• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಊರ ನೋಟಗಳು..

By Staff
|

*ಟಿ. ಎಂ. ಸತೀಶ್‌

ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ.. ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆನಾಡು, ಬೇಲೂರು, ಹಳೆಬೀಡು.. ಬೇಲೂರು, ಹಳೆ ಬೀಡು.. ಎಂಬ ಕನ್ನಡ ಚಿತ್ರಗೀತೆ ಕಿವಿಯ ಮೇಲೆ ಬಿದ್ದೊಡನೆಯೇ ಬೇಲೂರು ಶಿಲಾಬಾಲಿಕೆಯರು, 17 ಮೀಟರ್‌ ಎತ್ತರದ ವಿಶ್ವವಿಖ್ಯಾತ ಏಕಶಿಲೆಯ ಶಾಂತಮೂರ್ತಿ ಗೊಮ್ಮಟೇಶ್ವರ, ಗೊರೂರಿನ ಯೋಗಾನರಸಿಂಹ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯದ ಸುಂದರ ಶಿಲ್ಪಕಲೆ ಕಣ್ಣೆದುರು ಮೂಡುತ್ತದೆ.

ಬೇಲೂರು, ಹಳೇಬೀಡಿನ ದೇವಾಲಯಗಳು ಕರ್ನಾಟಕದ ಹೆಮ್ಮೆಯ ತಾಣಗಳು, ಕರಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯು ಎಂಬ ಆ ಒಂದು ಉಕ್ತಿ ಇಡೀ ದೇಗುಲದ ಸಮಗ್ರ ಚಿತ್ರಣವನ್ನೇ ನೀಡುತ್ತದೆ. ಕಡುಗಲ್ಲಿನಲ್ಲಿ ಅರಳಿದ ಸುಂದರ ಶಿಲ್ಪಕಲೆಗಳು ಕಣ್ಮನ ಸೆಳೆಯುತ್ತವೆ. ಮನಮೋಹಕವಾದ ಕುಸುರಿಯ ಕೆಲಸ, ಕನ್ನಡಿಗರ ಕಲಾಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ನೀವು ಬೇಲೂರು ಹಳೆಬೀಡು ನೋಡಿಯೇ ಇದ್ದೀರಿ ! ಇಲ್ಲವಾದರೆ, ಹೇಗೂ ಬೇಸಿಗೆ ರಜೆ ಇದೆ. ಹೊರಡಲು ಸಿದ್ಧರಾಗಿ.

ಬೇಲೂರು : ಬೇಲೂರು ಎಂದೊಡನೆ, ಕನ್ನಡನಾಡನ್ನು ಆಳಿದ ಹೆಮ್ಮೆಯ ಹೊಯ್ಸಳರು, ಮಾತೇ ಇಲ್ಲದ ಕಾವ್ಯಕನ್ನಿಕೆಯರನ್ನು ಕಲ್ಲಿನಲ್ಲೇ ಅರಳಿಸಿದ ಖ್ಯಾತ ಶಿಲ್ಪಿ ಜಕ್ಕಣ ನೆನಪಿಗೆ ಬಾರದಿರಲು ಸಾಧ್ಯವೆ?. ಯಗಚಿ ನದಿಯ ದಂಡೆಯಲ್ಲಿರುವ ಈ ಶಿಲ್ಪಕಲೆಯ ತವರು ಬೆಂಗಳೂರಿನಿಂದ 222 ಹಾಗೂ ಹಾಸನದಿಂದ 38 ಕಿ.ಮೀಟರ್‌ ದೂರದಲ್ಲಿದೆ.

ಹಿಂದೆ ಹೊಯ್ಸಳ ಅರಸರ ಹೆಮ್ಮೆಯ ರಾಜಧಾನಿಯಾಗಿದ್ದ ಈ ನಾಡು, ಇಂದೂ ಸುಂದರ ದೇವಾಲಯಗಳಿಂದ ವಿಶ್ವವಿಖ್ಯಾತವಾಗಿದೆ. ಇಲ್ಲಿನ ಚನ್ನಕೇಶ್ವರ ದೇವಾಲಯ ಹೊಯ್ಸಳರ ಕಲಾರಾಧನೆಯನ್ನು ಎತ್ತಿಹಿಡಿಯುತ್ತದೆ. ಈ ದೇವಾಲಯದ ಎಲ್ಲ ಪ್ರಾಕಾರಗಳೂ ಶಿಲ್ಪಕಲೆಯಿಂದ ತುಂಬಿವೆ. ದೇವಾಲಯಕ್ಕೆ ಬಳಸಲಾಗಿರುವ ಯಾವುದೇ ಆವರಣಗೋಡೆಗಳ ಕಲ್ಲೂ ಬರಿಯ ಬಂಡೆಯಲ್ಲ. ಅದೊಂದು ಶಿಲ್ಪ. ಹೀಗಾಗೇ ಈ ದೇವಾಲಯ ನಿರ್ಮಾಣಕ್ಕೆ 103 ವರ್ಷಗಳೇ ಹಿಡಿಯಿತು.

