ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬೆರಕೆ ಪೆಟ್ರೋಲ್‌ ಮಾರಾಟವೂ.. ವಾಯು ಮಾಲಿನ್ಯ ನಿಯಂತ್ರಣವೂ..

By Super
|
Google Oneindia Kannada News

ಬೆಂಗಳೂರು : ಮೊನ್ನೆ ಇದ್ದಕ್ಕಿದ್ದಂತೆ ನಮ್ಮ ರಾಜ್ಯದ ಸಾರಿಗೆ ಸಚಿವರು ವಾಯು ಮಾಲಿನ್ಯದ ಪ್ರಸ್ತಾಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವುದಕ್ಕೆ ಕಲಬೆರಕೆ ಪೆಟ್ರೋಲೂ ಒಂದು ಮುಖ್ಯ ಕಾರಣ ಎಂದಿದ್ದಾರೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ 4 ಕಾರ್ಯಪಡೆ ರಚಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಅಂತೂ ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಕಲಬೆರಕೆ ಪೆಟ್ರೋಲ್‌ ಕಾರಣ ಎಂಬುದು ರಾಜ್ಯ ಸರಕಾರಕ್ಕೂ ಮನವರಿಕೆ ಆಗಿದೆ. ಬೆಂಗಳೂರಿನ ಪೆಟ್ರೋಲ್‌ ಬಂಕ್‌ಗಳ ಪ್ರಾಮಾಣಿಕತೆಯ ಪರೀಕ್ಷೆಯೂ ಆಗುತ್ತಿದೆ. ಐದು ಪೆಟ್ರೋಲ್‌ ಬಂಕ್‌ಗಳ ಮೇಲೆ ಮೊಕದ್ದಮೆಯನ್ನೂ ಹೂಡಲಾಗಿದೆ.

ಅದರೂ ಕಲಬೆರಕೆ ಪೆಟ್ರೋಲ್‌ ಮಾರಾಟ ನಿಂತಿಲ್ಲ. ಆಯಿಲ್‌ ಮಾರಾಟ ಮಾಡುವ ಅಂಗಡಿಗಳಲ್ಲೂ ಕದ್ದು ಮುಚ್ಚಿ ಪೆಟ್ರೋಲ್‌ ಮಾರಾಟ ಮಾಡುವವರ ಸಂಖ್ಯೆ ಬೆಂಗಳೂರಿನಲ್ಲಿ ಗಣನೀಯವಾಗಿ ಏರಿದೆ. ಏರುತ್ತಿದೆ. ಮೊದಲೇ ಕಲಬೆರಕೆ ಆದ ಪೆಟ್ರೋಲ್‌ಗೆ ಅವರು ಮತ್ತಷ್ಟು ಸೀಮೆಎಣ್ಣೆ ಬೆರೆಸಿ ಮಾರಾಟ ಮಾಡುತ್ತಿದ್ದಾರೆ. ಈ ಪೆಟ್ರೋಲ್‌ ಕೊಳ್ಳುವ ಆಟೋ ಚಾಲಕರಂತೂ ಅದಕ್ಕೆ ಮತ್ತಷ್ಟು ಸೀಮೆಎಣ್ಣೆ ಬೆರೆಸಿ ಆಟೋ ಓಡಿಸುತ್ತಿದ್ದಾರೆ. ಹೀಗಾಗಿ ವಾಹನಗಳಿಂದ ಹೊರಹೊಮ್ಮುವ ದಟ್ಟಧೂಮ ಬೆಂಗಳೂರಿಗರಿಗೆ ಉಸಿರಾಡಲು ಸ್ವಚ್ಛಗಾಳಿಯೂ ದೊರಕದಂತೆ ಮಾಡಿಬಿಟ್ಟಿದೆ.

