ಭೂಕಂಪ ಸಂತ್ರಸ್ತರ ನೆರವಿಗೆ 200 ಕೋಟಿ ರು. ಒಪ್ಪಿಸಿದ ಕ್ಲಿಂಟನ್
ಅಂಜಾರ್ : ಅಮೆರಿಕ- ಭಾರತ ಪ್ರತಿಷ್ಠಾನ ಗುಜರಾತ್ ಭೂಕಂಪ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಸುಮಾರು 200 ಕೋಟಿ ರುಪಾಯಿ ನಿಧಿಯನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬುಧವಾರ ಗುಜರಾತ್ ಸರ್ಕಾರಕ್ಕೆ ಒಪ್ಪಿಸಿದರು.
ಭೂಕಂಪದಿಂದ ತೀವ್ರ ಘಾಸಿಗೊಂಡಿರುವ ಭುಜ್, ರತ್ನಾಲ್ ಹಾಗೂ ಅಂಜಾರ್ ಪ್ರದೇಶಗಳಿಗೆ ಭೇಟಿ ಕೊಟ್ಟ ಕ್ಲಿಂಟನ್, ಸಂತ್ರಸ್ತರ ನೋವಿನೊಂದಿಗೆ ಭಾಗಿಯಾದರು. ಅವರ ಬದುಕನ್ನು ಪುನರ್ ರೂಪಿಸುವ ಉದ್ದೇಶದಿಂದ ಶಿಕ್ಷಣ ಹಾಗೂ ಉದ್ಯೋಗಾವಾಕಾಶಗಳನ್ನುಳ್ಳ ಯೋಜನೆಯಾಂದನ್ನು ರೂಪಿಸುವುದಾಗಿ ಭರವಸೆ ನೀಡಿದ ಕ್ಲಿಂಟನ್, ಸರ್ಕಾರೇತರ ಸಂಘಟನೆಗಳೊಂದಿಗೆ ಸಂತ್ರಸ್ತರ ಪುನರ್ವಸತಿಗೆ ಸಮಗ್ರ ಯೋಜನೆ ರೂಪಿಸುವ ಬಗೆಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ದುರಂತದಲ್ಲಿ ಮಡಿದವರ ಗೌರವಾರ್ಥ ಕ್ಲಿಂಟನ್ ಒಂದು ನಿಮಿಷ ಕಾಲ ಮೌನ ಆಚರಿಸಿದರು. ಆವರೊಂದಿಗೆ 40 ಮಂದಿಯ ಅನಿವಾಸಿ ಭಾರತೀಯ ನಿಯೋಗವೂ ಆಗಮಿಸಿತ್ತು . ಗಣರಾಜ್ಯೋತ್ಸವ ದಿನದಂದು ಕವಾಯತು ನಡೆಸುತ್ತಿದ್ದ 300 ಮಕ್ಕಳು ಭೂಸಮಾಧಿಯಾದ ಸ್ಥಳಕ್ಕೆ ಭೇಟಿ ಕೊಟ್ಟ ಕ್ಲಿಂಟನ್, ಮಕ್ಕಳ ಸಮಾಧಿಗೆ ಗುಲಾಬಿ ಗುಚ್ಛವಿರಿಸಿ ನಮಿಸಿದರು.
ಕ್ಲಿಂಟನ್ ಅವರನ್ನು ನೋಡಲು ನೆರೆದಿದ್ದ ಕುತೂಹಲಿಗಳ ಸಂಖ್ಯೆ ಹೆಚ್ಚಾಗಿತ್ತು . ಒಂದು ಹಂತದಲ್ಲಿ ಜನರ ಕೂಗಾಟ ಹೆಚ್ಚಾದಾಗ, ಪೊಲೀಸರು ಬೆತ್ತ ಪ್ರಹಾರ ನಡೆಸಿದರು. ಕಾರಿನಲ್ಲಿ ಕೂತೇ ಜನರತ್ತ ಕೈ ಬೀಸಿದ ಅಮೆರಿಕಾದ ಮಾಜಿ ಅಧ್ಯಕ್ಷರು, ನಾನು ಮತ್ತೊಮ್ಮೆ ಭಾರತಕ್ಕೆ ಬರುವೆ. ಜೀವಿತಾವಧಿಯನ್ನು ಇಲ್ಲಿಯೇ ಕಳೆಯಲು ಬಯಸಿದ್ದೇನೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications