ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರೈತರ ಜೀವ ಹಿಂಡುವ ಕೇಂದ್ರ ಸರ್ಕಾರವೇ, ಇಲ್ಲಿ ಕೇಳು...’

By Oneindia Staff
|
Google Oneindia Kannada News

ಬೆಂಗಳೂರು : ವಿವಾದಾತ್ಮಕ ಕೃಷಿ ನೀತಿಗಳನ್ನು ಜಾರಿಗೆ ತಂದು ರೈತರ ಜೀವಗಳಿಗೇ ಸಂಚಕಾರ ತರುತ್ತಿರುವ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಶುಕ್ರವಾರ ತರಾಟೆಗೆ ತೆಗೆದುತೊಂಡಿದ್ದಾರೆ.

ಲಾರ್ಡ್‌ಗಳ ಯೋಚನೆಯೇ ಬೇರೆ : ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ 77ನೇ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೆಹಲಿಯ ಕೃಷಿ ಭವನದಲ್ಲಿ ಕೂತ ಲಾರ್ಡ್‌ಗಳ ಯೋಚನೆಯೇ ಬೇರೆ, ನಮ್ಮ ಯೋಚನೆಯೇ ಬೇರೆ. ರೈತರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ರಾಜ್ಯ ಸರ್ಕಾರಗಳಿಗೆ ಸಾಧ್ಯ. ಅಂಥಾದರಲ್ಲಿ ರಾಜ್ಯ ಸರ್ಕಾರಗಳ ಶಿಫಾರಸುಗಳು ಕೇಂದ್ರ ಸರ್ಕಾರಕ್ಕೆ ವರ್ಜ್ಯ. ಟೊಮೆಟೋ, ತೊಗರಿ, ಭತ್ತ, ಜೋಳ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಭೂಮಿಗೆ ಚೆಲ್ಲಿದ ಕಾಸಿಗಿಂತ ಎರಡು ಕಾಸಿನ ಲಾಭವಾದರೂ ರೈತನಿಗೆ ಸಿಗದಿದ್ದರೆ ಹೇಗೆ ಎಂದು ಕೃಷ್ಣ ಪ್ರಶ್ನಿಸಿದರು.

ವಿದೇಶಗಳಿಂದ ಕೃಷಿ ಸರಕುಗಳು ಬಂದು ಗೋದಾಮು ಸೇರುತ್ತಿವೆ. ನಮ್ಮ ರೈತರ ಬೆಳೆಗೆ ಚರಂಡಿಯಲ್ಲೂ ಜಾಗವಿಲ್ಲ ಎಂಬಂತಾಗಿದೆ. ಸಾಮಾನ್ಯ ರೈತನಿಗೆ ವಿಶ್ವ ವಾಣಿಜ್ಯ ಒಪ್ಪಂದಗಳ ತಲೆ-ಬುಡ ಗೊತ್ತಿಲ್ಲ. ಅಷ್ಟೇಕೆ, ರಾಜ್ಯ ಸರ್ಕಾರಗಳಿಗೇ ಡಬ್ಲ್ಯುಟಿಓ ಒಪ್ಪಂದದ ಸ್ವರೂಪ ಸರಿಯಾಗಿ ಗೊತ್ತಿಲ್ಲ. ಬೆಳೆಯುವುದಕ್ಕಾಗಿ ಸಾಲ ಮಾಡಿ, ತೀರಿಸಲಾಗದ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳ್ತುತಿದ್ದಾರೆ. ಇದು ಹೀಗೇ ಮುಂದುವರೆದರೆ ಇನ್ನು ಏಳೆಂಟು ವರ್ಷಗಳಲ್ಲಿ ಕೃಷಿ ಕ್ಷೇತ್ರ ಅಧೋಗತಿಯ ಪರಮಾವಧಿ ಮುಟ್ಟುತ್ತದಷ್ಟೆ ಎಂದರು.