ಯಂತ್ರಗಳ ಕೊರತೆ : ಸರಕಾರ ವಾಯು ಮಾಲಿನ್ಯ ನಿಯಂತ್ರಣಕ್ಕೆ 4 ಕಾರ್ಯಪಡೆಗಳನ್ನೇನೋ ರಚಿಸಿದೆ. ಅದು ಕಾರ್ಯ ಪ್ರವೃತ್ತವಾಗಿದೆ. ಆದರೆ, ಸಾರಿಗೆ ಇಲಾಖೆ ಬಳಿಯಾಗಲೀ, ಪೊಲೀಸ್‌ ಇಲಾಖೆ ಬಳಿಯಾಗಲೀ ಸಾಕಷ್ಟು ಪ್ರಮಾಣದಲ್ಲಿ ಹೊಗೆಯ ಪ್ರಮಾಣ ಪರೀಕ್ಷಿಸುವ ಎಮಿಷನ್‌ ಪರೀಕ್ಷಾ ಯಂತ್ರಗಳಿಲ್ಲ. ವಿಧಿಯಿಲ್ಲದೆ ಈ ಇಲಾಖೆಗಳು ಯಥೇಚ್ಛವಾಗಿ ಯಂತ್ರಗಳನ್ನು ಹೊಂದಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಶರಣು ಹೋಗಬೇಕು.

ಮಾಲಿನ್ಯ ನಿಯಂತ್ರಣ ಮಂಡಳಿ ಯಂತ್ರವಿಟ್ಟುಕೊಂಡೂ ಕೆಲಸ ಮಾಡುತ್ತಿಲ್ಲ. ಅತಿ ಹೆಚ್ಚು ಧೂಮ ಉಗುಳುವ ವಾಹನ ತಡೆದು, ಪರೀಕ್ಷಿಸಿ ದಂಡ ವಿಧಿಸುವ ಅಧಿಕಾರ ಪೊಲೀಸರಿಗೆ ಇದೆಯಾದರೂ, ಪೊಲೀಸರು ಆ ಕೆಲಸ ಮಾಡುತ್ತಿಲ್ಲ. ಸದ್ಯಕ್ಕೆ ಅವರು ನಿಲುಗಡೆ ಇಲ್ಲದ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಟೈಗರ್‌ ಸಹಾಯದಿಂದ ಠಾಣೆಗೆ ಸಾಗಿಸಿ, ದಂಡ ವಸೂಲಿ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಸಾರಿಗೆ ಇಲಾಖೆ ಸಹ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎರವಲು ಪಡೆದ ಯಂತ್ರಗಳ ನೆರವಿನಿಂದ ಪರೀಕ್ಷೆ ನಡೆಸುತ್ತಿದೆಯಾದರೂ ಅದರ ಪ್ರಮಾಣ ಅತ್ಯಲ್ಪ. ಇನ್ನು ಕಾರ್ಯಪಡೆಗಳು ಕಲಬೆರಕೆ ಪೆಟ್ರೋಲ್‌ ಮಾರಾಟ ಮಾಡುವ ಬಂಕ್‌ಗಳ ತಪಾಸಣೆಯನ್ನಷ್ಟೇ ಮಾಡುತ್ತಿವೆ. ಎಲ್ಲ ಬಡಾವಣೆಯ ರಸ್ತೆ ರಸ್ತೆಯಲ್ಲೂ ಇರುವ ಆಯಿಲ್‌ ಅಂಗಡಿಗಳಲ್ಲಿ ಮಾರಾಟ ಮಾಡುವ ಪೆಟ್ರೋಲ್‌ನ ಕಲಬೆರಕೆ ತಡೆಯಲು ಯಾವುದೇ ಇಲಾಖೆ ಗಮನ ಹರಿಸಿದಂತಿಲ್ಲ.

