ಮಾವು ಬಂತು ಮಾರುಕಟ್ಟೆಗೆ
* ಮುಳಬಾಗಿಲು ರಮೇಶ
ಬೆಂಗಳೂರು : ಋತುರಾಜ ವಸಂತನೊಂದಿಗೆ ಚೈತ್ರದ ಆದಿಯಲ್ಲೇ ಹಣ್ಣುಗಳ ರಾಜ ಮಾವು ಕೂಡ ಮಾರುಕಟ್ಟೆಗೆ ಬಂದಿದೆ. ನಿರೀಕ್ಷೆಯಂತೆಯೇ ಈ ಬಾರಿ ಮಾವಿನ ಫಸಲು ಸಮೃದ್ಧವಾಗಿದೆ. ಮಂಜಿನ ದಾಳಿಗೆ ಸಿಲುಕಿ ರಾಜ್ಯದ ಕೆಲವೆಡೆ ಮಾವಿನ ಹೂ, ಹೀಚು ಉದುರಿತಾದರೂ ಲಾರಿಗಟ್ಟಲೆ ಹಣ್ಣು ಬೆಂಗಳೂರು ಅರಮನೆ ಮೈದಾನದಲ್ಲಿರುವ ಮಾವಿನ ಸಗಟು ಮಾರುಕಟ್ಟೆ ಪ್ರವೇಶಿಸಿದೆ.
ಒಂದು ಹದ ಮಳೆ ಬರುವ ಮೊದಲು ಮಾವು ತಿಂದರೆ, ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬುದು ಹಿರಿಯರ ಅನುಭವನದ ನುಡಿ. ರಾಜ್ಯದ ಅಲ್ಲಲ್ಲಿ ಕಾಣಿಸಿಕೊಂಡಿರುವ ಕರಳುಬೇನೆ, ಸಿಕ್ಕಾಪಟ್ಟೆ ಬಂದಿರುವ ಬೆಳೆಯಿಂದಾಗಿ ಮಾವಿನ ಬೆಲೆ ಕುಸಿದಿದೆ. ಬೆಲೆ ದುಬಾರಿಯಲ್ಲದ ಕಾರಣ ತಿನ್ನುವ ಬಾಯಿ ಸಿಹಿಯಾಗಿದೆಯಾದರೂ, ಮಾವು ಬೆಳೆದ ರೈತ ಕಂಗಾಲಾಗಿದ್ದಾನೆ. ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಮಾವಿನ ಜಾತ್ರೆ : ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರು ಅರಮನೆ ಮೈದಾನದಲ್ಲಿ ಮಾವಿನ ಸಗಟು ಮಾರುಕಟ್ಟೆಯಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿತು. ಶ್ರೀನಿವಾಸಪುರ, ಕೋಲಾರ, ತಮಿಳುನಾಡು, ಆಂಧ್ರಪ್ರದೇಶ, ಕುಣಿಗಲ್, ಮೈಸೂರು, ತುಮಕೂರು, ಮಂಡ್ಯ ಮತ್ತಿತರ ಭಾಗಗಳಿಂದ ರೈತರು ತಾವು ಬೆಳೆದ ಮಾವಿನ ಹಣ್ಣನ್ನು ಲಾರಿಗಳಲ್ಲಿ ತಂದರು. ಆದರೂ, ಚಿಲ್ಲರೆ ವ್ಯಾಪಾರಿಗಳು ಮಾವು ಕೊಂಡು ಜನರಿಗೆ ತಲುಪಿಸಲು ಹೆಚ್ಚು ಆಸಕ್ತರಾಗಿಲ್ಲ. ದಿಢೀರೆಂದು ಮಾರುಕಟ್ಟೆಗೆ ಬಂದ ಮಾವು ವ್ಯಾಪಾರಿಗಳನ್ನೂ ಕಂಗೆಡಿಸಿದೆ.
ಮಾವಿನ ಸಗಟು ಮಾರುಕಟ್ಟೆಯಲ್ಲಿ ಸಿಂಧೂರ, ಅಲ್ಫೋನ್ಸ್ , ರಸಪುರಿ, ತೋತಾಪುರಿ, ಮಲಗೋವ, ನೀಲಂ ಮೊದಲಾದ ತಳಿಗಳ ಮಾವು ಮೈಲಿದೂರದವರೆಗೆ ತಮ್ಮ ಪರಿಮಳ ಬೀರುತ್ತಿವೆ. ಕಳೆದ ವಾರದಿಂದಲೇ ಬೆಂಗಳೂರಿನ ಸಗಟು ಮಾರುಕಟ್ಟೆಗೆ ದಿನನಿತ್ಯ 25ರಿಂದ 30 ಲಾರಿಗಳಷ್ಟು ಮಾವಿನ ಹಣ್ಣುಗಳು ಬರುತ್ತಿದ್ದು, ಮುಂದಿನ ವಾರದಿಂದ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಹಣ್ಣೇನೋ ಬರುತ್ತಿದೆ. ಆದರೆ, ಬೇಡಿಕೆ ಮಾತ್ರ ಇಲ್ಲ.
