ತುಕೊಂಡಾಗ, ತಾವು ಬೆಲ್ಲ ತಿನ್ನುವುದನ್ನು ಬಿಟ್ಟ ನಂತರವೇ ಪರಮಹಂಸರು ಆ ಮಗುವಿಗೆ ಬೆಲ್ಲ ತಿನ್ನದಿರು ಎಂದದ್ದು. ಗಾಂಧಿ ಜೀವನ ಸಾರವೂ ಹೀಗೇ. ಹರಿಯುವ ನದಿಯಂತೆ. ಪಾರದರ್ಶಕ. ಶುದ್ಧ. ಸ್ಪಟಿಕ ಸ್ಪಷ್ಟ. ಅವರ ಮನಸ್ಸಿನ ಮನೆಯ ಕದ ಎಲ್ಲರಿಗೂ ಸದಾ ತೆರೆದಿರುತ್ತದೆ. ಅದಕ್ಕೇ ಭಾರತರತ್ನ ಸಿ.ಸುಬ್ರಹ್ಮಣ್ಯಂ, ಮಹಾತ್ಮ ಗಾಂಧಿಯನ್ನು ವೈಜ್ಞಾನಿಕ ಯುಗದ ಪ್ರಾಜ್ಞ, ಸಾಧು ಎಂದು ಕರೆದಿರುವುದು.

ಗಾಂಧಿ- ಅನ್ಯಾಯಕೆ ಬಾಗದೆಚ್ಚರ, ನಿಶ್ಚಲತೆ, ಚಿರ ತೆರೆದ ಎದೆ

ಗಾಂಧೀಜಿಯ ಬರಹಗಳು, ತತ್ತ್ವಗಳು, ನಿಲುವುಗಳು, ಚಿಂತನೆ ಎಲ್ಲಾ ಮೆಚ್ಚಾಗುವುದು ಸರಳತೆಯ ಕಾರಣದಿಂದ. ಒಂದೇ ಸೋಪಿನಿಂದ ಬಟ್ಟೆ ಒಗೆದು, ಸ್ನಾನ ಮಾಡುತ್ತಿದ್ದ ಐನ್‌ಸ್ಟೀನ್‌ ಆವತ್ತೇ ಹೇಳಿದ್ದರು- ಗಾಂಧಿಯಂತಹ ಮಾನವ ಈ ಜಗತ್ತಿನಲ್ಲಿ ಹೆಜ್ಜೆ ಇಟ್ಟಿದ್ದರೆಂಬುದನ್ನೇ ಬರಲಿರುವ ಪೀಳಿಗೆ ನಂಬಲಾರದು.

ನಿಜದ ನೇರಕೆ ನಡೆವ ನಿಶ್ಚಲತೆ, ಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆ, ಅನ್ಯಾಯಕೆಂದೆಂದೂ ಬಾಗದೆಚ್ಚರ, ಅಹಿಂಸಾ ಪರಮೋಧರ್ಮ, ಅಂತಃಚೇತನದ ಚಿರಾಗ ಹತ್ತುವವರೆಗೆ ಕೆಲಸ ಆಗದು ಸರಾಗ....ಇಂಥಾ ಅನಂತ ಪಾಠ ಗಾಂಧಿ ಜೀವನ ಮಾಡಿದೆ, ಮಾಡುತ್ತಿದೆ. ಕಲಿಯುವ ವಿದ್ಯಾರ್ಥಿ ಆಗುವ ಮನಸ್ಸು ಮಾಡಬೇಕಷ್ಟೆ.

ಒಮ್ಮೆ ಜಾರ್ಜ್‌ ಬರ್ನಾಡ್‌ ಷಾ ಅವರನ್ನು ಯಾರೋ ಕೇಳಿದರಂತೆ- 'ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು?" 'ಮೂರ್ಖನಂತೆ ಮಾತಾಡಬೇಡ. ಆತ ಅಲ್ಲ ಸಾಮಾನ್ಯ ವ್ಯಕ್ತಿ. ಗಾಂಧಿ ಎಂದರೆ ವಿಶ್ವ ಶಕ್ತಿ" ಅಂತ ಥಟ್ಟನೆ ಹೇಳಿದರು ಬರ್ನಾಡ್‌. ಈ ಮಾತನ್ನು ಯಾರಿಂದಲೋ ಕೇಳುವ ಸ್ಥಿತಿ ನಿಮಗೂ ಒದಗಬಾರದು; ಅದರಲ್ಲೂ ವಿಶೇಷವಾಗಿ ಬೇಲಿ ಹಾರಿದ ಮನಸ್ಥಿತಿಯ ಪಿಯೂಸಿ ವಿದ್ಯಾರ್ಥಿಗಳಿಗೆ. ನಿಮ್ಮ ಮನಸ್ಸನ್ನು ಗಾಂಧೀಸಾಣೆಗೊಡ್ಡಿಕೊಳ್ಳಿ. ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್‌ ಆಫ್‌ ಸೈನ್ಸ್‌ ಅಂಡ್‌ ಹ್ಯೂಮನ್‌ ವ್ಯಾಲ್ಯೂಸ್‌ ಅಕ್ಟೋಬರ್‌ 2, ಗಾಂಧಿ ಜಯಂತಿ ದಿನ ಶೇಷಾದ್ರಿಪುರಂ ಕಾಲೇಜಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಗಾಂಧೀಜಿ ಬಗ್ಗೆ ಓದಿಕೊಂಡು, ಪ್ರಬಂಧ ಬರೆಯುವ ಅವಕಾಶವೂ ಪಿಯೂಸಿ ವಿದ್ಯಾರ್ಥಿಗಳಿಗೆ ಉಂಟು.

ವಿಷಯಗಳನ್ನು ನೋಟ್‌ ಮಾಡಿಕೊಳ್ಳಿ :
ಗಾಂಧಿ ಹಾಗೂ ಯುವಜನ
ನನ್ನ ಜೀವನವೇ ನನ್ನ ಸಂದೇಶ- ಗಾಂಧೀಜಿ
ಸಹಸ್ರಮಾನದ ವ್ಯಕ್ತಿ ಗಾಂಧೀಜಿ
ಗಾಂಧೀಜಿ ಹಾಗೂ ಮಹಿಳಾ ಶಕ್ತಿ ಸುಧಾರಣೆ
ಗಾಂಧೀಜಿಯವರ 'ಟ್ರಸ್ಟೀಷಿಪ್‌" ಪರಿಕಲ್ಪನೆ
ಗಾಂಧೀಜಿ ಹಾಗೂ ಮೌಲ್ಯಾಧಾರಿತ ರಾಜಕೀಯ

ಗಾಂಧೀವಾಣಿ (ಕನ್ನಡ ಹಾಗೂ ಇಂಗ್ಲಿಷ್‌), ವಿಜ್ಞಾನಯುಗದ ಮಹಾಪ್ರಾಜ್ಞ ಗಾಂಧಿ (ಕನ್ನಡ ಹಾಗೂ ಇಂಗ್ಲಿಷ್‌), ಬಾಪು ಬೀರಿದ ಬೆಳಕು (ಕೇವಲ ಕನ್ನಡದಲ್ಲಿ), ಮೌಲ್ಯಾಧಾರಿತ ಜೀವನದ ಬಗ್ಗೆ ಗಾಂಧೀಜಿ ಪರಿಕಲ್ಪನೆ (ಕೇವಲ ಇಂಗ್ಲಿಷ್‌ನಲ್ಲಿ) ಎಂಬ ಪುಸ್ತಕಗಳನ್ನು ಸಂಸ್ಥೆ ಪ್ರಕಟಿಸಿದೆ. ಇವುಗಳಲ್ಲಿ ಒಂದನ್ನಾದರೂ ವಿದ್ಯಾರ್ಥಿ ಓದಲಿ ಅನ್ನೋದು ಸಂಸ್ಥೆಯ ಕರೆ. ಇದಕ್ಕೆ ನೀವೂ ಸ್ಪಂದಿಸುವಿರಲ್ಲವೇ?

English summary
Know Mahatma Gandhi well. Here is an opportunity for you...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X