• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಕ್ತಿ ಮಂಟಪಕ್ಕೆ ಕಾಯಕವೇ ಸೋಪಾನ

By ಟಿ. ಎಂ. ಸತೀಶ್‌
|

ತುಮಕೂರು ಸಮೀಪದ ಸಿದ್ಧಗಂಗೆ ಒಂದು ಮಠವೇ? ಪುಣ್ಯಕ್ಷೇತ್ರವೇ? ಬೆಟ್ಟವೇ? ಸಿದ್ಧಪುರುಷರ ನೆಲೆವೀಡೇ? ಸಾಮಾನ್ಯವಾಗಿ ಇದನ್ನು ಸಿದ್ದಗಂಗೇ ಬೆಟ್ಟ ಎಂದು ಒಂದೇ ಪದದಲ್ಲಿ ವರ್ಣಿಸುತ್ತಾರೆ, ಭಕ್ತರು. ಈ ಎಲ್ಲವನ್ನೂ ಮೇಳೈಸಿಕೊಂಡು, ಪರಿಪೂರ್ಣ ಸ್ತರದಲ್ಲಿ ಸರ್ವರಿಗೂ ಲೇಸು ಬಯಸುವ ಪುಣ್ಯ ತಾಣ.

ಅನ್ನದಾಸೋಹ, ಜ್ಞಾನ ದಾಸೋಹಗಳಿಂದ ಸಿದ್ಧಗಂಗೆಯ ಕೀರ್ತಿ ಇಂದು ಉತ್ತುಂಗಕ್ಕೆ ಏರಿದೆ. ಈ ಕೀರ್ತಿ ಕಳಶದ ರೂವಾರಿ ಡಾ. ಶಿವಕುಮಾರ ಸ್ವಾಮಿಗಳು. ಶ್ರೀಗಳ ರಾಷ್ಟ್ರೀಯ ಚಿಂತನೆ ಸಿದ್ಧಗಂಗೆಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದೆ.

ಧಾರ್ಮಿಕ ಕೇಂದ್ರವಾಗಿ, ಶಿಕ್ಷಣಾರ್ಥಿಗಳ ಗುರುಕುಲವಾಗಿ, ನಿಶ್ಶಕ್ತರಿಗೆ ಆಶ್ರಯ ತಾಣವಾಗಿರುವ ಈ ಕ್ಷೇತ್ರದಲ್ಲಿ ಶ್ರೀ ಗೋಸಲ ಸಿದ್ಧೇಶ್ವರರು ನೆಲೆಸಿ ಆತ್ಮ ಕಲ್ಯಾಣ ಹಾಗೂ ಜನಕಲ್ಯಾಣಕ್ಕಾಗಿ ತಪೋನಿರತರಾಗಿದ್ದರಂತೆ. ಶಿವಯೋಗಿಗಳ ಪವಿತ್ರ ಭೂಮಿ ಎಂದೇ ಇಂದು ಸಿದ್ಧಗಂಗೆಯನ್ನು ಗುರುತಿಸಲಾಗುತ್ತದೆ.

ಈ ಕ್ಷೇತ್ರ ಜಾತಿ ಮತಗಳ ಎಲ್ಲೆಯನ್ನು ಮೀರಿದೆ. ಮನುಷ್ಯರೆಂದು ಕರೆಸಿಕೊಳ್ಳಲು ಅರ್ಹನಾದ ವ್ಯಕ್ತಿಗೆ ಶ್ರೀಮಠದಲ್ಲಿ ಮುಕ್ತ ಅವಕಾಶ ಇದೆ. 15ನೇ ಶತಮಾನದಿಂದಲೂ ಹಾಗೂ ಅದಕ್ಕೂ ಮುಂಚಿನಿಂದಲೂ ಇಲ್ಲಿ ಸಿದ್ಧಪುರುಷರು ತಮ್ಮ ತಪೋಬಲದಿಂದ ಜನಕಲ್ಯಾಣದಲ್ಲಿ ನಿರತರಾಗಿದ್ದರು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ.

ಗುಹೆಗಳ ತಾಣ : ಸಿದ್ಧಗಂಗಾ ಕ್ಷೇತ್ರದ ಬೆಟ್ಟ ಪ್ರದೇಶದಲ್ಲಿರುವ ಗುಹೆಗಳಲ್ಲಿ ಸಿದ್ಧಪುರುಷರು ತಪೋನಿರತರಾಗಿದ್ದರಂತೆ. ಹೀಗಾಗೇ ಇದು ಒಂದು ಪವಿತ್ರ ಸ್ಥಳ. ಮಹಾಮಹಿಮರೆನಿಸಿದ ಸಿದ್ಧಲಿಂಗೇಶ್ವರರು, ಅಟವೀಶ್ವರರು, ನಂಜುಡಸ್ವಾಮಿಗಳು ಇಲ್ಲಿ ತಮ್ಮ ತಪಶ್ಶಕ್ತಿಯ ದೀಪ ಬೆಳಗಿದ್ದಾರೆ.