ಕಳೆದ ಬಾರಿ ಮಾವಿನ ಬೆಳೆ ಕಡಿಮೆಯಾದ ಕಾರಣ ಟನ್‌ಗೆ 14ರಿಂದ 18 ಸಾವಿರದವರೆಗೂ ಮಾರಾಟವಾಗಿತ್ತು. ಈ ಬಾರಿ ಟನ್ ಮಾವಿನ ಬೆಲೆ 8ರಿಂದ 10 ಸಾವಿರಕ್ಕೆ ಕುಸಿದಿದೆ. ಅರಮನೆಯ ಆವರಣದಲ್ಲಿ ಕೆಂಪು, ಹಸಿರು, ಹಳದಿಯ ಮಾವಿನ ಹಣ್ಣಿನ ರಾಶಿ, ರಾಶಿ ಬಾಯಲ್ಲಿ ನೀರೂರಿಸುತ್ತಿದೆ. ನಗರದಲ್ಲಿ ಮಾವಿನ ಹಣ್ಣಿನ ಜಾತ್ರೆಯ ಸಂಭ್ರಮ ಮೂಡಿದೆ.
ಕುಸಿದ ಬೇಡಿಕೆ : ಪ್ರತಿವರ್ಷ ರಾಜ್ಯದ ಮಾವಿಗೆ ಗುಜರಾತ್, ರಾಜಸ್ಥಾನ್, ಮಹಾರಾಷ್ಟ್ರದಿಂದ ಬರುತ್ತಿದ್ದ ಅಪಾರ ಬೇಡಿಕೆಯೂ ಈ ಬಾರಿ ಕಡಿಮೆ ಆಗಿದೆ. ಮಾನಿನ ಕಾಯಿ ಉಪ್ಪಿನ ಕಾಯಿ, ಮಾವಿನ ಹಣ್ಣಿನ ರಸ ತಯಾರಿಸುವ ಉತ್ಪಾದಕರಿಂದಲೂ ಈ ಬಾರಿ ಹೆಚ್ಚಿನ ಬೇಡಿಕೆ ಇಲ್ಲ. ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಮಾವು ಈ ಬಾರಿ ತಿಂಗಳ ಮೊದಲೇ ಮಾರುಕಟ್ಟೆಗೆ ಬಂದಿರುವುದೇ ಬೇಡಿಕೆ ಕುಸಿತಕ್ಕೆ ಕಾರಣ, ಮುಂದಿನ ದಿನಗಳಲ್ಲಿ ಮಾವಿಗೆ ಭಾರಿ ಬೇಡಿಕೆ ಬರಲಿದೆ ಎನ್ನುತ್ತಾರೆ ಇಲ್ಲಿನ ವರ್ತಕರು.
ಸದ್ಯಕ್ಕಂತೂ ಮಾವು ಕೆ.ಜಿಗೆ 5ರುಪಾಯಿಯಿಂದ 20 ರುಪಾಯಿ ವರೆಗೂ ಮಾರಾಟವಾಗುತ್ತಿದೆ. ಸಿಂಧೂರ ಕೆ.ಜಿ.ಗೆ 6ರಿಂದ 9 ರುಪಾಯಿ, ರಸಪುರಿ 8ರಿಂದ 14 ರುಪಾಯಿ, ಅಲ್ಫೋನ್ಸ್ 16ರಿಂದ 20ಕ್ಕೆ ಮಾರಾಟವಾಗುತ್ತಿದೆ. ಕಳೆದ ಬಾರಿ ಅಲ್ಫೋನ್ಸ್ ಕೆ.ಜಿ.ಗೆ 40 ರುಪಾಯಿ ಇತ್ತು. ಅರಮನೆ ಆವರಣದಿಂದ ಮನೆ ಹತ್ತಿರದ ಅಂಗಡಿಗೆ ಬರುವ ಹೊತ್ತಿಗೆ ಮಾವಿನ ಬೆಲೆಯೂ ಕೊಂಚ ಏರುವುದು ಸಹಜ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications