ಗರಳಪುರಿಯೆಂಬ ಭೂಕೈಲಾಸ

* ವಾಗ್ಮಿತ್ರ

Nanjanagudu Srikanteshwara templeನಂಜನಗೂಡು ಒಂದು ಐತಿಹಾಸಿಕ ಸ್ಥಳ. ಪುರಾಣ ಪ್ರಸಿದ್ಧ ನಗರ. ಇದು ವಿಷವನ್ನೇ ಕುಡಿದ ನಂಜುಂಡ - ಶ್ರೀಕಂಠೇಶ್ವನಾಗಿ ನೆಲೆಸಿಹ ಸ್ಥಳ. ನಂಜನಗೂಡನ್ನು ಭೂಕೈಲಾಸ, ದಕ್ಷಿಣ ಕಾಶಿ ಎನ್ನುವವರೂ ಇದ್ದಾರೆ. ಈ ಕ್ಷೇತ್ರಕ್ಕೆ ಇದ್ದ ಪ್ರಾಚೀನ ಹೆಸರು ಗರಳಪುರಿ. ಗರಳ ಎಂದರೆ ವಿಷ.

ಪುರಾಣ : ದೇವ ದಾನವರು ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಿದ ಕಾಲದಲ್ಲಿ ಕಲ್ಪವೃಕ್ಷ, ಕಾಮಧೇನುವಿನ ಜತೆ ಹಾಲಾಹಲವೂ ಉದ್ಭವಿಸಿತು. ಈ ಹಾಲಾಹಲದಿಂದ ಪ್ರಳಯವೇ ಘಟಿಸುವುದೆಂದು ದೇವ ದಾನವರಾದಿಯಾಗಿ ನರರೂ ನಡುಗಿದರು. ಆಗ ಜಗತ್‌ ರಕ್ಷಕನಾದ ಶಿವನು ತಾನು ಹಾಲಾಹಲವನ್ನು ಕುಡಿದನಂತೆ. ಪಾರ್ವತಿಯು ವಿಷವು ಶಿವನ ಉದರ ಸೇರದಂತೆ ಕಂಠವನ್ನು ಬಿಗಿಯಾಗಿ ಹಿಡಿದಳಂತೆ. ಹೀಗಾಗೇ ನಂಜನ್ನು ಅರ್ಥಾತ್‌ ವಿಷವನ್ನು ಕೊರಳಲ್ಲಿ ಉಳ್ಳ ಶಿವ ನಂಜುಂಡನಾದ, ಶ್ರೀಕಂಠನಾದ.

ಶ್ರೀಕಂಠೇಶ್ವರನು, ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಹಾಗೂ ನಂದಿ ಸಮೇತನಾಗಿರುವ ಈ ದೇವಾಲಯ ಬಹಳ ಪ್ರಾಚೀನವಾದುದು. ಕುಂಡಿನಿ ಹಾಗೂ ಕಪಿಲಾ ನದಿಯ ಸಂಗಮ ತೀರದಲ್ಲಿರುವ ಈ ಕ್ಷೇತ್ರ ಗರಳಪುರಿ ಎಂದೇ ಖ್ಯಾತವಾಗಿತ್ತು. ಕಾಲಾನಂತರ ಇದಕ್ಕೆ ನಂಜನಗೂಡು ಎಂದು ನಾಮಕರಣ ಮಾಡಲಾಯಿತು ಎನ್ನುತ್ತದೆ ಸ್ಥಳ ಪುರಾಣ.

ಮತ್ತೊಂದು ಕಥೆಯ ರೀತ್ಯ ಈ ಕ್ಷೇತ್ರದಲ್ಲಿ ಕೇಶೀ ರಾಕ್ಷಸನನ್ನು ಶಿವನು ಕೊಂದಾಗ, ರಕ್ಕಸನ ದೇಹದಿಂದ ಉದ್ಭವಿಸಿದ ವಿಷವನ್ನು ಶಿವ ಕುಡಿದನಂತೆ. ಪಾರ್ವತಿ ಆ ವಿಷವನ್ನು ಶಿವನ ಕಂಠದಲ್ಲೇ ಹಿಡಿದಳಂತೆ. ಶಿವನ ಕಂಠ ನೀಲಿಯ ಬಣ್ಣಕ್ಕೆ ತಿರುಗಿತು. ಹೀಗಾಗೇ ಶಿವ ನೀಲಕಂಠ, ಶ್ರೀಕಂಠ, ನಂಜುಂಡ ಎನಿಸಿಕೊಂಡ.

ಸರ್ವೇಶ, ಮಲ್ಲೇಶ, ವಾಗೀಶ, ಗೌರೀಶ ಎಂಬ ನೂರಾರು ಹೆಸರಿನಿಂದ ಕರೆಸಿಕೊಂಡಿರುವ ಶಿವ ವಿಷಕುಡಿದ ಈ ಸ್ಥಳ ಗರಳಪುರಿಯಾಯಿತು. ಶಿವನು ಪಾರ್ವತೀ ಸಹಿತನಾಗಿ ಇಲ್ಲಿಯೇ ನೆಲೆಸಿದ. ಕೃತಯುಗದಲ್ಲಿ ಪರಶುರಾಮಾವಾತಾರ ತಳೆದ ಶ್ರೀಮನ್ನಾರಾಯಣನಿಂದ ಪ್ರಕಾಶಿಸಲ್ಪಟ್ಟ ಶಿವನು ಇಲ್ಲಿ ತಾಂಡವೇಶ್ವರನಾಗಿ, ನಂಜುಂಡೇಶ್ವರನಾಗಿ ಭಕ್ತರನ್ನು ಉದ್ದರಿಸುತ್ತಿದ್ದಾನೆ.