ಈ ಪರಂಪರೆಯಲ್ಲಿ ಬಂದ ಉದ್ಧಾನ ಸ್ವಾಮಿಗಳು ಮಠದ ಕೀರ್ತಿಗೆ ಕಾರಣರಾದರೆ, ಅವರ ಉತ್ತರಾಧಿಕಾರಿಗಳಾಗಿ 3-3-1930ರಲ್ಲಿ ವಿರಕ್ತಾಶ್ರಮ ಸ್ವೀಕರಿಸಿ ಪೀಠವನ್ನಲಂಕರಿಸಿದ ಡಾ. ಶಿವಕುಮಾರ ಸ್ವಾಮಿಗಳು ವಿದ್ಯೆ ಇಲ್ಲದ ಮನುಷ್ಯ ಪಶುವಿಗೆ ಸಮಾನ ಎಂಬುದನ್ನು ಅರಿತು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಕಾಯಕದಲ್ಲಿ ನಿರತರಾದರು. ಇದರ ಫಲವಾಗಿ ಇಂದು ಸಿದ್ಧಗಂಗೆ ಒಂದು ಜ್ಞಾನ ದೇಗುಲವಾಗಿದೆ. ವಿದ್ಯಾಸಂಸ್ಥೆಗಳ ಆಗರವಾಗಿದೆ. ಸಿದ್ಧಗಂಗೆಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿದ್ದಾರೆ.

ಉಚಿತ ಊಟ -ವಸತಿ : ಶಿಕ್ಷಣಾರ್ಥಿಗಳಿಗೆ ಇಲ್ಲಿ ಉಚಿತ ಊಟ, ವಸತಿಯ ವ್ಯವಸ್ಥೆ ಅವ್ಯಾಹತವಾಗಿ ಒದಗುತ್ತಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಇಲ್ಲಿ ಸಂಸ್ಕೃತ ಕಲಿಸಿಕೊಡಲಾಗುತ್ತದೆ. 20ನೇ ಶತಮಾನದ 20ರ ದಶಕದಲ್ಲಿ ಕೇವಲ 40 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಿದ್ದ ಕ್ಷೇತ್ರದ ವಿದ್ಯಾರ್ಥಿ ನಿಲಯದಲ್ಲಿ ಇವತ್ತು 7500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಸರ್ವಧರ್ಮ ಸಮನ್ವಯ ಕ್ಷೇತ್ರ : ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ಈ ತಾಣದಲ್ಲಿ ಕೇವಲ ವೀರಶೈವ ಧರ್ಮದವರಷ್ಟೇ ಅಲ್ಲದೆ ವಿವಿಧ 64 ಕೋಮಿನ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 990 ಕುರುಬ ಜನಾಂಗದ ಹಾಗೂ 98 ಮುಸ್ಲಿಂ ಜನಾಂಗದ ವಿದ್ಯಾರ್ಥಿಗಳೂ ಇದ್ದಾರೆ. ಆಂಧ್ರಪ್ರದೇಶದ ಹಿಂದೂಪುರದಲ್ಲಿ ನೂರರಿಂದ ನೂರೈವತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ನೀಡುವ ಕಾಣಿಕೆಯಿಂದಲೇ ಈ ಸತ್ಕಾರ್ಯ ನಡೆಯುತ್ತಾ ಬಂದಿದೆ. ಶಿಕ್ಷಣ ಸೇವೆಯನ್ನೇ ಪ್ರಧಾನವಾಗಿಟ್ಟುಕೊಂಡ ಭಾರತದ ಏಕೈಕ ಮಠ ಸಿದ್ಧಗಂಗೆ ಎಂದರೂ ತಪ್ಪಲ್ಲ.

ಆರದ ಒಲೆ : ನೂರು ವರ್ಷಗಳ ಹಿಂದೆ ಇಲ್ಲಿನ ಪಾಕಶಾಲೆಯಲ್ಲಿ ಅನ್ನದಾಸೋಹಕ್ಕಾಗಿ ಹಚ್ಚಿದ ಒಲೆ ಇಂದೂ ಆರಿಲ್ಲ ಎಂದರೆ, ಇಲ್ಲಿನ ಅನ್ನದಾಸೋಹದ ಪರಿ ಅರ್ಥವಾದೀತು. ಇಂದು ಇಲ್ಲಿ ಏಕ ಕಾಲದಲ್ಲಿ 3000 ಮಂದಿ ಊಟ ಮಾಡಬಹುದಾದಷ್ಟು ದೊಡ್ಡ ಸುಸಜ್ಜಿತ ಪ್ರಸಾದ ನಿಲಯವಿದೆ. ಅಂದಿನ ರಾಷ್ಟ್ರಪತಿ ಶಂಕರದಯಾಳ ಶರ್ಮರು ಉದ್ಘಟಿಸಿದ ಬೃಹತ್‌ಭವ್ಯ ವಿದ್ಯಾರ್ಥಿ ನಿಲಯವೂ ಇದೆ. ಈ ವಿದ್ಯಾರ್ಥಿ ನಿಲಯದಲ್ಲಿ ಇನ್ನೂರು ಕೊಠಡಿಗಳಿವೆ. ಈ ಕೊಠಡಿಗಳಲ್ಲಿ 2500 ವಿದ್ಯಾರ್ಥಿಗಳಿದ್ದು, ಇವರಿಗೆ ಉಚಿತ, ಊಟ, ವಸತಿ ಕಲ್ಪಿಸಲಾಗಿದೆ.