ಆನೆಗಳು, ಪುರಾಣ, ಪುಣ್ಯಕಥೆಗಳ ಕಥೆಗಳು, ನರ್ತಿಸುತ್ತಿರುವ ಶಿಲಾಬಾಲಕಿಯರು ಕನ್ನಡ ನಾಡಿನ ಹೆಮ್ಮೆಯ ಶಿಲ್ಪಿಗಳ ಕಲಾಪ್ರೌಢಿಮೆಯನ್ನು ಎತ್ತಿಹಿಡಿಯುತ್ತವೆ. ಬೇಲೂರು, ಹಳೇಬೀಡಿನ ದೇವಾಲಯಗಳಿಗೆ ಆ ದೇವಾಲಯಗಳೇ ಸಾಟಿ. ಇಂತಹ ಒಂದು ಅಪೂರ್ವ ಕಲಾ ದೇವಾಲಯಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

ಕಲ್ಲಿನಲ್ಲೇ ಚಿಗುರುತ್ತಿರುವಂತೆ ಕಾಣುವ ತರುಲತೆಗಳು, ಕಪ್ಪೆ ಚೆನ್ನಿಗರಾಯನ ದೇವಾಲಯ, ನವರಂಗಗಳ ಮೇಲ್ಛಾವಣಯ ಸುಂದರ ಶಿಲ್ಪಕಲೆ, ಪ್ರತಿಯಾಂದು ಕಂಬಗಳಲ್ಲಿಯೂ ಇರುವ ವೈವಿಧ್ಯತೆ ಸೂಕ್ಷ್ಮವಾಗಿ ಗಮನಿಸಲೇಬೇಕಾದ ಕೆತ್ತನೆಗಳು. ಬೇಲೂರು ದೇವಾಲಯದ ಶಿಲ್ಪಕಲೆಯನ್ನು ಕಣ್ಣಲ್ಲಿ ತುಂಬಿಕೊಳ್ಳುವುದಕ್ಕೆ ಇದಕ್ಕಿಂತ ಸೂಕ್ತಕಾಲ ಮತ್ತೊಂದಿದೆಯೇ?

ಹಳೇಬೀಡು : ಈ ಕ್ಷೇತ್ರದ ಹೆಸರು ಹಳೆಯ ಬೀಡಾದರೂ, ಇಲ್ಲಿನ ಶಿಲ್ಪಕತೆಗಳೂ ನಿತ್ಯನೂತನ. ನವನವೀನ. ಬೆಂಗಳೂರಿನಿಂದ 239 ಕಿ.ಮೀಟರ್‌ ಹಾಗೂ ಹಾಸನ ಜಿಲ್ಲಾಕೇಂದ್ರದಿಂದ 27 ಕಿ.ಮೀಟರ್‌ ದೂರದಲ್ಲಿರುವ ಹಳೇಬೀಡು ಬೇಲೂರಿಗೆ ಕೇವಲ 17 ಕಿ.ಮೀಟರ್‌ ಅಂತರದಲ್ಲಿದೆ.