ಹಕೀಮ ನಂಜುಂಡ : ಈ ದೇವಾಲಯದಲ್ಲಿ ಒಂದು ಸ್ಫಟಿಕ ಲಿಂಗವಿದೆ. ಇದಕ್ಕೆ ಹಕೀಮ ನಂಜುಂಡ ಎಂದೇ ಹೆಸರು. ಇದಕ್ಕೂ ಒಂದು ಐತಿಹಾಸಿಕ ಘಟನೆಯ ಹಿನ್ನೆಲೆ ಇದೆ. ಒಮ್ಮೆ ಶ್ರೀರಂಗಪಟ್ಟಣವನ್ನಾಳಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನರ ನೆಚ್ಚಿನ ಪಟ್ಟದ ಆನೆಗೆ ಕಾಯಿಲೆ ಬಂತು. ಯಾವ ಔಷಧ ನೀಡಿದರೂ ಗುಣವಾಗಲಿಲ್ಲ. ಟಿಪ್ಪೂ ನಂಜುಂಡನ ಮೊರೆ ಹೋದ. ಪಟ್ಟದಾನೆಯ ವ್ಯಾಧಿ ವಾಸಿಯಾಯಿತು. ಟಿಪ್ಪೂ ಈ ಸ್ಫಟಿಕ ಲಿಂಗ ನೀಡಿ, ಅದನ್ನು ಹಕೀಮ ನಂಜುಂಡ ಎಂದೇ ಕರೆದ. (ಹಕೀಮ ಎಂದರೆ ವೈದ್ಯ)

ಈ ದೇವಾಲಯವನ್ನು ಆನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ಜೀರ್ಣೋದ್ಧಾರ ಮಾಡಿದರು. ಗೋಪುರ ಕಟ್ಟಿಸಿದರು. ಶ್ರೀಕಂಠ ಮುಡಿ ನೀಡಿದರು. ಇಂದಿಗೂ ಇಲ್ಲಿ ಆರು ಕಾಲಗಳಲ್ಲೂ ಕ್ಷೀರಾಭಿಷೇಕ, ಶಾಲ್ಯಾನ್ನ ಅಭಿಷೇಕ, ಬಿಲ್ವ ಪತ್ರಾರ್ಚನೆ ನಡೆಯುತ್ತದೆ. ಶಿವರಾತ್ರಿ, ನವರಾತ್ರಿ, ಕಾರ್ತೀಕದಲ್ಲಿ ದೀಪೋತ್ಸವ ಹಾಗೂ ವಿಶೇಷ ಪೂಜೆ ಜರುಗುತ್ತದೆ.

ಭಕ್ತರು ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ತಮ್ಮ ಮುಡಿ ನೀಡಿ, ತಮ್ಮ ಕೋರಿಕೆ ಈಡೇರಿಸುವಂತೆ ಕೋರುತ್ತಾರೆ. ಕಪಿಲಾ ನದಿಯಲ್ಲಿ ಮಿಂದು ದೇವರ ದರ್ಶನ ಮಾಡುತ್ತಾರೆ. ಇಲ್ಲಿರುವ ಗಣೇಶನಿಗೆ ಬೆಣ್ಣೆಯ ಅಲಂಕಾರವನ್ನೂ ಹಾಕಿಸುತ್ತಾರೆ. ಇಲ್ಲಿನ ಮತ್ತೊಂದು ವಿಶೇಷ ಕಂಬದಲ್ಲಿ ಉದ್ಭವಿಸುತ್ತಿರುವ ಗಣಪ.

ಜಾತ್ರೆ : ಪ್ರತಿವರ್ಷ ಪಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಇಲ್ಲಿ ಪಂಚ ಮಹಾ ರಥೋತ್ಸವ ಜರುಗುತ್ತದೆ. ಒಂದೇ ದಿನ ಐದು ತೇರುಗಳನ್ನು ಎಳೆಯುವುದು ಇದೊಂದೇ ದೇವಾಲಯದಲ್ಲಿ. ಆಷಾಢದಲ್ಲಿ ಗಿರಿಜಾಕಲ್ಯಾಣ ಇಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ವಿವಾಹದ ಎಲ್ಲ ವಿಧಿವಿಧಾನಗಳೂ ಇರುವ ಈ ಗಿರಿಜಾ ಕಲ್ಯಾಣದಲ್ಲಿ ವರಪೂಜೆ, ಕಾಶಿಯಾತ್ರೆ, ಧಾರೆ ಎಲ್ಲವೂ ಜರುಗುತ್ತದೆ. ಭಕ್ತಾದಿಗಳು ತುಲಾಭಾರವನ್ನೂ ಇಲ್ಲಿ ಮಾಡಿಸುತ್ತಾರೆ.

ಕಾರ್ತೀಕ ಮಾಸದಲ್ಲಿ ಚಿಕ್ಕಜಾತ್ರೆಯೂ ಜರುಗುತ್ತದೆ. ಅಂದು ಮಾತ್ರ ಮೂರು ರಥ ಎಳೆಯಲಾಗುತ್ತದೆ. ಶಾಲ್ಯಾನ್ನ, ಶ್ರೀಕಂಠಮುಡಿಯಲ್ಲಿ ಶಿವನ ಸೊಬಗು ಕಾಣುವುದೇ ಒಂದು ಸೊಗಸು.

ವಾರ್ತಾಸಂಚಯ
ಮುಖಪುಟ / ನೋಡು ಬಾ ನಮ್ಮೂರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+