ಜಿಲ್ಲಾ ಪತ್ರಿಕೆಗಳಿಗೆ ಜೀವ : ರಾಜ್ಯಾದ್ಯಂತ 5 ನ್ಯೂಸ್ ಬೂತ್
ಗುಲ್ಬರ್ಗಾ : ಜಿಲ್ಲಾ ಪತ್ರಿಕೆಗಳಿಗೆ ಸುದ್ದಿ ಪೂರೈಸುವ ಸಲುವಾಗಿ ರಾಜ್ಯದ 5 ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ (ನ್ಯೂಸ್ ಬೂತ್) ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪತ್ರಕರ್ತರ ಸಮ್ಮೇಳನದಲ್ಲಿ ಅವರು ಉದ್ಘಾಟನಾ ಭಾಷಣ ಮಾಡುತ್ತಿದ್ದರು. ಒಂದೊಂದು ಮಾಹಿತಿ ಕೇಂದ್ರಕ್ಕೂ 3 ಲಕ್ಷ ರುಪಾಯಿ ಖರ್ಚಾಗಲಿದೆ. ಸಣ್ಣ ಪ್ರಮಾಣದ ಜಿಲ್ಲಾ ಪತ್ರಿಕೆಗಳು, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ವರ್ಗ ಮತ್ತು ಪಂಗಡದ ಮಂದಿ ನಡೆಸುತ್ತಿರುವ ಪತ್ರಿಕೆಗಳಿಗೆ ಸುದ್ದಿ ಪೂರೈಸುವುದು ಬೂತ್‌ಗಳ ಸ್ಥಾಪನೆಯ ಮುಖ್ಯ ಉದ್ದಿಶ್ಯ ಎಂದು ಸಚಿವರು ಹೇಳಿದರು.
ವಿಶೇಷ ಯೋಜನೆ ಜಾರಿಗೆ ತರಲಿ : ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ನೀಡುವ ಸಬ್ಸಿಡಿ ಹಾಗೂ ಮೂಲ ಸೌಲಭ್ಯಗಳ ನೆರವನ್ನು ಪತ್ರಿಕೋದ್ಯಮಕ್ಕೂ ನೀಡಬೇಕು. ಈ ನಿಟ್ಟಿನಲ್ಲಿ ಪತ್ರಿಕೆಗಳನ್ನು ಮೇಲೆತ್ತಲು ವಾರ್ತಾ ಇಲಾಖೆ ಒಂದು ವಿಶೇಷ ಯೋಜನೆಯನ್ನು ಜಾರಿಗೆ ತರಬೇಕು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟರು.
ಇದೇ ಸಂದರ್ಭದಲ್ಲಿ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯ ಕುರಿತ ವಿಚಾರ ಸಂಕಿರಣವೂ ನಡೆಯಿತು. ಜಿಲ್ಲಾ ಮಟ್ಟದ ಪತ್ರಿಕೆಗಳ ಪ್ರತಿನಿಧಿಗಳು ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)












Click it and Unblock the Notifications