ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವಿನ ಮರದ ತುಂಬಹೂವು-ಮಿಡಿಗಾಯಿ

By Oneindia Staff
|
Google Oneindia Kannada News

* ಮುಳಬಾಗಿಲು ರಮೇಶ

ಬೆಂಗಳೂರು : ಮಾವು ಹಣ್ಣುಗಳ ರಾಜ. ಚೈತ್ರ ಮಾಸ ಬಂದೊಡನೆಯೇ ಮಾರುಕಟ್ಟೆಗೆ ಬರುವ ಈ ಫಲ. ಋತುಗಳ ರಾಜ ವಸಂತನೊಂದಿಗೇ ಸ್ಫರ್ಧೆಗಳಿಯುವಷ್ಟು ಸಮರ್ಥ. ಮಾರು ದೂರಕ್ಕೇ ಹಬ್ಬುವ ಮಾವಿನ ಹಣ್ಣಿನ ಪರಿಮಳ ಅರಸಿಕನನ್ನೂ ತನ್ನತ್ತ ಆಕರ್ಷಿಸುತ್ತದೆ.

ಕಳೆದ ವರ್ಷ ಯುಗಾದಿ ಕಳೆದು 20 ದಿನವಾದರೂ ಮಾವು ಮಾರುಕಟ್ಟೆಗೆ ಬಂದಿರಲೇ ಇಲ್ಲ. ಹೋದ ವರ್ಷ ಮಾವಿನ ಪಸಲು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಮಾವಿನ ಹಣ್ಣಿನ ಕೊರತೆಯಿಂದಾಗಿ ಬೆಲೆಯೂ ದುಬಾರಿ ಆಯ್ತು. ಸವಿ ಮಾವು ಬೆಲೆ ಏರಿಕೆಯಿಂದ ಕಿಸಿಗೆ ಕಹಿಯಾಗಿಯೇ ಪರಿಣಮಿಸಿತ್ತು.

ಆದರೆ, ಈಬಾರಿಯ ಪರಿಸ್ಥಿತಿಯೇ ಬೇರೆ. ಚೈತ್ರ ಮಾಸಕ್ಕೆ ಮೊದಲೇ ಬುಟ್ಟಿಗಟ್ಟಲೆ ಮಾವು ಮಾರುಕಟ್ಟೆಗೆ ಬರುವ ಎಲ್ಲ ಲಕ್ಷಣಗಳೂ ಕಂಡು ಬಂದಿವೆ. ಮಾವಿನ ಮರದಲ್ಲಿ ಯಥೇಚ್ಛವಾಗಿ ಕಾಣಬಹುತ್ತಿರುವ ಹೂವು, ಹೀಚು ಈ ಭವಿಷ್ಯ ನುಡಿಯುತ್ತಿವೆ.

ಈ ಬಾರಿ ಕಳೆದ ಬಾರಿ ರಾಜ್ಯದ ಮಾರುಕಟ್ಟೆಗೆ ಬಂದಿದ್ದ ಮಾವಿನ ಹಣ್ಣಿನ ಪ್ರಮಾಣಕ್ಕಿಂತಲೂ ಬಹುತೇಕ ಮೂರು ಪಟ್ಟು ಹಣ್ಣುಗಳು ಬರುವ ನಿರೀಕ್ಷೆ ಇದೆ. ವಸಂತನ ಸ್ವಾಗತಿಸಲು ಮಾಮರದಿ ಕುಳಿತ ಕೋಗಿಲೆಗಳು ಕುಹು ಕುಹು ಎಂದು ಕೂಗಲು ಅಣಿಯಾಗುತ್ತಿವೆ.

ಕೋಲಾರ ಸುತ್ತಮುತ್ತಲ ಪ್ರದೇಶ, ಶ್ರೀನಿವಾಸಪುರ, ಕುಣಿಗಲ್‌, ಚನ್ನಪಟ್ಟಣ, ಮೈಸೂರು, ಮಂಡ್ಯ, ರಾಮನಗರ ನಮ್ಮ ರಾಜ್ಯದ ಮಾವಿನ ಕಣಜ. ಈ ಪ್ರದೇಶಗಳ ಮಾವಿನ ಮರಗಳಲ್ಲಿ ಈಗಾಗಲೇ ಮಾವಿನ ಪುಟ್ಟ ಪುಟ್ಟ ಕಾಯಿಗಳು ಕಾಣಿಸಿಕೊಂಡಿವೆ. ಕಳೆದ ವರ್ಷಕ್ಕಿಂತಲೂ ಮೂರು ಪಟ್ಟು ಫಸಲು ಈ ವೃಕ್ಷಗಳಿಂದ ಬರುವುದು ಖಚಿತ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು. ಇದರ ಜತೆಗೆ ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ನಗರಕ್ಕೆ ಮಾವಿನ ಮಹಾಪೂರವೇ ಹರಿದುಬರುತ್ತದೆ.

