ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಬಂತು ರೋಡಿಗೆ, ಹೊಟೇಲಿಗೆ, ಐಸ್‌ಕ್ರೀಂ ಪಾರ್ಲರ್‌ಗೆ

By Staff
|
Google Oneindia Kannada News

* ಚ. ಹ. ರಘುನಾಥ

ಬೆಂಗಳೂರು : ಶ್ರಾವಣ ಬಂತು ನಾಡಿಗೆ, ಬೀಡಿಗೆ, ಕಾಡಿಗೆ ಎನ್ನುವ ಬೇಂದ್ರೆ ಗೀತೆಯೀಗ ಹಳತು. ಈಗೇನಿದ್ದರೂ ಪ್ರೀತಿ ಬಂತು ರೋಡಿಗೆ, ಹೊಟೇಲಿಗೆ, ಐಸ್‌ಕ್ರೀಂ ಪಾರ್ಲರ್‌ಗೆ ಹಾಗೂ ಥಿಯೇಟರ್‌ಗೆ ಎಂದು ಹಾಡುವ ಕಾಲ. ಬುಧವಾರ ನಗರದಲ್ಲಿ ವ್ಯಾಪಕವಾಗಿದ್ದ ದೃಶ್ಯ ಇದೇನೆ.

ಯಾರೆ ಕೂಗಾಡಲಿ, ನಮ್ಮ ಪ್ರೀತಿಗೆ ಭಂಗವಿಲ್ಲ ಎನ್ನುವ ಪ್ರೇಮಿಗಳು ವಿಜೃಂಭಣೆ ನಗರದಲ್ಲಿ ಎದ್ದು ಕಾಣುತ್ತಿತ್ತು . ನಿತ್ಯ ಗಿಜಿಗಿಡುವ ಲಾಲ್‌ಬಾಗ್‌, ಕಬ್ಬನ್‌ ಉದ್ಯಾನಗಳಲ್ಲಿ ಬೆಳಿಗ್ಗಿನಿಂದ ಜೋಡಿಗಳ ಜಾತ್ರೆ. ಹೊಟೇಲ್‌ಗಳಲ್ಲಂತೂ ಪ್ರೇಮಿಗಳದೇ ಬಣ್ಣ . ಸಂದರ್ಭಕ್ಕೆ ತಕ್ಕಂತೆ ಪ್ರೇಮಿಗಳ ಬರವಿಗಾಗಿ ಹೊಟೇಲ್‌ಗಳು ಏಕಾಏಕಿ ಬೆಲೆಯನ್ನು ಹೆಚ್ಚಿಸಿದ್ದೂ ಉಂಟು. ಆದರೆ, ಪ್ರೇಮಕ್ಕೆಷ್ಟು ಕಿಮ್ಮತ್ತು . ನೂರಾರು ರುಪಾಯಿ ಸುರಿದು ಗ್ರೀಟಿಂಗ್‌ ಕಾರ್ಡ್‌ ಕೊಂಡವರು, ಅಮೃತ ಕ್ಷಣಗಳಿಗೆ ತೆರುವ ಶುಲ್ಕಕ್ಕೆ ಹಿಂಜರಿಯಲು ಪ್ರೇಮಿಗಳೇನು ಜುಗ್ಗರೇ! ಎಲ್ಲಾ ಪ್ರಮುಖ ಹೊಟೇಲ್‌ಗಳೂ ತುಂಬಿ ತುಳುಕಿದ್ದವು.

