ಬೆಂಗಳೂರಿನ ರೇನಾ ಮೇರಿ ಅಮೇರಿಕಾ ಕೋರ್ಟ್‌ನಲ್ಲಿ ನ್ಯಾಯಮೂರ್ತಿ
ಚಿಕಾಗೋ : ಬೆಂಗಳೂರು ಮೂಲದ ಭಾರತೀಯ ಅಮೆರಿಕಾವಾಸಿ ರೇನಾ ಮೇರಿ ವ್ಯಾನ್‌ಟೈನ್ ಅವರು ಯುಎಸ್‌ಎಯ ಅತೀ ದೊಡ್ಡ ಕೋರ್ಟ್ ಎಂದು ಪ್ರಸಿದ್ಧವಾಗಿರುವ ಇಲಿನಾಯ್ ಕುಕ್ ಕಂಟ್ರಿ ಸರ್ಕ್ಯುಟ್ ಕೋರ್ಟಿನ ಸಹನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ.
ಸುಮಾರು 400 ಮಂದಿ ನ್ಯಾಯಮೂರ್ತಿಗಳಿರುವ ಈ ಕೋರ್ಟಿನ ಸಹನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ರೇನಾ ಮೇರಿ ಮೂಲತಃ ಬೆಂಗಳೂರಿನವರು. 39ನೇ ವಯಸ್ಸಿಗೆ ಈ ಸಾಧನೆ ಮಾಡಿರುವ ಅವರು ನನ್ನ ಕನಸು ನನಸಾಗಿರುವುದಕ್ಕೆ ತುಂಬಾ ಖುಷಿಯಾಗುತ್ತದೆ ಎಂದು ಈ ಶುಭಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
ಇಲಿನಾಯ್ ರಾಜ್ಯದ ಕಂಟ್ರೋಲರ್ ಡಾನ್ ಹಿನ್ಸ್‌ನಲ್ಲಿ ಮುಖ್ಯ ಸಲಹಾಕಾರರಾಗಿರುವ ವ್ಯಾನ್‌ಟೈನ್ 1987ರಿಂದ 99ರವರೆಗೆ ಕುಕ್ ಕಂಟ್ರಿಯ ಅಟಾರ್ನಿ ಯಾಗಿದ್ದರು. ಮಿಚಿಗನ್‌ನ ಒಕ್ಲಾಂಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರೆ, ನ್ಯೂಯಾರ್ಕ್ ಕಾನೂನು ಕಾಲೇಜಿನಿಂದ ನ್ಯಾಯಶಾಸ್ತ್ರದಲ್ಲಿ ಉನ್ನತ ಪದವಿ(ಜ್ಯೂರಿಸ್ ಡಾಕ್ಟರ್) ಗಳಿಸಿದ್ದಾರೆ.
ಸಿವಿಲ್ ಮತ್ತು ಕ್ರಿಮಿನಲ್ ಕೇಸ್‌ಗಳನ್ನು ನಿರ್ವಹಿಸಿದ ಅನುಭವ ಹೊತ್ತ ವ್ಯಾನ್‌ಟೈನ್ ಅವರು ಜೂನ್ 12ರಂದು ಸಹ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸ್ಟೇಟ್ ಅಟಾರ್ನಿಯ ಏಷ್ಯನ್ ಅಮೆರಿಕನ್ ಅಡ್‌ವೈಸರಿ ಕೌನ್ಸಿಲ್‌ನ ಅಧ್ಯಕ್ಷೆಯಾಗಿ, ಇಂಡೋ ಅಮೆರಿಕನ್ ಸೆಂಟರ್ ಮತ್ತು ಏಷ್ಯನ್ ಹ್ಯೂಮನ್ ಸರ್ವಿಸ್ ಮತ್ತು ಇಂಡೋ ಅಮೆರಿಕನ್ ಡೆಮಾಕ್ರೆಟಿಕ್ ಸಂಸ್ಥೆ (ಐಎಡಿಓ)ಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಸಾಧನೆಯ ಹಾದಿಯಲ್ಲಿ ವ್ಯಾನ್‌ಟೈನ್ ಅವರು ಏಷ್ಯನ್ ಅಮೆರಿಕನ್ ಬಾರ್ ಅಸೋಸಿಯೇಷನ್ ಪ್ರಶಸ್ತಿ, ಐಎಡಿಓ ನಿಂದ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ತಮ್ಮ ಪತಿ ಮ್ಯಾಥ್ಯೂ ಹಾಗೂ ಪುಟ್ಟ ಮಗಳು ಕ್ರಿಸ್ಟಿನಾ ಜೊತೆ ವ್ಯಾನ್‌ಟೈನ್ ಚಿಕಾಗೋದಲ್ಲಿ ವಾಸವಾಗಿದ್ದಾರೆ.
(ಐಎಎನ್‌ಎಸ್)












Click it and Unblock the Notifications