ಫಸಲು ಹೆಚ್ಚಾದ ಮೇಲೆ ಬೆಲೆ ಏರಲು ಸಾಧ್ಯವೇ? ಪೋಟಿ - ಪೈಪೋಟಿಯಲ್ಲಿ ಮಾವಿನ ಬೆಲೆ ಗಣನೀಯವಾಗಿ ಇಳಿಯುತ್ತದೆ ಎನ್ನುವುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ. ಕಳೆದ ಬಾರಿ ಕೆ.ಜಿ.ಗೆ 15ರಿಂದ 30 ರುಪಾಯಿಗಳವರೆಗೆ ಮಾರಾಟವಾದ ಮಾವಿನ ಬೆಲೆ ಈ ಬಾರಿ ಕೆ.ಜಿ.ಗೆ 10 ರುಪಾಯಿಗೆ ಇಳಿಯುವ ಸಾಧ್ಯತೆ ಇದೆ. 5 ರುಪಾಯಿಗೆ ಇಳಿದರೂ ಅಚ್ಚರಿ ಇಲ್ಲವಂತೆ. ಅಂದರೆ ತಿನ್ನುವವರಿಗೆ ಮಾವು ಸಿಹಿಯಾಗುವುದು ಖಂಡಿತ. ಆದರೆ, ಬಡಪಾಯಿ ಬೆಳೆಗಾರನಿಗೆ ಈ ಬಾರಿಯ ಮಾವು ಮತ್ತಷ್ಟು ಕಹಿಯಾಗುವ ಸಾಧ್ಯತೆಯೇ ಹೆಚ್ಚು.

ಮಾವಿನ ಹೂವು ಬಲು ನಾಜೂಕು, ಗಾಳಿ, ಮಳೆಗೆ ಇದು ತಡೆಯುವುದಿಲ್ಲ. ಆಲಿಕಲ್ಲು ಮಳೆ ಬಂದರಂತೂ ಮುಗಿದೇ ಹೋಯಿತು. ಹೂವು, ಹೀಚೆಲ್ಲಾ ಉದುರಿ ಮಾವಿನ ಫಸಲು ಕೈಕೊಡುವುದು ಖಂಡಿತ. ಹೀಗಾಗೇ ಕಳೆದ ಬಾರಿ ಭಾರಿ ನಷ್ಟ ಅನುಭವಿಸಿದ್ದ ರೈತನಿಗೆ ಈ ಬಾರಿ ಯಥೇಚ್ಛವಾಗಿ ಬಂದಿರುವ ಬೆಳೆಯೂ ತಲೆ ತಿನ್ನುತ್ತಿದೆ. ತಾನು ಬೆಳೆದ ಬೆಳೆಯನ್ನು 6ಕ್ಕೆ ಮೂರರಂತೆ ಮಾರಲು ಯಾರಿಗೆ ತಾನೇ ಮನಸ್ಸು ಬರಲು ಸಾಧ್ಯ ಹೇಳಿ.

ಈಗ ಕೆಲವು ರೈತರು ತಮ್ಮ ಮಾವಿನ ಫಸಲನ್ನು ರಭಸವಾದ ಗಾಳಿ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ತೆಳುವಾದ ಸೊಳ್ಳೆ ಪರದೆಯಂತಹ ಬಲೆಯನ್ನು ಬಳಸುತ್ತಿದ್ದಾರೆ. ಈ ವಿಧಾನದಿಂದ ಹಣ್ಣೇನೋ ಉಳಿದಿದೆ. ಆದರೆ, ಹಣ ? (ಬೆಲೆ) ಬರಬೇಕಲ್ಲ.

ಒಂದು ಅಂದಾಜಿನ ರೀತ್ಯ ಕರ್ನಾಟಕದಲ್ಲಿ ಸುಮಾರು 15 ಲಕ್ಷ ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. 15ಲಕ್ಷ ಎಕರೆಯಲ್ಲಿರುವ ಮಾವಿನ ಮರಗಳಿಂದ ಪ್ರತಿವರ್ಷ ಸರಾಸರಿ 18ಲಕ್ಷ ಟನ್‌ಗಳಿಗೂ ಹೆಚ್ಚು ಮಾವು ಉತ್ಪತ್ತಿಯಾಗುತ್ತದೆ. ಆದರೆ, ಬೇಡಿಕೆ ಇರುವುದು ಕೇವಲ 8ರಿಂದ 10 ಲಕ್ಷ ಟನ್‌ ಮಾತ್ರ.

ಪ್ರಕೃತಿ ಮುನಿಸಿಕೊಳ್ಳದಿದ್ದರೆ, ಈ ಬಾರಿ ಮಾವಿನ ಉತ್ಪತ್ತಿ 25 ಲಕ್ಷ ಟನ್‌ ದಾಟಿದರೂ ದಾಟಬಹುದು ಎನ್ನುತ್ತಾರೆ ತಜ್ಞರು. ಇದು ನಿಜವೇ ಆದರೆ, ಮಾವಿಗೆ ಬೇಡಿಕೆ ಇಲ್ಲದೆ ರೈತ ಮತ್ತೊಮ್ಮೆ ಕಂಗಾಲಾಗುವುದು ಖಂಡಿತ. ಸಿಂಧೂರ, ಆಲ್‌ಫೋನ್ಸ್‌, ಚಂಪಕ, ರಸಪುರಿ, ತೋತಾಪುರಿ, ಮಲಗೋಬಾ, ಬಾದಾಮಿ, ನೀಲಂ ಎಂಬಿತ್ಯಾದಿ ತಳಿಗಳ ಮಾವು ಮಾರುಕಟ್ಟೆಗೆ ಬರಲು ಉಳಿದಿರುವುದು ಇನ್ನು ಕೆಲವೇ ತಿಂಗಳುಗಳು ಮಾತ್ರ.

ಸಮೃದ್ಧವಾಗಿ ಈ ವರ್ಷ ಚೈತ್ರಕ್ಕೆ ಮೊದಲೇ ಬರುವ ಭಾರಿ ಫಸಲನ್ನು ಸಂರಕ್ಷಿಸುವಷ್ಟು ಶೈತ್ಯಾಗಾರಗಳು, ಮಾರುಕಟ್ಟೆ ಜಾಲ ಇಲ್ಲದ ಕಾರಣ ರೈತನ ಪಾಡು ಏನಾಗುತ್ತದೆ ಎನ್ನುವುದೇ ಈಗಿನ ಪ್ರಶ್ನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X