ಮೆಕ್‌ಗ್ರಾತ್ ಮೊನಚಿನಿಂದ ಒಂದಿಷ್ಟು ಕಲಿಯೋದಿದೆ- ಶ್ರೀನಾಥ್
*ಸಂದರ್ಶನ : ರಾಮರಾಜ್
ಬೆಂಗಳೂರು : ಮುಂಬಯಿ ತಂಡದ ವಿರುದ್ಧ ಆಸ್ಟ್ರೇಲಿಯಾ ಮೂರು ದಿನಗಳ ಪಂದ್ಯ ಆಡುತ್ತಿರುವ ಸಂದರ್ಭದಲ್ಲೇ ಪ್ರಥಮ ಟೆಸ್ಟ್‌ಗೆ ಆಯ್ಕೆಯಾಗಿರುವ ಭಾರತ ತಂಡದ 14 ಕ್ರಿಕೆಟರುಗಳಿಗೆ ಶುಕ್ರವಾರದಿಂದ ನಾಲ್ಕು ದಿನಗಳಕಾಲ ತರಪೇತಿ. ನ್ಯೂಜಿಲೆಂಡಿನ ಜಾನ್ ರೈಟ್ ಕೈಗೆತ್ತಿಕೊಳ್ಳುತ್ತಿರುವ ಭಾರತದ ಮೊದಲ ಟೆಸ್ಟ್ ಜವಾಬ್ದಾರಿಯಿದು. ಮುಂಬಯಿಗೆ ಹಾರುವ ಮೊದಲು ಫೋನಿಗೆ ಸಿಕ್ಕ ಕರ್ನಾಟಕದ ವೇಗಿ ಶ್ರೀನಾಥ್ ಪಟಪಟನೆ ಕೆಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅವರ ಮಾತುಗಳು ನಿಮಗಾಗಿ...
ಸತತ 15 ಟೆಸ್ಟ್‌ಗಳನ್ನು ಗೆದ್ದಿರುವ ತಂಡದ ವಿರುದ್ಧ ನಾವು ಸೆಣೆಸಲಿದ್ದೇವೆ. ಅದೇನೂ ಸುಲಭದ ಮಾತಲ್ಲ. ಆಸ್ಟ್ರೇಲಿಯಾ ತಂಡದ ಧೋರಣೆಯಿಂದ ನಾವು ಕಲಿಯೋದು ಸಾಕಷ್ಟಿದೆ. ತಾಯ್ನೆಲದಲ್ಲಿ ನಮ್ಮ ರೆಕಾರ್ಡ್ ಗಮನಿಸಿದಲ್ಲಿ ನಾವೂ ಉತ್ತಮವಾಗಿಯೇ ಆಡಿದ್ದೇವೆ. ಒಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆಟ ಭಾರೀ ಟಂಗಾಟುಂಗಿಯಾಗಲಿದೆ.
ಭಾರತಕ್ಕೆ ಪ್ರವಾಸ ಬೆಳೆಸುವ ಮೊದಲೇ ಆಸ್ಟ್ರೇಲಿಯಾ, ಭಾರತದ ವಿರುದ್ಧ ಎತ್ತಿದ ಸೊಲ್ಲುಗಳಿಂದ ನಮ್ಮ ಮಾನಸಿಕ ಸ್ಥಿತಿಯೇನೂ ವಾಲಿಲ್ಲ. ಅವೆಲ್ಲಾ ಮಾಧ್ಯಮಗಳಿಗೆ ಬರೆಯಲು ವಸ್ತುಗಳಷ್ಟೇ. ನಮ್ಮ ಜವಾಬ್ದಾರಿಯ ಬಗೆಗೆ ಪೂರ್ಣ ಪ್ರಜ್ಞೆ ನಮಗಿದೆ.
ಮೆಕ್‌ಗ್ರಾತ್ ಬೌಲಿಂಗ್ ಕಡೆಗೇ ನನ್ನ ಗಮನ : ಆಸ್ಟ್ರೇಲಿಯಾದ ವೇಗಿ ಮೆಕ್‌ಗ್ರಾತ್ ಅವರಿಂದ ನಾನು ಕಲಿಯೋದು ಸಾಕಷ್ಟಿದೆ. ವೈಯಕ್ತಿಕವಾಗಿ ನಾನು ಅವರ ಬೌಲಿಂಗ್ ದಾಳಿಯನ್ನು ಗಂಭೀರವಾಗಿ ಪರಿಗಣಿಸಿ, ಅವರ ತಂತ್ರಗಳನ್ನು ಅಳವಡಿಸಿಕೊಳ್ಳಲೂ ಯತ್ನಿಸುವೆ. ಬೌಲಿಂಗ್ ಮೊನಚಾಗಬೇಕಾದರೆ ಒಳ್ಳೆ ಬೌಲರ್‌ಗಳಿಂದ ಕೆಲ ಅಂಶಗಳನ್ನು ಕೊಳ್ಳುವುದೂ ಬಹು ಮುಖ್ಯ.