ಸಿನಿಮಾ ಮಂದಿರಗಳಲ್ಲೂ ಯುವ ಜೋಡಿಗಳದ್ದೇ ಮೆಜಾರಿಟಿ. ಕಾಲೇಜುಗಳಿಗಳಲ್ಲಂತೂ ಹೊಸಕಳೆ, ರೋಮಾಂಚನದ ಹೊಳೆ. ಈ ನಡುವೆ, ಗುಲಾಬಿಯನ್ನು ಗೆಳತಿ ಮೂಸಿಯೂ ನೋಡಲಿಲ್ಲ ಎನ್ನುವ ಕೊರಗಿನಿಂದ ಮೋರೆ ಬಾಡಿಸಿಕೊಂಡವರ ಸಂಖ್ಯೆಗೇನೂ ಕೊರತೆಯಿರಲಿಲ್ಲ . ಆದರೆ, ಪ್ರೇಮ ನಿವೇದನೆಯ ಸಾಫಲ್ಯ ಕಂಡವರ ಖುಷಿಯೆದುರು ಅವರ ಕೊರಗು ಅಷ್ಟೇನೂ ಎದ್ದು ಕಾಣುವಂತಿರಲಿಲ್ಲ .

ರಾಜ್ಯದ ಇತರ ಭಾಗಗಳಿಂದ ನಮ್ಮ ಬಾತ್ಮೀದಾರರು ಕಳುಹಿಸಿರುವ ವರದಿಗಳ ಪ್ರಕಾರ- ಮಂಗಳೂರು, ಮೈಸೂರುಗಳಲ್ಲೂ ಪ್ರೇಮಿಗಳ ಉತ್ಸಾಹ ಬೆಂಗಳೂರಿನಲ್ಲಿದ್ದಂತೆಯೇ ಇತ್ತು . ಉಳಿದಂತೆ ಇತರ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವ್ಯಾಲೆಂಟೈನ್ಸ್‌ ಡೇಗೆ ಸ್ವಲ್ಪ ಮಟ್ಟಿಗೆ ಮಾತ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು . ಗ್ರಾಮೀಣ ಪ್ರದೇಶಗಳಲ್ಲಂತೂ ಪ್ರೇಮಿಗಳ ದಿನದ ಸೊಲ್ಲೇ ಇರಲಿಲ್ಲ . ಕೇವಲ ಹೃದಯಗಳು ಒಂದಾಗಿದ್ದವು, ಅಷ್ಟೆ !

ದೆಹಲಿಯಲ್ಲಿ ಪ್ರತಿಭಟನೆ, ಶಿವಸೈನಿಕರಿಂದ ಅಂಗಡಿಗಳ ಮೇಲೆ ದಾಳಿ

ವ್ಯಾಲೆಂಟೈನ್ಸ್‌ ಡೇ ಭಾರತೀಯ ಸಂಸ್ಕೃತಿಗೆ ಹೊಂದುವಂಥದ್ದಲ್ಲ ಎಂದು ಮಹಾರಾಷ್ಟ್ರ ಹಾಗೂ ದೆಹಲಿಗಳಲ್ಲಿ ಶಿವ ಸೈನಿಕರು ಪ್ರತಿಭಟನೆ ನಡೆಸಿದರು. ಅನೇಕ ಅಮರ ಪ್ರೇಮಿಗಳಿಗೆ ಜನ್ಮ ಕೊಟ್ಟ ಭಾರತ, ವಿದೇಶಿಯರಿಂದ ಪ್ರೇಮದ ಪಾಠ ಕಲಿಯಬೇಕಿಲ್ಲ ಎಂದು ಶಿವಸೇನೆ ಮುಂದಾಳು ಬಾಳಾಠಾಕ್ರೆ ಗುಡುಗಿದ್ದಾರೆ.

ವ್ಯಾಲೆಂಟೈನ್ಸ್‌ ಡೇ ಕಾರ್ಡ್‌ಗಳನ್ನು ಮಾರುವ ಅಂಗಡಿಗಳ ಮೇಲೆ ದೆಹಲಿಯಲ್ಲಿ ದಾಳಿ ನಡೆಸಿರುವ ಶಿವಸೈನಿಕರು, ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಕೆಲವು ಅಂಗಡಿಗಳಿಂದ ಕಾರ್ಡ್‌ಗಳನ್ನು ರಸ್ತೆಗೆ ತಂದು ಹಾಳು ಮಾಡಲಾಗಿದೆ.

ಗುಜರಾತ್‌ : ಇಲ್ಲಿ ಹೃದಯಗಳೇ ಕಳೆದುಹೋಗಿವೆ

ಭೂಕಂಪದ ತೀವ್ರತೆಯಿಂದಾಗಿ ತತ್ತರಿಸಿರುವ ಗುಜರಾತ್‌ನಲ್ಲಿ ಪ್ರೇಮಿಗಳ ದಿನದ ಸಂಭ್ರಮಕ್ಕೆ ಕಾರಣವೇ ಇರಲಿಲ್ಲ . ಬಂಧು ಮಿತ್ರರನ್ನು ಕಳಕೊಂಡ ಸೂತಕದ ಕಳೆಯೇ ಎಲ್ಲೆಡೆ ವ್ಯಾಪಕವಾಗಿರುವಾಗ, ಪ್ರೇಮಿಸುವ ತಾಣಗಳಾವೂ ಅಲ್ಲಿ ಕಾಣಿಸುತ್ತಿಲ್ಲ .

ರಾಜಧಾನಿ ನಗರ ಅಹಮದಾಬಾದ್‌ನ ಕಾಲೇಜುಗಳಲ್ಲೂ ಪ್ರೇಮಿಗಳ ದಿನದ ಸಂಭ್ರಮ ಸಂಪೂರ್ಣ ಮರೆಯಾಗಿತ್ತು . ಹೃದಯದ ತುಂಬಾ ಗೆಳೆಯರನ್ನು ಕಳಕೊಂಡ ದುಃಖವೇ ತುಂಬಿಕೊಂಡಿರುವ ಪ್ರೀತಿಗೆಲ್ಲಿ ಜಾಗ ಅನ್ನುವುದು ಪ್ರೇಮಿಗಳ ಪ್ರಶ್ನೆ . ಕಾರ್ಡ್‌ಗಳ ವ್ಯಾಪಾರವೂ ಕಂಡಾಪಟ್ಟೆ ಕುಸಿದಿದೆ, ಕಾರ್ಡ್‌ಗಳಿಗೆ ಧೂಳು ಹತ್ತುತ್ತಿದೆ ಎನ್ನುವುದು ವ್ಯಾಪಾರಸ್ಥರ ಅಳಲು. ಅತ್ತ ಪ್ರೆೃಮ್‌ ಮಾರ್ಕೆಟ್‌ ಪ್ರದೇಶದಲ್ಲಿ ಯಾವುದೇ ಕೆಂಪು ಗುಲಾಬಿಯೂ ಅರಳಿರುವುದು ಕಾಣುತ್ತಿಲ್ಲ .

ಗುಜರಾತ್‌ ಹೊರತು ಪಡಿಸಿದರೆ, ದೇಶಾದ್ಯಂತ ಪ್ರಮುಖ ಪಟ್ಟಣಗಳಲ್ಲಿ ಪ್ರೇಮಿಗಳ ದಿನಕ್ಕೆ ವ್ಯಾಪಕ ಉತ್ಸಾಹ ವ್ಯಕ್ತವಾಗಿದೆ. ಭೂಕಂಪ ದುರಂತದ ಹಿನ್ನೆಲೆಯಲ್ಲಿ ಈ ಸಲ ಪ್ರೇಮಿಗಳ ದಿನಾಚರಣೆ ಕೈ ಬಿಡಿ, ಆ ಹಣವನ್ನು ಸಂತ್ರಸ್ತರ ನೆರವಿಗೆ ಕಳುಹಿಸಿ ಎನ್ನುವ ರೆಡ್‌ ಕ್ರೆಸೆಂಟ್‌ ಸೊಸೈಟಿಯ ಮನವಿಗೆ ಯಾರೂ ಓಗೊಟ್ಟಂತಿಲ್ಲ .

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X