ಕರ್ನಾಟಕದ ಪರಂಪರೆಯ ಪ್ರತೀಕವಾಗಿರುವ ಈ ಊರಿನಲ್ಲಿರುವ ದೇವಾಲಯ ಹೊಯ್ಸಳ ದೊರೆಗಳ ಕಲಾಶ್ರೀಮಂತಿಕೆಯ ದ್ಯೋತಕವಾಗಿದೆ. ಇಲ್ಲಿ 12ನೇ ಶತಮಾನದ ಹೊಯ್ಸಳೇಶ್ವರ ದೇವಾಲಯವಿದೆ. ಇಲ್ಲಿನ ದೇವಾಲಯದ ಎಲ್ಲ ಗೋಡೆಗಳ ಮೇಲೂ ಮುಕ್ಕೋಟಿ ದೇವತೆಗಳ ಕೆತ್ತನೆಗಳಿವೆ, ಮಹಾಭಾರತ, ರಾಮಾಯಣದ ಚಿತ್ತಾರಗಳೂ ಇವೆ. ಪ್ರಾಣಿ, ಪಕ್ಷಿಗಳೂ ಕಲ್ಲಿನಲ್ಲಿ ಇಲ್ಲಿ ಅರಳಿವೆ. ಎತ್ತರವಾದ ಹಾಗೂ ಸುಂದರವಾದ ನಂದಿಯ ಮೂರ್ತಿಗಳೂ ಇವೆ. ಜೈನ ಬಸದಿಗಳೂ ಇವೆ.

ಶ್ರವಣಬೆಳಗೊಳ : ಎತ್ತರ ಬೆಟ್ಟವನ್ನು ಆಯಾಸದಿಂದ ಏರಿ ಮೇಲೆ ಹೋಗುವುದು ಹೇಗಪ್ಪ ಎಂದು ಗೊಣಗುತ್ತಲೇ, ಕಾಲೆಳೆದುಕೊಂಡು ಮೇಲೇರಿದ ಕೂಡಲೇ ಕಣ್ಣೆದುರು ನಿಲ್ಲುವ ಶಾಂತಚಿತ್ತದ ಬಾಹುಬಲಿಯ 17 ಮೀಟರ್‌ಗಳ ಎತ್ತರದ ಏಕಶಿಲೆಯ ಮೂರ್ತಿ ಎಲ್ಲ ಆಯಾಸವನ್ನೂ ಒಮ್ಮೆಗೇ ಪರಿಹರಿಸಿಬಿಡುತ್ತದೆ. ಇಂತಹ ಒಂದು ಶಿಲ್ಪಕಲೆಯನ್ನು ಕಂಡ ತಮ್ಮ ಬಾಳು ಧನ್ಯವಾಯಿತು ಎಂಬ ಭಾವನೆಯನ್ನು ಮೂಡಿಸುತ್ತದೆ.

ಬೆಂಗಳೂರಿನಿಂದ 150 ಕಿ.ಮೀಟರ್‌ ಹಾಗೂ ಹಾಸನದಿಂದ 51 ಕಿ.ಮೀಟರ್‌ ದೂರದಲ್ಲಿರುವ ಈ ಕ್ಷೇತ್ರ ಜೈನರ ಪವಿತ್ರ ಸ್ಥಳ. ಇಲ್ಲಿ ಗಾಳಿ, ಮಳೆಗೆ ಜಗ್ಗದೆ ನಿಶ್ಚಿಂತೆಯಿಂದ ಜಗದ ಎಲ್ಲ ಲೌಕಿಕವ ಮರೆತು, ವೈರಾಗ್ಯದ ದರ್ಶನ ಮಾಡಿಸುತ್ತಾ ನಿಂತಿರುವ ಗೊಮ್ಮಟನಿಗೆ 12 ವರ್ಷಗಳಿಗೊಮ್ಮೆ ಮಹಾಮಜ್ಜನ ನಡೆಯುತ್ತದೆ. ದೇಶ ವಿದೇಶಗಳಿಂದ ದಿನನಿತ್ಯವೂ ಇಲ್ಲಿಗೆ ನೂರಾರು ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ.

ವಿಶ್ವದ ಅತಿ ಎತ್ತರದ ಏಕಶಿಲೆಯ ಮೂರ್ತಿಯನ್ನು ಕಣ್ಣಾರೆ ಕಂಡು ಆಶ್ಚರ್ಯಚಕಿತರಾಗುತ್ತಾರೆ. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಂತೂ 1000 ವರ್ಷಗಳಷ್ಟು ಹಳೆಯದಾದ ಈ ಮೂರ್ತಿಯ ಮೇಲೆ ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆಯೇ ಎಲ್ಲಕ್ಕಿಂತ ಮಿಗಿಲಾಗಿ ಚಿನ್ನದ ನಾಣ್ಯಗಳಿಂದ ಮಾಡುವ ಅಭಿಷೇಕವನ್ನು ಕಣ್ಣಾರೆ ಕಾಣುವುದು ಒಂದು ಆನಂದ. ಅವಿಸ್ಮರಣೀಯ ಅನುಭವ.