ಬ್ಯಾಂಕ್‌ ಬಡ್ಡಿದರ ಇಳಿಸಿ, ರೈತರ ಉಳಿಸಿ : ಬ್ಯಾಂಕುಗಳ ಬಡ್ಡಿ ದರವನ್ನು ಇನ್ನಷ್ಟು ಕಡಿಮೆ ಮಾಡಿ, ರೈತರಿಗೆ ಹೊಸ ಹೊಸ ಯೋಜನೆಗಳನ್ನು ಶುರುಮಾಡಬೇಕು. ಅವರು ಮರುಪಾವತಿ ಮಾಡಲು ಒದ್ದಾಡುತ್ತಿರುವ ಸಾಲಗಳನ್ನು ತೀರಿಸಲು ಕೇಂದ್ರ ಸರ್ಕಾರ ತಕ್ಕ ಕ್ರಮ ಕೈಗೊಳ್ಳಬೇಕು. ಕುಸಿದಿರುವ ಬೆಂಬಲ ಬೆಲೆಗೆ ಸೂಕ್ತ ಪರಿಹಾರ ಸೂಚಿಸಿ, ಜಾಗತಿಕ ಮಾರುಕಟ್ಟೆ ತಂದಿತ್ತಿರುವ ಭೂತಾಕಾರದ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ಮುಖ್ಯಮಂತ್ರಿ ಕೃಷ್ಣ ಸಲಹೆ ಮಾಡಿದರು.

ಡಬ್ಲ್ಯುಟಿಓ ಒಪ್ಪಂದ ಬೇಕು : ಡಬ್ಲ್ಯುಟಿಓ ಒಪ್ಪಂದಗಳಿಂದ ಭಾರತ ಹೊರಬರುವುದನ್ನು ನಾನು ವಿರೋಧಿಸುತ್ತೇನೆ. ಜಾಗತೀಕರಣದ ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಡಬ್ಲ್ಯುಟಿಓ ಒಡಂಬಡಿಕೆ ಅಗತ್ಯ ಆದರೆ ಆ ಒಪ್ಪಂದದ ಸ್ವರೂಪ ಹೇಗೆ ? ವಾಸ್ತವದಲ್ಲಿ ನಮ್ಮ ರೈತರ ಮೂಲಭೂತ ಸಮಸ್ಯೆಗಳೇನು ಎಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದ ಮಾಡಿಕೊಳ್ಳುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ಬ್ಯಾಂಕುಗಳು ಎಷ್ಟು ಸಾಲ ಕೊಟ್ಟಿವೆ ? : ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಸಿಂಡಿಕೇಟ್‌ ಬ್ಯಾಂಕ್‌ನ ಅಧ್ಯಕ್ಷ ಮತ್ತು ರಾಜ್ಯ ಬ್ಯಾಂಕರ್‌ಗಳ ಒಕ್ಕೂಟದ ವಕ್ತಾರ ಡಿ.ಟಿ.ಪೈ, ರೈತರು, ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತಿತರ ಕಡೆಗಳಿಂದ ಬ್ಯಾಂಕಿಗೆ ಪ್ರತಿಶತ 33ರಿಂದ 39ರಷ್ಟು ಸಾಲ ಬಾಕಿ ಬರಬೇಕಿದೆ. ಉತ್ತರ ಪ್ರದೇಶ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಸಾಲದ ಕಟ್ಟದವರು ತುಂಬಾ ಹೆಚ್ಚು. ಸಾಲದ ಮೊತ್ತವನ್ನು ಭರಿಸಲು ಕೇಂದ್ರ ಸರ್ಕಾರ ಕ್ಷಿಪ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಮೂವತ್ತು ವರ್ಷಗಳ ಹಿಂದೆ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿದ್ದವರ ಸಂಖ್ಯೆ ಶೇ.54ರಷ್ಟಿತ್ತು. ಬ್ಯಾಂಕುಗಳ ವಿವಿಧಯೋಜನೆಗಳಡಿ ಸಾಲ ಪಡೆದುಕೊಂಡ ಜನ ಸಾಕಷ್ಟು ಮೇಲೆ ಬಂದಿದ್ದು, ಈಗ ಕೇವಲ ಶೇ.35ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಎರಡೂವರೆ ಲಕ್ಷ ಕುಟುಂಬಗಳಿಗೆ 1200 ಕೋಟಿ ರುಪಾಯಿಯಷ್ಟು ಸಾಲ ನೀಡಲಾಗಿದೆ. ಪ್ರಧಾನಿಮಂತ್ರಿ ರೋಜ್‌ಗಾರ್‌ ಯೋಜನೆಯಡಿ 1 ಲಕ್ಷದ 10 ಸಾವಿರ ಯುವಕರಿಗೆ 650 ಕೋಟಿ ರುಪಾಯಿಗಳಷ್ಟು ಸಾಲ ನೀಡಲಾಗಿದೆ ಎಂದು ಪೈ ವಿವರಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X