ಶಿವಕುಮಾರ ಸ್ವಾಮಿಗಳ ಸಾಧನೆ : 1917ರಲ್ಲಿ ಆರಂಭಗೊಂಡ ವಿದ್ಯಾಶಾಲೆ 1937ರ ಹೊತ್ತಿಗೆ ಕಾಲೇಜು ಹಂತಕ್ಕೆ ಏರಿತು. ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ನೀಡಿದ ಕೀರ್ತಿ ಈ ಕ್ಷೇತ್ರಕ್ಕೆ ಸಲ್ಲುತ್ತದೆ. ಈ ಎಲ್ಲ ಸಾಧನೆಗಳ ರೂವಾರಿ ಡಾ. ಶಿವಕುಮಾರ ಸ್ವಾಮಿಗಳೆ. ಇವರ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತು.

ತಾಂತ್ರಿಕ ಶಿಕ್ಷಣ : ಯಾವುದೇ ರಾಷ್ಟ್ರ ಪ್ರಗತಿಯ ಪಥದಲ್ಲಿ ಸಾಗಲು ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಅನಿವಾರ್ಯ ಎಂಬುದನ್ನು ಸಾರಿದ ಶ್ರೀಗಳು ಕೇವಲ ಸಾಂಪ್ರದಾಯಿಕ ಶಿಕ್ಷಣದ ಜತೆ ವೃತ್ತಿ ಶಿಕ್ಷಣವನ್ನೂ ಆರಂಭಿಸಿದರು. ಇದರ ಫಲವಾಗಿ 1963ರಲ್ಲೇ ಇಲ್ಲಿ ತಾಂತ್ರಿಕ ಕಾಲೇಜು ಆರಂಭವಾಯಿತು. ಇಂದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೂ ಸೇರಿದಂತೆ, ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ.

ಸಾರ್ವಜನಿಕ ಜಾಗೃತಿ : ಗ್ರಾಮಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವಷ್ಟೇ ಅಲ್ಲದೆ ಜನತೆಯಲ್ಲಿ ಆಧುನಿಕ ಕೃಷಿ ತಾಂತ್ರಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲೂ ಶ್ರೀಮಠ ನಿರತವಾಗಿದೆ. ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ಜರುಗುವ ಜಾತ್ರೆಯ ಸಮಯದಲ್ಲಿ ಇಲ್ಲಿ ಜಾನುವಾರು ಮೇಳ, ರಾಜ್ಯಮಟ್ಟದ ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ರಿಯಾಯಿತ ದರದಲ್ಲಿ ಮಾರಾಟ, ಅತ್ಯಾಧುನಿಕ ಕೃಷಿ ಸಾಧನಗಳ ಪ್ರದರ್ಶನ, ಕೈಗಾರಿಕಾ ಪ್ರದರ್ಶನ, ಪ್ರಾತ್ಯಕ್ಷಿಕೆಯೇ ಮೊದಲಾದ ಪ್ರದರ್ಶನಗಳು ನಡೆಯುತ್ತವೆ. ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಅಭಿವೃದ್ಧಿ ಇಲಾಖೆಗಳೂ ಪಾಲ್ಗೊಳ್ಳುತ್ತವೆ.

ಜಾತ್ರೆ : ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಜಾನುವಾರು ಮೇಳದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದಿಂದಲೂ ಜಾನುವಾರುಗಳು ಆಗಮಿಸುತ್ತವೆ. ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರುವ ದನಕರುಗಳನ್ನು ಇಲ್ಲಿ ಜನ ಕೊಳ್ಳುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ.

ಜಾತ್ರೆಯ ಅಂಗವಾಗಿ ನಡೆಯುವ ರಥೋತ್ಸವ ನೋಡಲು,ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಕರ್ನಾಟಕ, ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಎಲ್ಲ ಭಕ್ತರಿಗೂ ಜಾತ್ರೆಯ ಸಂದರ್ಭದಲ್ಲಿ (10 ದಿನಗಳ ಕಾಲ) ಉಚಿತ ಊಟ ಮತ್ತು ವಸತಿಯನ್ನು ಶ್ರೀಮಠ ಕಲ್ಪಿಸುತ್ತದೆ. 2002ನೇ ಇಸವಿಯ ಸಿದ್ಧಗಂಗೇ ಜಾತ್ರೆ ಮಾರ್ಚ್‌ 1ರಿಂದ 15ರವರೆಗೆ ನಡೆಯಲಿದೆ.

English summary
Sidhagange, A piligrimage center which believes in work culture
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X