ಭ್ರಷ್ಟಾಚಾರ :ಕೆಲವು ವರ್ಷಗಳ ಹಿಂದೆ ವಾಹನಗಳ ಹೊಗೆ ಪರೀಕ್ಷೆಯನ್ನು ಕಡ್ಡಾಯ ಮಾಡಿದ ಸಂದರ್ಭದಲ್ಲಿ ಮೈಲಿಗಟ್ಟಲೆ ಉದ್ದದ ಕ್ಯೂನಲ್ಲಿ ನಿಂತು ವಾಹನ ಮಾಲಿಕರು ತಮ್ಮ ವಾಹನಗಳ ಹೊಗೆ ಪ್ರಮಾಣದ ಪರೀಕ್ಷೆ ಮಾಡಿಸುತ್ತಿದ್ದರು. ಹೊಗೆ ಪ್ರಮಾಣ ಅಧಿಕವಾಗಿದ್ದರೂ ಕೂಡ ಖಾಸಗಿ ಪರೀಕ್ಷಾ ಕೇಂದ್ರಗಳು ಹೆಚ್ಚು ಹಣ ಪಡೆದು ಪ್ರಮಾಣ ಪತ್ರ ಹಾಗೂ ಸ್ಟಿಕ್ಕರ್‌ ನೀಡುತ್ತಿದ್ದರು. ಹೀಗಾಗಿ ಧೂಮ ಪರೀಕ್ಷೆ ತನ್ನ ಅರ್ಥವನ್ನೇ ಕಳೆದುಕೊಂಡಿತು.

ಈಗಂತೂ ಹೊಗೆ ಪರೀಕ್ಷೆಯ ಬಗ್ಗೆ ಪೊಲೀಸರಾಗಲೀ, ಸಾರಿಗೆ ಇಲಾಖೆಯಾಗಲೀ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ವಾಹನ ಮಾಲಿಕರೂ ತಮ್ಮ ವಾಹನದಿಂದ ಎಷ್ಟು ಹೊಗೆ ಬರುತ್ತದೆ ಎಂದು ನೋಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ತಾವು ಬಳಸುತ್ತಿರುವ ಪೆಟ್ರೋಲ್‌ ಕಲಬೆರಕೆಯೋ ಅಲ್ಲವೋ ಎಂಬುದೂ ಅವರಿಗೆ ತಿಳಿದಿಲ್ಲ. ಈ ಮಧ್ಯೆ ಪೆಟ್ರೋಲ್‌ ಬಂಕ್‌ ತಪಾಸಣೆ ಮಾಡುವ ಅಧಿಕಾರ ಉಳ್ಳ ನಾಗರಿಕ ಸರಬರಾಜು ಇಲಾಖೆ ಬಳಿ ಪೆಟ್ರೋಲ್‌ ಗುಣಮಟ್ಟ ಪರೀಕ್ಷಿಸುವ ಯಂತ್ರ ಇದೆಯಾದರೂ ಅದೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆ ಇಲಾಖೆಯ ಅಧಿಕಾರಿಗಳ ಪ್ರಮಾಣಿಕತೆಯ ಬಗ್ಗೆಯೇ ಜನರಿಗೆ ಸಂಶಯವಿದೆ.

ಇನ್ನು ತೂಕ ಮತ್ತು ಅಳತೆ ಇಲಾಖೆ ಕೂಡ ಪೆಟ್ರೋಲ್‌ ಬಂಕ್‌ಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಪೆಟ್ರೋಲ್‌ ಹಾಗೂ ಡೀಸಲ್‌ ಹಾಕುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆಯೂ ಗಮನ ಹರಿಸಿಲ್ಲ. ಎಲ್ಲ ಪೆಟ್ರೋಲ್‌ ಬಂಕ್‌ನವರೂ ಅಳತೆಯಲ್ಲಿ ಮೋಸ ಮಾಡುತ್ತಾರೆ ಎಂದು ನಾಗರಿಕರು ಮಾತಾಡುವುದು, ಸುಮ್ಮನಾಗುವುದು ಮಾಮೂಲು. ಇಲ್ಲೂ ಪ್ರಭಾವ, ಭ್ರಷ್ಟಾಚಾರ ತಾಂಡವವಾಡುತ್ತದೆ. ಒಟ್ಟಿನಲ್ಲಿ ವಾಯುಮಾಲಿನ್ಯ ನಿಯಂತ್ರಣ ಸಾಧ್ಯವಾಗಿ, ನಾಗರಿಕರು ಸ್ವಚ್ಛ ಗಾಳಿಯನ್ನು ಉಸಿರಾಡುವ ಕಾಲ ಎಂದು ಬರುತ್ತದೊ ಆ ವಾಯುದೇವನೇ ಬಲ್ಲ.ವಾರ್ತಾ ಸಂಚಯ

English summary
When we will get good air to breath
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X