ಶ್ರಮಪಟ್ಟು ನೀವು ಬೆಟ್ಟ ಹತ್ತಿ ಹೋಗುವುದಾದರೆ ಅಡ್ಡಿ ಅಲ್ಲ. ನಿಮ್ಮ ಕೈಲಿ ಬೆಟ್ಟ ಹತ್ತಲಾಗದು ಎನ್ನಿಸಿದರೆ, ಡೋಲಿಗಳಲ್ಲಿ ನಿಮ್ಮನ್ನು ಕೂರಿಸಿಕೊಂಡು ಬೆಟ್ಟದ ಮೇಲೆ ಕೊಂಡೊಯ್ಯುವವರೂ ಇಲ್ಲಿದ್ದಾರೆ. ಅದಕ್ಕೆ ನೀವು ಹಣ ಕೊಡಬೇಕು ಅಷ್ಟೇ. ಈ ಬೆಟ್ಟದಲ್ಲಿ ನೂರಾರು ಶಾಸನಗಳಿವೆ. ಶಿಲಾಶಾಸನಗಳ ಬಗ್ಗೆ ಆಸಕ್ತಿ ಉಳ್ಳವರಿಗೆ, ಅಧ್ಯಯನಿಗಳಿಗೆ ಇದು ಒಂದು ವಿಶ್ವವಿದ್ಯಾಲಯ. ಇಲ್ಲಿ ಮಹಾವೀರರ, ತೀರ್ಥಂಕರರ ಮೂರ್ತಿಗಳೂ ಇವೆ.

ಅಂದಹಾಗೆ, 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ 2005ನೇ ಇಸವಿಯಲ್ಲಿ ಜರುಗಲಿದೆ.

ಗೊರೂರು : ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಗೊರೂರು ಯೋಗಾನರಸಿಂಹನ ನೆಲೆವೀಡಾದರೂ, ಸಾಹಿತಿ ರಾಮಸ್ವಾಮಿ ಅಯ್ಯಂಗಾರ್‌ ಅವರಿಂದ ಖ್ಯಾತವಾದ ಒಂದು ಸಾಹಿತ್ಯಬೀಡು.

ಇಲ್ಲಿರುವ ದೇವಾಲಯ ಸುಂದರ ಶಿಲ್ಪಕಲಾವೈಭವದಿಂದ ಕೂಡಿದೆ. ಮುಂಭಾಗದ ಗೊಪುರ ಹೊಯ್ಸಳರ ಶಿಲ್ಪಕಲೆಯಿಂದ ಸಮೃದ್ಧವಾಗಿದೆ. ಪ್ರಶಾಂತವಾಗಿ ಹರಿವ ಹೇಮಾವತಿ ನದಿ ದಂಡೆಯ ಮೇಲಿರುವ ಈ ದೇವಾಲಯದ ಸುತ್ತ ಮುತ್ತ ಹಸಿರು ಹೊಲಗದ್ದೆಗಳು, ತೇಗ, ತಾಳೆ, ಮಾವು, ಹಲಸು ಮೊದಲಾದ ಮರಗಿಡಗಳಿವೆ.

ಮೆಟ್ಟಿಲುಗಳಿಂದ ಕೂಡಿದ ಸುಂದರವಾದ ಸ್ನಾನಘಟ್ಟವಿದೆ. ಹಾಸನದಿಂದ 23 ಕಿ.ಮೀಟರ್‌ ದೂರದಲ್ಲಿರುವ ಗೊರೂರಿಗೆ ಸಾಕಷ್ಟು ಬಸ್‌ ಸೌಕರ್ಯವಿದೆ. ಬಸ್‌ ನಿಲ್ದಾಣದಿಂದ ಒಂದು ಕಿ.ಮೀಟರ್‌ ದೂರದಲ್ಲಿ ದೇವಾಲಯ ಇದೆ. 1586ರಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ಒಂದೂವರೆ ಅಡಿಯಷ್ಟು ಎತ್ತರದ ಸುಂದರ ಶಿಲ್ಪಕಲಾ ಪೀಠದ ಮೇಲೆ ಹೊಯ್ಸಳರ ಕಾಲದ ಮನಮೋಹಕವಾದ ಆರು ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿಯ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಅತಿ ಸಮೀಪದಲ್ಲೇ ಗೊರೂರು ಡ್ಯಾಮ್‌ ಕೂಡ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more