ಚುಕ್ಕಿ ರಾಜ್ಯದ ರಾಜ ಯಾರಂತ ಹೇಳ್ತೀರಾ
ಟೀವಿ ಸ್ವಿಚ್ ಹಾಕಿದರೆ, ರೇಡಿಯೋ ಆನ್ ಮಾಡಿದರೆ... ಶಿವ ಭಕ್ತಿಯ ತರಂಗಗಳು. ಸುಮ್ಮನೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಗುಡಿಯಾಂದರಿಂದ ಕೇಳುವ ಗಂಟೆಯ ಗುಂ ಗುಂ ಅಲೆ.... ಆ ಸದ್ದು ಇಳಿಯುತ್ತಲೇ ಮುಂದಿನ ಶಿವಾಲಯದಿಂದ ಕೇಳಿ ಬರುವ ಲಿಂಗಾಷ್ಟಕ... ವೈಷ್ಣವ, ಶೈವರೆಂಬ ಭೇದವಿಲ್ಲದ ಮಹಾಶಿವರಾತ್ರಿ ಸಾಗಿದೆ.
ಇದು ಜರತಾರಿ ಸೀರೆ ಉಟ್ಟು ಸರಬರ ಸದ್ದು ಮಾಡುವ ಹಬ್ಬ ಅಲ್ಲ. ತಲೆಗೆ ನೀರೆರೆದುಕೊಂಡು ಉಪವಾಸ ಇರುವ ಸರಳ ಹಬ್ಬ. ಅದೇ ನೋಡಿ, ಬಡವರ ದೇವರು ಎಂಬ ಕೀರ್ತಿ ಹೊತ್ತ ಶಿವನ ಹಬ್ಬಕ್ಕೆ ಖರ್ಚಿಲ್ಲ. ಮತ್ತೆ ನಿಮ್ಮ ಭಕ್ತಿಗನುಸಾರವಾಗಿ ಕ್ಷೀರಾಭಿಷೇಕ, ಎಳೆನೀರ ಅಭಿಷೇಕ... ಯಥಾನುಶಕ್ತಿ.
ಇದೆಲ್ಲದರಿಂದಾಚೆಗೆ ಹವೆಯಲ್ಲಿ ಏರು ಪೇರಿನ ಸುದ್ದಿ ಇಲ್ಲ . ಕರಾವಳಿಯಲ್ಲಿ ಹರಿವ ಬೆವರು, ಉತ್ತರ ಕರ್ನಾಟಕದಲ್ಲಿ ಒಣಗಿ ಬಿರುಕು ಬಿಡುವ ಮೈ, ಬೆಂಗಳೂರಿನಲ್ಲಿ ಪ್ರತಿದಿನ ಸ್ವಿಚ್ ಆನ್ ಆಗಿಯೇ ಇರುವ ಫ್ಯಾನ್.
ರಾತ್ರಿಯೆಲ್ಲ ಜಾಗರಣೆಯಿದ್ದರೆ ಬೆಳಿಗ್ಗೆ ಹೊತ್ತಿಗೆ ಗೀರು ಚಂದ್ರ ಕಂಡಾನು. ಟೇರೇಸಿನ ಮೇಲೆ ಹೋದರೆ, ಅಂಗಳದಲ್ಲಿ ನಿದ್ದೆ ಕಳೆಯಲೆಂದು ಅಡ್ಡಾಡುತ್ತಿದ್ದರೆ ಚುಕ್ಕಿಗಳ ರಾಜ್ಯದಲ್ಲಿ ರಾಜನಾರೆಂದು ಹುಡುಕುತ್ತೀರಾ ?












Click it and Unblock the Notifications