ಹೊಸ ಸ್ಪಿನ್ನರ್‌ಗಳೂ ಪ್ರತಿಭಾವಂತರು : ಕುಂಬ್ಳೆ ಅನುಪಸ್ಥಿತಿ ಸಹಜವಾಗೇ ತಂಡಕ್ಕೆ ಒಂದು ಡ್ರಾಬ್ಯಾಕ್. ಆದರೂ ಯುವ ಸ್ಪಿನ್ನರ್‌ಗಳು ಉತ್ತಮವಾಗೇ ಬೌಲ್ ಮಾಡಬಲ್ಲರು. ಕುಂಬ್ಳೆ ಇಲ್ಲದ ಈ ಪರಿಸ್ಥಿತಿಯಲ್ಲಿ ಎಲ್ಲಾ ಬೌಲರ್‌ಗಳೂ ಜವಾಬ್ದಾರಿ ಹಂಚಿಕೊಳ್ಳಬೇಕು. ನಮ್ಮಲ್ಲಿ ಸ್ಪಿನ್ನರ್‌ಗಳು ಅನನುಭವಿಗಳಾಗಿದ್ದರೂ ಭರವಸೆಯ ಆಟಗಾರರಾಗಿದ್ದಾರೆ. ಪಂದ್ಯ ಗೆಲ್ಲಲು ಕೈಮೀರಿ ಯತ್ನಿಸುವರೆಂಬ ನೆಚ್ಚು ನನ್ನದು.
ಶ್ರೀನಾಥ್ ಹರೀಬರಿಯಲ್ಲಿದ್ದರು. ಹೊರಡುವ ತರಾತುರಿ. ಅವರಿಗೊಂದು ವಿಶ್ ಹೇಳಿ, ಭಾರತ ತಂಡ ಗೆಲ್ಲಲಿ ಎಂದು ಹಾರೈಸಿ ಫೋನ್ ಇಟ್ಟೆವು.
ರೈಟ್, ರಾಂಗ್ ಆಗಲೇ ಬಾರದು : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಭಾರತ ತಂಡಕ್ಕಷ್ಟೇ ಅಲ್ಲದೆ ವೈಯಕ್ತಿಕವಾಗಿ ತರಪೇತುದಾರ ಜಾನ್‌ರೈಟ್‌ಗೂ ಒಂದು ಸವಾಲು. ಯಾಕೆಂದರೆ, ಆಸ್ಟ್ರೇಲಿಯಾದ ಜೆಫ್ ಮಾರ್ಷ್ ಹಾಗೂ ಗ್ರೇಗ್ ಚಾಪೆಲ್ ಜೊತೆ ತುರುಸಿನ ಸ್ಪರ್ಧೆಯಲ್ಲಿ ಭಾರತದ ಕೋಚ್ ಆಗಿ ರೈಟ್ ಆಯ್ಕೆಯಾಗಿದ್ದರು. ಭಾರತ ಕ್ರಿಕೆಟ್ ಮಂಡಳಿ ಅವರ ಮೇಲಿಟ್ಟಿರುವ ನಂಬುಗೆಯನ್ನು ಫಲದಾಯಕ ಮಾಡಲೇಬೇಕು.
ಭಾರತದ ನೆಲದಲ್ಲಿ ಆಡುವುದೂ ಅಷ್ಟೇನೂ ಸುಲಭವಲ್ಲ ಎಂದು ಸಂದರ್ಶನಗಳಲ್ಲಿ ಹೇಳುತ್ತಿರುವ ಆಸ್ಟ್ರೇಲಿಯಾ ಆಟಗಾರರ ಮಾತು ಕೇಳಿದರೆ ಟೆಸ್ಟ್ ಕ್ರಿಕೆಟ್‌ನ ಅನಧಿಕೃತ ದೊರೆಗಳು ಎಂಬ ಹೆಸರು ಉಳಿಸಿಕೊಳ್ಳಲು ಹೆಣಗಬೇಕಾದೀತು.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications