ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಜಯಂತಿಯಿನ್ನೂ ವಾರ ದೂರ, ಅರೆರೆ.. ಗುಂಡಿಗೆ ಬಂತೆ ಬರ!

By Staff
|
Google Oneindia Kannada News

ಬೆಂಗಳೂರು : ಗಾಂಧಿ ಜಯಂತಿಯಿನ್ನೂ ವಾರದೂರವಿದೆ. ಇದೇನಿದು ಮದ್ಯ ಮಾರಾಟ ಬಂದ್‌! ಅಂತೂ ಅಚಾನಕ್‌ ಆಗಿ ಎರಗಿದ ಇಂಥದೊಂದು ಸಿಡಿಲನ್ನು ರಾಜಧಾನಿಯ ಮದ್ಯಪ್ರಿಯರು ಅರಗಿಸಿಕೊಳ್ಳುವುದು ಕಷ್ಟವೇ. ಮೋಡ ಮುಸುಕಿದ ವಾತಾವರಣ, ಆಫೀಸಿಗೆ ಗೋಲಿ ಹೊಡೆದು ಬೆಚ್ಚಗೆ ಮನೆಯಲ್ಲಿರೋಣ ಎಂದುಕೊಳ್ಳುತ್ತಿರುವ ವಾತಾವರಣ ಸಾಧಕರಿಗಂತೂ ಈ ಸೋಮವಾರ ಕರಾಳ ದಿನ, ಅವರು ಶಪಿಸದೆ ಬಿಡರು.

ಇದೆಲ್ಲ ಗುಂಡು ಪ್ರಿಯರ ಗೋಳಾಟವಾದರೆ, ಮದ್ಯ ಮಾರಾಟಗಾರರದು ಬೇರೆಯದೇ ಸಮಸ್ಯೆ. ಡಿಸ್ಟಿಲ್ಲರಿ ಮಾಲೀಕರು ಮದ್ಯದ ಬೆಲೆಗಳನ್ನು ಏರಿಸಿರುವುದರಿಂದ ಪೆಟ್ಟು ತಿಂದಂತಿರುವ ಮಾರಾಟಗಾರರು, ಸೆ.24 ರ ಸೋಮವಾರ ಮದ್ಯ ಮಾರಾಟವನ್ನು ಬಂದ್‌ ಮಾಡುವ ಮೂಲಕ ತಮ್ಮ ಅಳಲನ್ನು ಡಿಸ್ಟಿಲ್ಲರಿ ಮಾಲೀಕರಿಗೆ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಸೋಮವಾರದ ಮದ್ಯ ಮಾರಾಟ ಬಂದ್‌ಗೆ ಕರ್ನಾಟಕ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌ ಹಾಗೂ ಬೆಂಗಳೂರು ಮದ್ಯ ಮಾರಾಟಗಾರರ ಸಂಘ ಕರೆ ನೀಡಿದೆ.

ಮದ್ಯ ಮಾರಾಟಗಾರರ ಸಿಟ್ಟು ಕೇವಲ ಡಿಸ್ಟಿಲ್ಲರಿ ಮಾಲಿಕರ ಮೇಲಲ್ಲ . ಸರ್ಕಾರ ಹಾಗೂ ಅಬಕಾರಿ ಇಲಾಖೆಯತ್ತಲೂ ಕಣ್ಣು ಹಾಯಿಸಿ ಗುರ್ರ್‌ ಎನ್ನುತ್ತಿದ್ದಾರೆ. ಮಾರಾಟಗಾರರಲ್ಲಿ ಸಮಸ್ಯೆಗಳ ಪಟ್ಟಿಯೇ ಇದೆ. ಅವುಗಳನ್ನು ಕರ್ನಾಟಕ ವೈನ್ಸ್‌ ಮರ್ಚೆಟ್ಸ್‌ ಅಸೋಸಿಯೇಶನ್‌ ಸಹ ಕಾರ್ಯದರ್ಶಿ ಕೆ.ಸಿ.ತಿಮ್ಮರಾಯಿಗೌಡ ಅವರ ಮಾತುಗಳಲ್ಲೇ ಹೇಳುವುದಾದರೆ-

  • ತೆರಿಗೆ ರಹಿತ ಮದ್ಯ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುತ್ತಿದೆ. ಅದಕ್ಕೆ ಬೇಕಾಗಿದೆ ಕಡಿವಾಣ.
  • ಮದ್ಯ ಮಾರಾಟಗಾರರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 12 ಕೋಟಿ ರುಪಾಯಿ ತೆರಿಗೆ ಸಂದಾಯವಾಗುತ್ತಿದೆ. ಆದರೂ ಸರ್ಕಾರ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟಗಾರರಿಗೆ ನೀಡುತ್ತಿರುವ ಕಿರುಕುಳ ನಿಂತಿಲ್ಲ . ಈ ಕಿರುಕುಳಕ್ಕೆ ತಕ್ಷಣ ಮುಟ್ಟಿಸಬೇಕಾಗಿದೆ ಕೊನೆ.
  • ಹೆದ್ದಾರಿಗಳುದ್ದಕ್ಕೂ ತಲೆಯೆತ್ತಿ ನಿಂತಿವೆ ಡಾಬಾ- ರೆಸಾರ್ಟ್‌ಗಳು. ಅಲ್ಲೋ ಅನಧಿಕೃತ ಮದ್ಯದ ರಾಜಾರೋಷ ಮಾರಾಟ. ಇದಕ್ಕೆ ತೊಡಿಸಬೇಕಿದೆ ಮೂಗುದಾರ.
  • ಜಿಲ್ಲಾವಾರು ಬೆಲೆ ಏಕರೂಪವಾಗಿರಲಿ. ಮಾರಾಟದ ಬೆಲೆ ವ್ಯತ್ಯಾಸವಾದರೆ ಏನು ಚೆನ್ನ?
  • ಮದ್ಯ ಮಾರಾಟಗಾರರ ಮೇಲಿನ ಇಂಡೆಂಟ್‌ ಹೆಚ್ಚಿಸಲಾಗಿದೆ. ವ್ಯಾಪಾರ ಆಗಲಿ, ಬಿಡಲಿ, ಇಂಡೆಂಟ್‌ ಮಾತ್ರ ಕೊಡಲೇಬೇಕು ಎಂದು ಸರ್ಕಾರ ಅಪೇಕ್ಷಿಸುವುದು ಯಾವ ಸೀಮೆಯ ಧರ್ಮ. ಆ ಕಾರಣ ಈ ಅಧರ್ಮವನ್ನು ಮೊದಲು ರದ್ದು ಮಾಡಬೇಕು.
  • ಪಳಗಿದವರೇ ಗೋಳಿಡುತ್ತಿದ್ದೇವೆ. ಆದ್ದರಿಂದ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಾರದು.
- ಇಂತಿಪ್ಪ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಮದ್ಯ ಮಾರಾಟಗಾರರು ರಾಜಧಾನಿಯಲ್ಲಿ ಒಂದು ದಿನದ ಬಂದ್‌ ನಡೆಸಿದ್ದಾರೆ.

ಬಾಲಂಗೋಚಿ : ಗುಂಡರಗೋವಿಗಳು ಮದ್ಯ ಮಾರಾಟ ಬಂದ್‌ಗೆ ವಿರೋಧ ವ್ಯಕ್ತ ಪಡಿಸಿದ್ದರೆ, ಗೃಹಿಣಿಯರು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು , ಬಂದ್‌ ಚಿರಾಯುವಾಗಲಿ ಎಂದು ಹಾರೈಸಿದ್ದಾರೆ ಎನ್ನುವ ವದಂತಿಗಳೂ ಗಾಳಿಯಲ್ಲಿವೆ.

(ಇನ್ಫೋ ಇನ್‌ಸೈಟ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X