ಮೈಸೂರು : ಜಗಜೀವನರಾಂ ಜಯಂತಿಯಲ್ಲಿ ಘರ್ಷಣೆ, ಲಾಠಿ ಪ್ರಹಾರ
ಮೈಸೂರು : ಇಲ್ಲಿನ ಪುರಭವನದಲ್ಲಿ ನಡೆದ ಮಾಜಿ ಉಪಪ್ರಧಾನಿ ದಿವಂಗತ ಜಗಜೀವನ ರಾಮ್ ಅವರ 94ನೇ ಜಯಂತಿಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಹಾಗೂ ಹಿಂಸಾಚಾರ ತಡೆಯಲು ಪೊಲೀಸರು ಹಲವು ಬಾರಿ ಲಾಠಿ ಚಾರ್ಚ್ ಮಾಡಿದ ಘಟನೆ ಗುರುವಾರ ನಡೆದಿದೆ.
ಈ ಗುಂಪು ಘರ್ಷಣೆಯಲ್ಲಿ ಒಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಮೈನರ್ ಆಪರೇಷನ್ ಮಾಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಉಂಟಾದ ಕೂಗಾಟದಲ್ಲಿ ಸಿದ್ಧರಾಜು ಅವರ ವಿರುದ್ಧ ಘೋಷಣೆ ಕೂಗಿದ್ದೇ ಈ ಗೊಂದಲಕ್ಕೆ ಕಾರಣವಾಯಿತು. ಆಗಿ ಹೋದ ಪ್ರಮಾದಕ್ಕೆ ಪಾಲಿಕೆ ಅಧಿಕಾರಿ ಕ್ಷಮೆ ಕೋರಿದ ಬಳಿಕ ಕಾರ್ಯಕ್ರಮ ಜರುಗಿತು. ಘೋಷಣೆ ಕೂಗುತ್ತಿದ್ದವನ್ನು ಹೊರಗೆ ಹೋಗುವಂತೆ ಮತ್ತೊಂದು ಗುಂಪಿನವರು ಹೇಳಿದ್ದು ಘರ್ಷಣೆಗೆ ಇಂಬು ನೀಡಿತು. ಇದೇ ಸಂದರ್ಭದಲ್ಲಿ ವ್ಯಕ್ತಿಯಾಬ್ಬರಿಗೆ ಚಾಕುವಿನಿಂದ ಇರಿಯಲಾಯಿತು.
ಈ ಹಿನ್ನೆಲೆಯಲ್ಲಿ ಕೆಲವರು ಕಲ್ಲು ತೂರಾಟದಲ್ಲಿ ತೊಡಗಿ, ರಸ್ತೆ ಬಂದ್ ಮಾಡಿದರು. ಇದರಿಂದಾಗಿ ಸಂಚಾರ ಕೆಲ ಕಾಲ ಅಸ್ತವ್ಯಸ್ತವಾಗಿತ್ತು. ಕೆ.ಆರ್. ಆಸ್ಪತ್ರೆಯ ವಲಯದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಂತದಲ್ಲಿ ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಬೆತ್ತ ಪ್ರಹಾರ ಮಾಡಬೇಕಾಯಿತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಯು.ಎನ್.ಐ, ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications